
ಝುಂಝುನು, 02 ನವೆಂಬರ್ (ಹಿ.ಸ.):
ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಯಂತ್ರಕ್ಕೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಎಂಟು ಕಾರ್ಮಿಕರು ಮೃತಪಟ್ಟಿದ್ದು, ಐವರು ಗಾಯಗೊಂಡಿರುವ ದಾರುಣ ಘಟನೆ ರಾಜಸ್ಥಾನದ ಜುಂಝುನು ಜಿಲ್ಲೆಯ ಉದಯಪುರವಾಟಿ ಪ್ರದೇಶದ ಛಾಪೋಲಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗಾಯಾಳುಗಳನ್ನು ಉದಯಪುರವಾಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಉದಯಪುರವಾಟಿ ಪೊಲೀಸ್ ಠಾಣಾಧಿಕಾರಿ ರಾಮ್‌ಪಾಲ್ ಅವರ ಮಾಹಿತಿ ಪ್ರಕಾರ, ಛಾಪೋಲಿ-ಕದಂಬ ಕುಂಡ ರಸ್ತೆಯಲ್ಲಿ, ಸಿಕರ್-ನೀಮ್ಕಾಥಾನ ರಾಜ್ಯ ಹೆದ್ದಾರಿಯಿಂದ ಸುಮಾರು 150 ಮೀಟರ್ ದೂರದಲ್ಲಿ ಈ ಘಟನೆ ಸಂಭವಿಸಿದೆ. ರಸ್ತೆ ನಿರ್ಮಾಣಕ್ಕೆ ಬಳಸುವ ಜಲ್ಲಿ ಮತ್ತು ಮರಳು ಮಿಶ್ರಣ ಮಾಡುವ ಯಂತ್ರದ ಹೈಡ್ರಾಲಿಕ್ ಜಾಕ್ ಮೇಲ್ಭಾಗದಲ್ಲಿ ಹಾದುಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದ ಯಂತ್ರಕ್ಕೆ ವಿದ್ಯುತ್ ಪ್ರವಹಿಸಿದ್ದು, ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ.
ದುರಂತದಲ್ಲಿ ಹಾಲೇಡಾ ಮಂಡಾವರ ಗ್ರಾಮದ ಹರಿರಾಮ್ ಗುರ್ಜರ್ (30), ಮಂಗಳಚಂದ್ (22), ಕಾಲೂರಾಮ್ ಗುರ್ಜರ್ (29) ಮತ್ತು ಪವನ್ ಗುರ್ಜರ್ (23) ಮೃತಪಟ್ಟಿದ್ದಾರೆ. ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಇನ್ನು ಛಾಪೋಲಿ ಗ್ರಾಮದ ವಿಷ್ಣು ಸೈನಿ (38), ಸುರೇಂದ್ರ ಅಲಿಯಾಸ್ ಸುರೇಶ್ ಸೈನಿ (30), ಮುಕೇಶ್ ಸೈನಿ (27) ಮತ್ತು ಫತೇಹ್‌ಚಂದ್ ಸೈನಿ (32) ಕೂಡ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ.
ಛಾಪೋಲಿ ಗ್ರಾಮದ ಮಹೇಂದ್ರ ಸೈನಿ, ಗೀತಾ ದೇವಿ (45), ಸಂತಾರಾ ದೇವಿ (35), ಗಿದಾರಾಮ್ ಸೈನಿ (45) ಮತ್ತು ಮಂಜು ದೇವಿ (38) ಗಾಯಗೊಂಡಿದ್ದಾರೆ.
ವಿದ್ಯುತ್ ಇಲಾಖೆ ನಿರ್ಲಕ್ಷ್ಯದ ಆರೋಪ
ಘಟನೆಗೆ ಆಡಳಿತ ಮತ್ತು ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ. ವಿದ್ಯುತ್ ಕಂಬಗಳು ಹಾಗೂ ತಂತಿಗಳು ಮರಗಳಿಗೆ ತಾಗಿಕೊಂಡಿದ್ದವು. ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ದೂರವಾಣಿ ಮೂಲಕ ಮನವಿ ಮಾಡಿದರೂ, ವಿದ್ಯುತ್ ಉಪಕೇಂದ್ರದಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಯಂತ್ರವನ್ನು ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲು 12ರಿಂದ 13 ಮಂದಿ ಕಾರ್ಮಿಕರು ಸೇರಿ ತಳ್ಳುತ್ತಿದ್ದ ಸಂದರ್ಭದಲ್ಲಿ ಅದು ವಿದ್ಯುತ್ ತಂತಿಗೆ ತಗುಲಿ ದುರಂತ ಸಂಭವಿಸಿದೆ ಎಂದು ಗಾಯಾಳು ಗಿದಾರಾಮ್ ಸೈನಿ ತಿಳಿಸಿದ್ದಾರೆ.
ಘಟನೆಯ ಬಳಿಕ ಆಕ್ರೋಶಗೊಂಡ ಗ್ರಾಮಸ್ಥರು ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಒತ್ತಾಯಿಸಿದರು. ಪೊಲೀಸರು ಮನವೊಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಜಿಲ್ಲಾಧಿಕಾರಿ ಡಾ. ಅರುಣ್ ಗರ್ಗ್, ಪೊಲೀಸ್ ವರಿಷ್ಠಾಧಿಕಾರಿ ಕಾವೇಂದ್ರ ಸಿಂಗ್ ಸಾಗರ್, ಶಾಸಕ ಭಗವಾನಾರಾಮ್ ಸೈನಿ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರಾಭಿವೃದ್ಧಿ ಸಚಿವ ಝಾಬರ್ ಸಿಂಗ್ ಖರ್ರಾ ಕೂಡ ಸ್ಥಳಕ್ಕೆ ತೆರಳಿ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಬಳಿಕ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರಿಗೆ ಘಟನೆಯ ಕುರಿತು ಮಾಹಿತಿ ನೀಡಿದರು.
ತನಿಖೆಗೆ ಮುಖ್ಯಮಂತ್ರಿ ಆದೇಶ
ಕಾರ್ಮಿಕರ ಸಾವಿಗೆ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು, ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ಸಾಧ್ಯವಿರುವ ಎಲ್ಲ ನೆರವು ಒದಗಿಸುವುದು ಹಾಗೂ ಘಟನೆಯ ಕುರಿತು ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಈ ದುರಂತ ಸಂಭವಿಸಲು ಕಾರಣವೇನು ಮತ್ತು ಕಾರ್ಮಿಕರ ಸಾವಿಗೆ ಯಾರು ಹೊಣೆ ಎಂಬುದನ್ನು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಎಲ್ಲ ರೀತಿಯ ನೆರವು ಒದಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.