ವಿಜಯಪುರ ಪೋಲಿಸರಿಂದ ₹9.43 ಕೋಟಿ ಮೌಲ್ಯದ ಸ್ವತ್ತು, ಹಣ ಸಂತ್ರಸ್ತರಿಗೆ ಹಸ್ತಾಂತರ
ವಿಜಯಪುರ, 02 ನವೆಂಬರ್ (ಹಿ.ಸ.) ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಅಪರಾಧ ಮುಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನಿರಂತರವಾಗಿ ಹಲವು ಜನಸ್ನೇಹಿ ಹಾಗೂ ಅಪರಾಧ ತಡೆ ಕಾರ್ಯಾಚರಣೆಗಳನ್ನು ಕೈಗೊಂಡಿದೆ. ವಿವಿಧ ಕಳವು
9.43 ಕೋಟಿ ಮೌಲ್ಯದ ಸ್ವತ್ತು, ಹಣ ಸಂತ್ರಸ್ತರಿಗೆ


ವಿಜಯಪುರ, 02 ನವೆಂಬರ್ (ಹಿ.ಸ.)

ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಅಪರಾಧ ಮುಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ನಿರಂತರವಾಗಿ ಹಲವು ಜನಸ್ನೇಹಿ ಹಾಗೂ ಅಪರಾಧ ತಡೆ ಕಾರ್ಯಾಚರಣೆಗಳನ್ನು ಕೈಗೊಂಡಿದೆ. ವಿವಿಧ ಕಳವು ಮತ್ತು ಸ್ವತ್ತಿನ ಪ್ರಕರಣಗಳಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ನ್ಯಾಯಾಲಯದ ಆದೇಶದಂತೆ ಕಾನೂನುಬದ್ಧ ವಾರಸುದಾರರಿಗೆ ಹಿಂದಿರುಗಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.

ಇದೇ ವೇಳೆ ಸೈಬರ್ ವಂಚನೆಗೆ ಒಳಗಾದವರಿಗೆ ಕೋಟ್ಯಂತರ ರೂಪಾಯಿ ಹಣವನ್ನು ಮರುಪಾವತಿಸುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಐಪಿಎಸ್ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವತ್ತು ಪ್ರಕರಣಗಳ ತನಿಖೆ, ಆರೋಪಿಗಳ ಪತ್ತೆ ಹಾಗೂ ಕಳವುಗೈದ ಸ್ವತ್ತುಗಳ ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

115 ಸ್ವತ್ತಿನ ಪ್ರಕರಣಗಳಲ್ಲಿ ₹5.23 ಕೋಟಿ ಮೌಲ್ಯದ ವಸ್ತು ವಶ

2026ರ ಫೆಬ್ರುವರಿ 11ರಿಂದ ನವೆಂಬರ್ 1ರವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಸುಮಾರು 115 ಸ್ವತ್ತಿನ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ, ಅವರಿಂದ ಕಳವು ಮಾಡಲಾಗಿದ್ದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರು ವಶಪಡಿಸಿಕೊಂಡಿರುವ ಸ್ವತ್ತಿನಲ್ಲಿ 1.794 ಕೆಜಿ ಚಿನ್ನ, ಅಂದಾಜು ₹39.99 ಲಕ್ಷ, 8.919 ಕೆಜಿ ಬೆಳ್ಳಿ, ಅಂದಾಜು ₹21.08 ಲಕ್ಷ, ಸುಮಾರು ₹1.35 ಕೋಟಿ ನಗದು, 46 ದ್ವಿಚಕ್ರ ವಾಹನಗಳು ಅಂದಾಜು ₹21.12 ಲಕ್ಷ, 16 ನಾಲ್ಕುಚಕ್ರ ವಾಹನಗಳು ಅಂದಾಜು ₹1.26 ಕೋಟಿ ಮೌಲ್ಯದ್ದಾಗಿವೆ.

ಇದರ ಜೊತೆಗೆ ರೈತರ ಪಂಪ್ಸೆಟ್ಗಳು, ಬ್ಯಾಟರಿಗಳು, ಸುಮಾರು ನಾಲ್ಕು ಕ್ವಿಂಟಾಲ್ ಹತ್ತಿ ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಅಂದಾಜು ಮೌಲ್ಯ ಸುಮಾರು ₹3.35 ಲಕ್ಷ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಒಟ್ಟಾರೆ ವಿವಿಧ ಸ್ವತ್ತಿನ ಪ್ರಕರಣಗಳಲ್ಲಿ ಸುಮಾರು ₹5,23,66,285 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಸಂಬಂಧಪಟ್ಟ ದೂರುದಾರರು ಹಾಗೂ ಕಾನೂನುಬದ್ಧ ಮಾಲೀಕರಿಗೆ ಅವುಗಳನ್ನು ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗಿದೆ.

ಆರೋಪಿಗಳನ್ನು ಪತ್ತೆಹಚ್ಚಿ ಕಳವುಗೈದ ಸ್ವತ್ತು ಹಾಗೂ ನಗದನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಸೈಬರ್ ವಂಚನೆಗೆ ಒಳಗಾದವರಿಗೆ ₹4.19 ಕೋಟಿ ಮರುಪಾವತಿ

ಇತ್ತೀಚಿನ ದಿನಗಳಲ್ಲಿ ಯುಪಿಐ, ಕ್ಯೂಆರ್ ಕೋಡ್, ಡಿಜಿಟಲ್ ಅರೆಸ್ಟ್, ನಕಲಿ ಹೂಡಿಕೆ ಮತ್ತು ಷೇರು ಮಾರುಕಟ್ಟೆ, ಆನ್ಲೈನ್ ಟಾಸ್ಕ್ ಹಾಗೂ ಉದ್ಯೋಗ, ನಕಲಿ ಗ್ರಾಹಕ ಸೇವಾ ಕೇಂದ್ರಗಳು ಸೇರಿದಂತೆ ವಿವಿಧ ರೀತಿಯ ಸೈಬರ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಸೈಬರ್ ಅಪರಾಧಗಳ ವಿರುದ್ಧ ವಿಶೇಷ ಗಮನ ಹರಿಸಿದೆ.

ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸಿ ವ್ಯಕ್ತಿಗಳ ಹೆಸರಿನಲ್ಲಿ ವಂಚನೆ ಮಾಡುವುದು, ಒಟಿಪಿ ಕಳವು, ಸಿಮ್ ಸ್ವಾಪ್ ಸೇರಿದಂತೆ ಹಲವು ರೀತಿಯ ಸೈಬರ್ ಅಪರಾಧಗಳು ಸಾರ್ವಜನಿಕರಿಗೆ ಸವಾಲಾಗಿ ಪರಿಣಮಿಸಿವೆ.

ಅಕ್ಟೋಬರ್ ತಿಂಗಳನ್ನು Cyber Awareness Month ಆಗಿ ಪರಿಗಣಿಸಿ ಜಿಲ್ಲೆಯಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸೈಬರ್ ಅಪರಾಧಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿಜಯಪುರ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳು ಸೈಬರ್ ವಂಚನೆ ಪ್ರಕರಣಗಳ ತನಿಖೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಸುಮಾರು 20 ಸೈಬರ್ ವಂಚನೆ ಪ್ರಕರಣಗಳಲ್ಲಿ ಒಟ್ಟು ₹4,19,68,162 ಹಣವನ್ನು ಪತ್ತೆಹಚ್ಚಿ, ಸಂತ್ರಸ್ತರಿಗೆ ಮರುಪಾವತಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೈಬರ್ ವಂಚನೆಗೆ ಒಳಗಾದವರು ವಿಳಂಬ ಮಾಡದೆ ತಕ್ಷಣವೇ 1930 ಸೈಬರ್ ಕ್ರೈಂ ಸಹಾಯವಾಣಿಗೆ ಕರೆ ಮಾಡಬೇಕು ಅಥವಾ cybercrime.gov.in ವೆಬ್ಸೈಟ್ನಲ್ಲಿ ದೂರು ದಾಖಲಿಸಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಒಟ್ಟು ₹9.43 ಕೋಟಿ ಮೌಲ್ಯದ ಸ್ವತ್ತು ಸಂತ್ರಸ್ತರಿಗೆ ಮರಳಿಸುವಲ್ಲಿ ಯಶಸ್ಸು

ಸ್ವತ್ತಿನ ಪ್ರಕರಣಗಳಲ್ಲಿ ವಶಪಡಿಸಿಕೊಂಡ ₹5,23,66,285 ಹಾಗೂ ಸೈಬರ್ ವಂಚನೆ ಪ್ರಕರಣಗಳಲ್ಲಿ ಪತ್ತೆಹಚ್ಚಿ ಮರುಪಾವತಿಸಿದ ₹4,19,68,162 ಸೇರಿ ಒಟ್ಟಾರೆ ಸುಮಾರು ₹9,43,34,447 ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ಇತರೆ ಸ್ವತ್ತುಗಳನ್ನು ಸಂತ್ರಸ್ತರಿಗೆ ಮರಳಿ ದೊರಕಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.

ಅಪರಾಧ ನಡೆದ ನಂತರ ಆರೋಪಿಗಳನ್ನು ಪತ್ತೆಹಚ್ಚುವುದಷ್ಟೇ ಅಲ್ಲದೆ, ಕಳವು ಅಥವಾ ವಂಚನೆಯಿಂದ ನಷ್ಟ ಅನುಭವಿಸಿದ ಸಂತ್ರಸ್ತರಿಗೆ ಅವರ ಹಣ ಮತ್ತು ಸ್ವತ್ತುಗಳನ್ನು ಮರಳಿ ದೊರಕಿಸುವುದು ಪೊಲೀಸ್ ಇಲಾಖೆಯ ಜನಸ್ನೇಹಿ ಕಾರ್ಯವೈಖರಿಯ ಪ್ರಮುಖ ಭಾಗವಾಗಿದೆ ಎಂದು ಇಲಾಖೆ ತಿಳಿಸಿದೆ.

ಶಾಲಾ-ಕಾಲೇಜುಗಳಲ್ಲಿ ದೂರು ಪೆಟ್ಟಿಗೆ ಅಳವಡಿಕೆ

ಯುವಜನರನ್ನು ಮಾದಕ ವ್ಯಸನ, ಅಪರಾಧ ಚಟುವಟಿಕೆಗಳು ಹಾಗೂ ಇತರೆ ಸಾಮಾಜಿಕ ಸಮಸ್ಯೆಗಳಿಂದ ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ Operation RISE ಹಾಗೂ #BedaBro ಅಭಿಯಾನದ ಭಾಗವಾಗಿ ವಿಜಯಪುರ ಜಿಲ್ಲೆಯಲ್ಲಿಯೂ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದೆ.

ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಪ್ರೌಢಶಾಲೆಗಳು, ಪಿಯು ಕಾಲೇಜುಗಳು, ಪದವಿ ಕಾಲೇಜುಗಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಸತಿನಿಲಯಗಳಲ್ಲಿ ದೂರು ಪೆಟ್ಟಿಗೆ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ದೂರು ಪೆಟ್ಟಿಗೆಗಳ ಮೂಲಕ ವಿದ್ಯಾರ್ಥಿಗಳು ಯಾವುದೇ ಭಯ ಅಥವಾ ಹಿಂಜರಿಕೆಯಿಲ್ಲದೆ ತಮ್ಮ ಸಮಸ್ಯೆಗಳನ್ನು ಗೌಪ್ಯವಾಗಿ ಪೊಲೀಸರ ಗಮನಕ್ಕೆ ತರಬಹುದಾಗಿದೆ.

ದೂರು ಪೆಟ್ಟಿಗೆಯ ಮೂಲಕ ಮುಖ್ಯವಾಗಿ ಮಾದಕ ದ್ರವ್ಯಗಳ ಬಳಕೆ, ಮಾರಾಟ ಮತ್ತು ಸಾಗಣೆ, ಮಾದಕ ವ್ಯಸನಕ್ಕೆ ಸಂಬಂಧಿಸಿದ ಚಟುವಟಿಕೆಗಳು, ರ್ಯಾಗಿಂಗ್, ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ, ಸೈಬರ್ ಅಪರಾಧಗಳು ಹಾಗೂ ಇತರೆ ಸಂಘಟಿತ ಅಪರಾಧ ಚಟುವಟಿಕೆಗಳ ಕುರಿತು ಮಾಹಿತಿ ಅಥವಾ ದೂರು ನೀಡಬಹುದಾಗಿದೆ.

ದೂರುದಾರರ ಮಾಹಿತಿ ಗೌಪ್ಯ

ವಿದ್ಯಾರ್ಥಿಗಳು ನೀಡುವ ದೂರುಗಳಲ್ಲಿನ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಬೀಟ್ ಸಿಬ್ಬಂದಿ ಪ್ರತಿ 15 ದಿನಗಳಿಗೊಮ್ಮೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರನ್ನು ಭೇಟಿ ಮಾಡಿ ದೂರು ಪೆಟ್ಟಿಗೆಗಳನ್ನು ಪರಿಶೀಲಿಸಲಿದ್ದಾರೆ.

ದೂರುಗಳ ಸ್ವರೂಪಕ್ಕೆ ಅನುಗುಣವಾಗಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಲು ಸಾಧ್ಯವಾಗದ ಸಂದರ್ಭದಲ್ಲಿಯೂ ಸುರಕ್ಷಿತವಾಗಿ ಪೊಲೀಸರ ಗಮನಕ್ಕೆ ತರಲು ಅವಕಾಶ ದೊರೆಯಲಿದೆ.

ಸಾರ್ವಜನಿಕರು ಈ ಸಹಾಯವಾಣಿಗಳನ್ನು ಬಳಸಿಕೊಳ್ಳಿ

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಮತ್ತು ವಿವಿಧ ಸಮಸ್ಯೆಗಳ ಕುರಿತು ಕೆಳಗಿನ ಸಹಾಯವಾಣಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಐಪಿಎಸ್ ತಿಳಿಸಿದ್ದಾರೆ.

112 – ERSS: ತುರ್ತು ಪೊಲೀಸ್ ನೆರವು

181 – Women Helpline: ಮಹಿಳಾ ಸಹಾಯವಾಣಿ

1098 – Childline: ಮಕ್ಕಳ ಸಹಾಯವಾಣಿ

1930 – Cyber Crime Helpline: ಸೈಬರ್ ವಂಚನೆ ದೂರು

1933 – Narcotics Helpline: ಮಾದಕ ದ್ರವ್ಯ ಸಂಬಂಧಿತ ಮಾಹಿತಿ/ದೂರು

ಜಿಲ್ಲಾ ನಿಯಂತ್ರಣ ಕೊಠಡಿ: 08352-250844

ವಾಟ್ಸ್ಆ್ಯಪ್: 9480804200

KSP App: ಕರ್ನಾಟಕ ರಾಜ್ಯ ಪೊಲೀಸ್ ಆ್ಯಪ್ ಮೂಲಕವೂ ದೂರು/ಮಾಹಿತಿ ನೀಡಬಹುದಾಗಿದೆ.

ಜಿಲ್ಲೆಯಲ್ಲಿ ಅಪರಾಧ ತಡೆ, ಸೈಬರ್ ಸುರಕ್ಷತೆ, ಮಾದಕ ದ್ರವ್ಯ ನಿಯಂತ್ರಣ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳಿಗೆ ಸಾರ್ವಜನಿಕರಿಂದ ಸಹಕಾರ ಅಗತ್ಯವಾಗಿದೆ. ಯಾವುದೇ ಅಪರಾಧ ಅಥವಾ ಅನುಮಾನಾಸ್ಪದ ಚಟುವಟಿಕೆಗಳ ಮಾಹಿತಿ ದೊರೆತಲ್ಲಿ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande