
ಕಲಬುರಗಿ, 02 ನವೆಂಬರ್ (ಹಿ.ಸ.):
ಚುನಾಯಿತ ಕಾಂಗ್ರೆಸ್ ಸರ್ಕಾರ ಜನಹಿತದ ಕೆಲಸಗಳಿಗೆ ಆದ್ಯತೆ ನೀಡಬೇಕು. ಆದರೆ ಸ್ವಪಕ್ಷದವರನ್ನು ಹಾಗೂ ವಿರೋಧ ಪಕ್ಷದವರನ್ನು ಮಣಿಸಲು ಅನೈತಿಕ ಮಾರ್ಗಗಳನ್ನು ಅನುಸರಿಸುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪವಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದರು.
ಈ ಹಿಂದೆ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಅವರೇ ಕರ್ನಾಟಕ ಸಿಡಿ ಫ್ಯಾಕ್ಟರಿಯಾಗುತ್ತಿದೆ ಎಂದು ಹೇಳಿದ್ದರು. ತಮ್ಮದೇ ಪಕ್ಷದ ಶಾಸಕರ ಮೇಲೆ ಸ್ಟಿಂಗ್ ಆಪರೇಷನ್ ನಡೆದಿರುವ ಆರೋಪ ಕೇಳಿಬಂದಾಗಲೂ ಸರ್ಕಾರ ತನಿಖೆ ನಡೆಸಲು ಹಿಂದೇಟು ಹಾಕಿತ್ತು ಎಂದು ಸುನಿಲ್ ಕುಮಾರ್ ಆರೋಪಿಸಿದರು.
ಸ್ಟಿಂಗ್ ಆಪರೇಷನ್ ಪ್ರಕರಣದ ಸತ್ಯಾಂಶ ಇವತ್ತಲ್ಲ ನಾಳೆ ಹೊರಬರಲೇಬೇಕು. ಈ ಕಾರ್ಯಾಚರಣೆಯ ಮೂಲ ಯಾರು? ಇದರ ಹಿಂದೆ ಯಾರ ಕೈವಾಡವಿದೆ? ಇಂತಹ ಚಟುವಟಿಕೆಗಳನ್ನು ಯಾರು ನಡೆಸುತ್ತಿದ್ದಾರೆ ಎಂಬುದನ್ನು ತನಿಖೆಯ ಮೂಲಕ ಪತ್ತೆಹಚ್ಚಬೇಕು. ಆರೋಪಗಳಲ್ಲಿ ಸತ್ಯಾಂಶವಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವಂತೆ ನಾವು ಹೇಳುತ್ತಿಲ್ಲ. ಸರ್ಕಾರದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ಪಾತ್ರವನ್ನು ಬಹಿರಂಗಪಡಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯವನ್ನು ಜನರ ಮುಂದೆ ಇಡಬೇಕು ಎಂದು ಒತ್ತಾಯಿಸಿದರು.
ಚುನಾವಣೆಯಲ್ಲಿ ಸೋಲು-ಗೆಲುವು ಜನರ ತೀರ್ಮಾನದ ಮೂಲಕ ನಿರ್ಧಾರವಾಗಬೇಕೇ ಹೊರತು ಸ್ಟಿಂಗ್ ಆಪರೇಷನ್ಗಳ ಮೂಲಕವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಅನೈತಿಕ ಚಟುವಟಿಕೆಗಳಿಗೆ ಅವಕಾಶ ಇರಬಾರದು ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R