
ಬಾಗಲಕೋಟೆ, 02 ನವೆಂಬರ್ (ಹಿ.ಸ.)
ಮುಧೋಳ ತಾಲೂಕಿನ ಶಿರೋಳ ಗ್ರಾಮ ಪಂಚಾಯತಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್ ಅವರು ಭೇಟಿ ನೀಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಹಾಗೂ ಜನಪರ ಚಟುವಟಿಕೆಗಳನ್ನು ಪರಿಶೀಲಿಸಿದರು.
ಭೇಟಿಯ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ವಹಿಸಲಾಗುತ್ತಿರುವ ವಿವಿಧ ಕಡತಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದ ಅವರು, ಪಂಚಾಯತಿಯ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರಿ ಯೋಜನೆಗಳ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ಕಾರ್ಯನಿರ್ವಹಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಸರ್ಕಾರಿ ಮಾದರಿ ಶಾಲೆಗೆ ಭೇಟಿ
ನಂತರ ಶಿರೋಳ ಗ್ರಾಮದ ಸರ್ಕಾರಿ ಮಾದರಿ ಶಾಲೆಗೆ ಭೇಟಿ ನೀಡಿದ ಗೋಪಾಲ್ ಅವರು ಶಾಲೆಯ ಪ್ರತಿಯೊಂದು ತರಗತಿ ಕೊಠಡಿಗೂ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ, ವಿದ್ಯಾಭ್ಯಾಸದ ಗುಣಮಟ್ಟ, ಶಾಲೆಯಲ್ಲಿ ದೊರೆಯುತ್ತಿರುವ ಮೂಲಭೂತ ಸೌಲಭ್ಯಗಳು ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.
ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಅವರು, ಶಾಲೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಹಾಗೂ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸುವಂತೆ ಪ್ರೋತ್ಸಾಹಿಸಿದರು. ಬಳಿಕ ಶಾಲೆಯ ಗ್ರಂಥಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವ ಕುರಿತು ಸಂಬಂಧಿಸಿದವರೊಂದಿಗೆ ಚರ್ಚಿಸಿದರು
ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಪರಿಶೀಲನೆ
ಇದಾದ ಬಳಿಕ ಶಿರೋಳ ವ್ಯಾಪ್ತಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಗೆ ಯಾವುದೇ ರೀತಿಯ ನಿರ್ಲಕ್ಷ್ಯವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಮಕ್ಕಳಿಗೆ ವಿತರಿಸಲಾಗುತ್ತಿರುವ ಆಹಾರವನ್ನು ಉತ್ತಮ ಗುಣಮಟ್ಟದ, ಪೌಷ್ಟಿಕ ಹಾಗೂ ಸಂಪೂರ್ಣ ಶುಚಿತ್ವದೊಂದಿಗೆ ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಅಂಗನವಾಡಿಯಲ್ಲಿನ ಮಕ್ಕಳ ಆರೈಕೆ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.
ಸ್ವಸಹಾಯ ಸಂಘದ ಮಹಿಳೆಯರಿಗೆ ಪ್ರೋತ್ಸಾಹ
ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡು ಉತ್ತಮ ಜೀವನ ನಡೆಸುತ್ತಿರುವ ಮಹಿಳೆಯರ ಚಟುವಟಿಕೆಗಳಿಗೂ ಜಿಪಂ ಸಿಇಒ ಗೋಪಾಲ ಭೇಟಿ ನೀಡಿದರು.
ಸಂಜೀವಿನಿ ಯೋಜನೆಯಡಿ ಮಹಿಳೆಯರು ನಡೆಸುತ್ತಿರುವ ಹೋಟೆಲ್ ಹಾಗೂ ಬಳೆ ವ್ಯಾಪಾರದ ಅಂಗಡಿಗೆ ಭೇಟಿ ನೀಡಿ, ಅವರ ಉದ್ಯಮದ ಕುರಿತು ಮಾಹಿತಿ ಪಡೆದುಕೊಂಡರು. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಇದೇ ರೀತಿಯಲ್ಲಿ ಇನ್ನಷ್ಟು ಮಹಿಳೆಯರು ಸ್ವಯಂ ಉದ್ಯೋಗದತ್ತ ಮುಂದಾಗಬೇಕು ಎಂದು ಪ್ರೋತ್ಸಾಹಿಸಿದರು.
ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಭಾಗಿ
ನಂತರ ಶಿರೋಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ರಾಘವೇಂದ್ರ ಕಲ್ಲಿಮನಿ ಅವರು ಭಾಗವಹಿಸಿದರು. ಒಕ್ಕೂಟದ ಕಾರ್ಯಚಟುವಟಿಕೆಗಳು, ಮಹಿಳಾ ಸ್ವಸಹಾಯ ಸಂಘಗಳ ಪ್ರಗತಿ ಹಾಗೂ ಸದಸ್ಯರು ಕೈಗೊಂಡಿರುವ ವಿವಿಧ ಸ್ವಾವಲಂಬನಾ ಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು.
ಗ್ರಾಮೀಣಾಭಿವೃದ್ಧಿಯೊಂದಿಗೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೂ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಪಂರಾ), ಸಿಡಿಪಿಒ ಅಧಿಕಾರಿಗಳು, ಎನ್ಆರ್ಎಲ್ಎಂ ಸಿಬ್ಬಂದಿ, ಶಿರೋಳ ಗ್ರಾಮ ಪಂಚಾಯತಿಯ ಪಿಡಿಒ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande