
ಬೆಂಗಳೂರು, 02 ನವೆಂಬರ್ (ಹಿ.ಸ.):
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯದಲ್ಲಿ ಕ್ರಾಂತಿಯಾಗುವ ಮೊದಲು ಕಾಂಗ್ರೆಸ್ ನಾಯಕರು ಅಧಿಕಾರ ಬಿಟ್ಟು ತೊಲಗಬೇಕು. ಇಲ್ಲವಾದರೆ ಏರಿಕೆ ಮಾಡಿರುವ ಎಲ್ಲ ಬೆಲೆಗಳನ್ನು ಕಡಿಮೆ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ಕುಸಿದಿದ್ದು, ಆಡಳಿತ ಶೂನ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಮುಖ್ಯಮಂತ್ರಿಯನ್ನು ಪ್ರಶ್ನಿಸಿದ ಅವರು, ಕನ್ನಡ ರಾಜ್ಯೋತ್ಸವದ ಕೊಡುಗೆ ಏನು? ಎಂದು ಕೇಳಿದರು. ಶ್ರೀಮಂತರು ಬಿಸ್ಲೇರಿ ನೀರು ಕುಡಿಯಬಹುದು. ಆದರೆ, ಸಾಮಾನ್ಯ ಜನರು ಕಾವೇರಿ ನೀರನ್ನೇ ಕುಡಿಯುತ್ತಾರೆ. ನಿಮ್ಮ ಅಂತಸ್ತನ್ನು ನೋಡಿ ರಾಜ್ಯದ ಜನರ ಜೀವನಮಟ್ಟವನ್ನು ನಿರ್ಧರಿಸಬೇಡಿ ಎಂದು ಕಿಡಿಕಾರಿದರು.
ಹಾಲು, ಮೊಸರು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೋಟೆಲ್ಗಳಲ್ಲಿ ಕೆಲಸ ಮಾಡುವವರು, ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರು ಹಾಗೂ ಬೀದಿಬದಿ ವ್ಯಾಪಾರಿಗಳು ಸೀಮಿತ ಆದಾಯದಲ್ಲಿ ಜೀವನ ನಡೆಸಬೇಕಾಗಿದೆ.
ಮನೆ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಬಿಲ್ ಹಾಗೂ ಕಸದ ಶುಲ್ಕ ಪಾವತಿಸುವುದರ ಜೊತೆಗೆ ಪ್ರತಿವರ್ಷ ಹೆಚ್ಚಾಗುತ್ತಿರುವ ಹಾಲು ಮತ್ತು ಮೊಸರಿನ ಬೆಲೆಯನ್ನೂ ಭರಿಸುವುದು ಕಷ್ಟವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇದ್ದರೂ ರೈತರಿಗೆ ಎಕರೆಗೆ ಕೇವಲ 2,500 ರೂ. ಪರಿಹಾರ ನೀಡಲಾಗಿದೆ. ಹಿಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯೊಂದಿಗೆ ರಾಜ್ಯದ ವತಿಯಿಂದ ಹೆಚ್ಚುವರಿಯಾಗಿ 4,000 ರೂ. ನೀಡುತ್ತಿತ್ತು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ನೆರವನ್ನು ಸ್ಥಗಿತಗೊಳಿಸಿದೆ. ಅಲ್ಪ ಪ್ರಮಾಣದ ಪರಿಹಾರ ನೀಡಲೂ ಹಲವು ನಿಯಮ ಹಾಗೂ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಆರೋಪಿಸಿದರು.
ಹಾಲಿನ ದರವನ್ನು ಹಲವು ಬಾರಿ ಹೆಚ್ಚಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಪ್ರಯೋಜನವೂ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯ 5,000 ಕೋಟಿ ರೂ. ಹಣದ ಲೆಕ್ಕ ನೀಡಿಲ್ಲ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ಉಚಿತ ಬಸ್ ಪ್ರಯಾಣದ ಭರವಸೆ ನೀಡಿದ ಸರ್ಕಾರಕ್ಕೆ ಬಸ್ಗಳ ನಿರ್ವಹಣೆಗೂ ಹಣವಿಲ್ಲದಂತಾಗಿದೆ. ಕೆಎಸ್ಆರ್ಟಿಸಿ ಸೇರಿದಂತೆ ಸಾರಿಗೆ ನಿಗಮಗಳ ಬಸ್ಗಳ ದುರಸ್ತಿ ಮತ್ತು ಡೀಸೆಲ್ ಖರೀದಿಗೂ ಅನುದಾನದ ಕೊರತೆ ಎದುರಾಗಿದೆ. ಇದು ಸರ್ಕಾರದ ಆಡಳಿತದ ಸ್ಥಿತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯೆ ಭಾರತಿ ಶೆಟ್ಟಿ, ರಾಜ್ಯ ಸರ್ಕಾರ ಹಾಲಿನ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಲಿಗೆ ಸಬ್ಸಿಡಿಯನ್ನು ಸರ್ಕಾರದ ಖಜಾನೆಯಿಂದ ನೀಡಲಾಗುತ್ತಿತ್ತು. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಹಾಲಿಗೆ ಸಬ್ಸಿಡಿ ನೀಡಬೇಕು. ಅದಕ್ಕಾಗಿ ಗ್ರಾಹಕರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಹಾಲಿನ ದರವನ್ನು ರಾಜ್ಯ ಸರ್ಕಾರ ನಾಲ್ಕು ಬಾರಿ ಹೆಚ್ಚಿಸಿದೆ. ಮೊದಲಿಗೆ ಲೀಟರ್ಗೆ 4 ರೂ., ನಂತರ 3 ರೂ. ಹಾಗೂ 2 ರೂ. ಹೆಚ್ಚಳ ಮಾಡಲಾಗಿತ್ತು. ಇದೀಗ 8 ರೂ. ಹೆಚ್ಚಳ ಮಾಡಲಾಗಿದೆ. ಒಟ್ಟಾರೆ ಲೆಕ್ಕಾಚಾರದಲ್ಲಿ ಗ್ರಾಹಕರಿಗೆ 12 ರೂ. ಹೆಚ್ಚುವರಿ ಹೊರೆ ಬಿದ್ದಿದೆ ಎಂದು ಅವರು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ಬಾರಿ ಬೆಲೆ ಏರಿಕೆಯ ಮೂಲಕ ಶಾಕ್ ನೀಡಿದ್ದರೆ, ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಬಾರಿ ಒಂದೇ ಹೊಡೆತಕ್ಕೆ ದೊಡ್ಡ ಶಾಕ್ ನೀಡಿದ್ದಾರೆ. ಇದನ್ನು ಜನರು ನಿರೀಕ್ಷಿಸಿರಲಿಲ್ಲ ಎಂದು ಟೀಕಿಸಿದರು.
ಹಾಲಿನ ದರ ಏರಿಕೆ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದೆ. ಪ್ರತಿ ಜಿಲ್ಲೆ, ಮಂಡಲ ಹಾಗೂ ವಾರ್ಡ್ ಮಟ್ಟದಲ್ಲೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತಿ ಶೆಟ್ಟಿ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R