
ನವದೆಹಲಿ, 02 ನವೆಂಬರ್ (ಹಿ.ಸ.):
ವಿಕಸಿತ ಭಾರತ–ಉದ್ಯೋಗ ಮತ್ತು ಜೀವನೋಪಾಯ ಅಭಿಯಾನ (ಗ್ರಾಮೀಣ) ಕಾಯ್ದೆಯಡಿ ದೂರುಗಳ ಪರಿಹಾರಕ್ಕಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು 2026ರ ದೂರುಗಳ ಪರಿಹಾರ ನಿಯಮಗಳನ್ನು ಅಧಿಕೃತವಾಗಿ ಅಧಿಸೂಚಿಸಿದೆ. ಹೊಸ ನಿಯಮದ ಪ್ರಕಾರ, ಗ್ರಾಮೀಣ ಉದ್ಯೋಗ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ದೂರುಗಳನ್ನು 15 ದಿನಗಳೊಳಗೆ ಇತ್ಯರ್ಥಪಡಿಸುವುದು ಕಡ್ಡಾಯವಾಗಿದೆ.
ಹೊಸ ನಿಯಮದ ಅನ್ವಯ ರಾಜ್ಯ ಸರ್ಕಾರಗಳು ಗ್ರಾಮ ಪಂಚಾಯಿತಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೂರುಗಳ ಪರಿಹಾರ ಅಧಿಕಾರಿಗಳನ್ನು ನೇಮಿಸಲಿವೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಸಂಪೂರ್ಣ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.
ಸಾರ್ವಜನಿಕರು ತಮ್ಮ ದೂರುಗಳನ್ನು ಖುದ್ದಾಗಿ, ಸ್ವೀಕೃತಿ ದೃಢೀಕರಣ ಹೊಂದಿರುವ ನೋಂದಾಯಿತ ಅಂಚೆ ಮೂಲಕ, ನಿಗದಿತ ಡಿಜಿಟಲ್ ವ್ಯವಸ್ಥೆ ಅಥವಾ ದೂರವಾಣಿ ಸಹಾಯವಾಣಿ ಮೂಲಕ ಸಲ್ಲಿಸಬಹುದು. ನೇರವಾಗಿ ಅಥವಾ ಅಂಚೆ ಮೂಲಕ ಸ್ವೀಕರಿಸಿದ ದೂರುಗಳನ್ನು ಅದೇ ದಿನ ಅಥವಾ ಮುಂದಿನ ಕೆಲಸದ ದಿನದೊಳಗೆ ಅಂತರ್ಜಾಲ ತಾಣದಲ್ಲಿ ದಾಖಲಿಸುವುದು ಕಡ್ಡಾಯವಾಗಿದೆ. ದೂರು ದಾಖಲಾದ ತಕ್ಷಣ ದೂರುದಾರರಿಗೆ ಡಿಜಿಟಲ್ ಸ್ವೀಕೃತಿ ಪತ್ರ ನೀಡಲಾಗುತ್ತದೆ.
ದೂರು ಪರಿಹಾರ ಅಧಿಕಾರಿಗಳು ಏಳು ಕೆಲಸದ ದಿನಗಳೊಳಗೆ ದೂರಿನ ವಿಚಾರಣೆ ಪೂರ್ಣಗೊಳಿಸಬೇಕು. ಒಟ್ಟು 15 ದಿನಗಳೊಳಗೆ ಅಂತಿಮ ತೀರ್ಮಾನ ಕೈಗೊಳ್ಳುವುದು ಕಡ್ಡಾಯವಾಗಿದೆ. ಅಗತ್ಯವಿದ್ದಲ್ಲಿ ದೂರುದಾರರಿಗೆ ತಮ್ಮ ವಾದ ಮಂಡಿಸಲು ಅವಕಾಶ ಕಲ್ಪಿಸಲಾಗುತ್ತದೆ. ದೂರು ದಾಖಲಿಸುವುದರಿಂದ ಹಿಡಿದು ಇತ್ಯರ್ಥಪಡಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.
ನಿಗದಿತ 15 ದಿನಗಳೊಳಗೆ ದೂರು ಇತ್ಯರ್ಥವಾಗದಿದ್ದರೆ, ಅಂತಹ ದೂರು ಸ್ವಯಂಚಾಲಿತವಾಗಿ ರಾಜ್ಯ ಸರ್ಕಾರದ ವ್ಯವಸ್ಥೆಯಡಿ ಮುಂದಿನ ಹಂತದ ಉನ್ನತ ಅಧಿಕಾರಿಗೆ ವರ್ಗಾವಣೆಯಾಗಲಿದೆ. ಕಾಯ್ದೆಯ ಮೊದಲ ಅನುಸೂಚಿಯ ಪ್ರಕಾರ, ಹೊರಡಿಸಲಾದ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಹಾಗೂ ಅದರ ಇತ್ಯರ್ಥಕ್ಕೂ ಅವಕಾಶ ಕಲ್ಪಿಸಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ವ್ಯವಸ್ಥಿತ, ಪಾರದರ್ಶಕ ಮತ್ತು ಕಾಲಮಿತಿಯೊಳಗಿನ ಪರಿಹಾರ ಒದಗಿಸುವುದು ಈ ನಿಯಮಗಳ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಕುಟುಂಬಗಳ ಹಕ್ಕುಗಳ ರಕ್ಷಣೆ ಮತ್ತು ಆಡಳಿತದಲ್ಲಿ ಹೊಣೆಗಾರಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಅಧಿಸೂಚನೆ ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.