ತಮ್ಮ ಸಾರಥ್ಯದ ಸಕ್ಕರೆ ಕಾರ್ಖಾನೆಯಲ್ಲಿ ರೈತರ ಬಾಕಿ ಹಣ ನೀಡಿ ಬದ್ಧತೆ ಸಾಬೀತುಪಡಿಸಲಿ”
ವಿಜಯಪುರ, 02 ನವೆಂಬರ್ (ಹಿ.ಸ.) ಕಬ್ಬು ಬೆಳೆಗಾರರ ಹೋರಾಟದ ಕುರಿತು ಈ ಹಿಂದೆ ಅಗೌರವದಿಂದ ಮಾತನಾಡಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಇದೀಗ ರೈತಪರ ಕಾಳಜಿ ನೆನಪಾಗಿರುವುದು ರಾಜಕೀಯ ನಾಟಕದಂತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಟೀಕಿಸಿದ
ಯತ್ನಾಳ್ ಗೆ ಸವಾಲು


ವಿಜಯಪುರ, 02 ನವೆಂಬರ್ (ಹಿ.ಸ.)

ಕಬ್ಬು ಬೆಳೆಗಾರರ ಹೋರಾಟದ ಕುರಿತು ಈ ಹಿಂದೆ ಅಗೌರವದಿಂದ ಮಾತನಾಡಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಇದೀಗ ರೈತಪರ ಕಾಳಜಿ ನೆನಪಾಗಿರುವುದು ರಾಜಕೀಯ ನಾಟಕದಂತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಬ್ಬು ಬೆಳೆಗಾರರ ಹೋರಾಟದ ಸಂದರ್ಭದಲ್ಲಿ ರೈತರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದ ಯತ್ನಾಳರು, ‘ನೀವೇ ಕಾರ್ಖಾನೆ ನಡೆಸಿ’ ಎಂಬ ರೀತಿಯಲ್ಲಿ ದರ್ಪದ ಮಾತುಗಳನ್ನು ಆಡಿದ್ದರು. ಇದೀಗ ಅದೇ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವುದು ಅನುಕೂಲಸಿಂಧು ರಾಜಕಾರಣದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.

ಮೊದಲು ತಮ್ಮ ಜವಾಬ್ದಾರಿ ಅರಿತುಕೊಳ್ಳಲಿ

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂಬುದನ್ನು ಅರಿತುಕೊಳ್ಳಬೇಕು. ಆದರೆ, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ ಎಂದು ಯತ್ನಾಳರು ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಆರೋಪಗಳನ್ನು ಮಾಡುವ ಮೊದಲು ತಾವು ಹೊಂದಿರುವ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ರಜಪೂತ ಹೇಳಿದ್ದಾರೆ.

ರೈತರ ಸಮಸ್ಯೆಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕೇವಲ ವೇದಿಕೆಗಳ ಮೇಲೆ ಮಾತನಾಡುವುದಕ್ಕಿಂತ, ತಮ್ಮ ಸಾರಥ್ಯದ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಬೆಳೆಗಾರರಿಗೆ ನೀಡಬೇಕಾದ ಹಣವನ್ನು ಪಾವತಿಸಿ ತಮ್ಮ ಬದ್ಧತೆಯನ್ನು ಸಾಬೀತುಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

ಪ್ರಹ್ಲಾದ ಜೋಶಿ ವಿರುದ್ಧದ ಹೇಳಿಕೆಗೂ ಆಕ್ಷೇಪ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಬಗ್ಗೆಯೂ ಶಾಸಕ ಯತ್ನಾಳರು ಅಗೌರವದಿಂದ ಮಾತನಾಡಿರುವುದು ಸರಿಯಲ್ಲ ಎಂದು ರಜಪೂತ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನೀವು ತುಪ್ಪ ತಿನ್ನುವವರು, ರೈತರ ಮೂಗಿಗೆ ತುಪ್ಪ ಹಚ್ಚಬೇಡಿ’ ಎಂಬ ರೀತಿಯ ಪದಪ್ರಯೋಗಗಳನ್ನು ಮಾಡಿರುವುದು ರಾಜಕೀಯವಾಗಿ ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಅವರು ಹೇಳಿದ್ದಾರೆ.

ರೈತರ ಸಮಸ್ಯೆಗಳ ಕುರಿತು ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ದಾಖಲೆಗಳು ಮತ್ತು ವಾಸ್ತವಾಂಶಗಳ ಆಧಾರದ ಮೇಲೆ ಚರ್ಚಿಸಬೇಕು. ವೈಯಕ್ತಿಕ ಟೀಕೆಗಳು ಹಾಗೂ ಅವಹೇಳನಕಾರಿ ಪದಪ್ರಯೋಗಗಳಿಂದ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ ಎಂದು ರಜಪೂತ ಅಭಿಪ್ರಾಯಪಟ್ಟಿದ್ದಾರೆ.

ದೇವೇಗೌಡ, ಯಡಿಯೂರಪ್ಪ ಟೀಕೆಗೆ ವಿರೋಧ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೇಶ ಕಂಡ ಹಿರಿಯ ಹಾಗೂ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು. ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರನ್ನು ಗೌರವದಿಂದ ಕಾಣುತ್ತಾರೆ. ಇಂತಹ ಹಿರಿಯ ರಾಜಕಾರಣಿಯ ವಿರುದ್ಧವೂ ಯತ್ನಾಳರು ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ ಎಂದು ರಜಪೂತ ಹೇಳಿದ್ದಾರೆ.

ಅದೇ ರೀತಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಬಳಸಿ ಟೀಕೆ ಮಾಡಿರುವುದು ಖಂಡನೀಯ. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಹಿರಿಯ ನಾಯಕರಿಗೆ ಗೌರವ ನೀಡುವ ಸಂಪ್ರದಾಯವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಅನುಕೂಲಸಿಂಧು ರಾಜಕಾರಣ ಬಿಡಲಿ

ಶಾಸಕ ಯತ್ನಾಳರಿಗೆ ಟೀಕೆ ಮಾಡುವುದೇ ರಾಜಕಾರಣ ಎಂಬಂತಾಗಿದೆ. ಒಂದು ವಿಷಯದಲ್ಲಾದರೂ ಅವರು ನಿರಂತರವಾಗಿ ಹಾಗೂ ಬದ್ಧತೆಯಿಂದ ನಡೆದುಕೊಳ್ಳಬೇಕು. ಸಂದರ್ಭಕ್ಕೆ ಅನುಗುಣವಾಗಿ ನಿಲುವು ಬದಲಾಯಿಸುವುದು, ಅನುಕೂಲಸಿಂಧು ರಾಜಕಾರಣ ಮಾಡುವುದು ಹಾಗೂ ಹೋರಾಟದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಪ್ರಯತ್ನವನ್ನು ಕೈಬಿಡಬೇಕು ಎಂದು ಪರಶುರಾಮಸಿಂಗ್ ರಜಪೂತ ಒತ್ತಾಯಿಸಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆ ನಿಜವಾಗಿಯೂ ಮುಖ್ಯವಾಗಿದ್ದರೆ, ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಸೀಮಿತವಾಗದೆ ರೈತರ ಹಿತಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ರೈತರಿಗೆ ನೀಡಬೇಕಾದ ಹಣ, ಬೆಲೆ ಹಾಗೂ ಬಾಕಿ ಪಾವತಿ ಸೇರಿದಂತೆ ಎಲ್ಲ ವಿಚಾರಗಳಲ್ಲಿ ತಮ್ಮದೇ ಆದ ಜವಾಬ್ದಾರಿಯನ್ನು ಮೊದಲು ನಿಭಾಯಿಸಿ ನಂತರ ಇತರರ ವಿರುದ್ಧ ಆರೋಪ ಮಾಡಲಿ ಎಂದು ಅವರು ಹೇಳಿದ್ದಾರೆ.

ಯತ್ನಾಳರು ರೈತರ ಪರವಾಗಿ ಮಾತನಾಡುವುದಕ್ಕಿಂತ ಮೊದಲು ತಮ್ಮ ನೇತೃತ್ವದ ಸಕ್ಕರೆ ಕಾರ್ಖಾನೆಯ ಕಬ್ಬು ಬೆಳೆಗಾರರ ವಿಚಾರದಲ್ಲಿ ಸ್ಪಷ್ಟ ನಿಲುವು ಪ್ರಕಟಿಸಿ, ಬಾಕಿ ಹಣ ಪಾವತಿ ಸೇರಿದಂತೆ ರೈತಪರ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಅವರ ರೈತಪರ ಕಾಳಜಿ ನಿಜವೇ ಅಥವಾ ರಾಜಕೀಯ ಉದ್ದೇಶದ್ದೇ ಎಂಬುದು ಜನರಿಗೆ ಸ್ಪಷ್ಟವಾಗಲಿದೆ ಎಂದು ರಜಪೂತ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande