ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಪ್ರಜಾಸೇವಾ ಆಂದೋಲನ: ಸಚಿವ ಸಂತೋಷ ಲಾಡ್
ಹುಬ್ಬಳ್ಳಿ, 02 ನವೆಂಬರ್ (ಹಿ.ಸ.): ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಜನರ ಬಳಿಗೆ ಕರೆತಂದು, ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾ
ಪ್ರಜಾಸೇವಾ ಆಂದೋಲನ


ಹುಬ್ಬಳ್ಳಿ, 02 ನವೆಂಬರ್ (ಹಿ.ಸ.):

ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಜನರ ಬಳಿಗೆ ಕರೆತಂದು, ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಹೇಳಿದರು.

ಧಾರವಾಡ ತಾಲೂಕಿನ ಮನಸೂರು, ಮನಗುಂಡಿ ಹಾಗೂ ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಸೋಮವಾರ ನಡೆದ ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಅವರು ಮಾತನಾಡಿದರು. ಗ್ರಾಮಗಳ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳ ನಿವಾರಣೆಗೆ ರಾಜಕೀಯ ಭೇದ ಮರೆತು ಎಲ್ಲ ಸಮಾಜದ ಮುಖಂಡರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಯುವಜನರಲ್ಲಿ ಸಮಾನತೆ, ಪ್ರೀತಿ ಮತ್ತು ಕೋಮು ಸೌಹಾರ್ದತೆಯ ಮೌಲ್ಯಗಳನ್ನು ಬೆಳೆಸಬೇಕು ಎಂದರು.

ರಾಜ್ಯದ ಐದು ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ಸುಮಾರು ₹60 ಸಾವಿರ ಕೋಟಿ ಒದಗಿಸಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು 45 ಕೋಟಿ ಮಹಿಳಾ ಪ್ರಯಾಣಿಕರು ಬಳಸಿಕೊಂಡಿದ್ದು, ಇದಕ್ಕಾಗಿ ಸರ್ಕಾರ ₹995 ಕೋಟಿ ವೆಚ್ಚ ಮಾಡಿದೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ 4,04,827 ಮಹಿಳೆಯರಿಗೆ ಈವರೆಗೆ ಒಟ್ಟು ₹2,345 ಕೋಟಿ ಪಾವತಿಸಲಾಗಿದೆ ಎಂದು ತಿಳಿಸಿದರು.

ಸಭೆಗಳಲ್ಲಿ ಗ್ರಾಮಸ್ಥರು ಬಸ್ ಸೌಲಭ್ಯ, ರಸ್ತೆ ದುರಸ್ತಿ, ಶಾಲೆಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ ಮದ್ಯದಂಗಡಿಗಳನ್ನು ಮುಚ್ಚುವಂತೆ ಮನವಿ ಸಲ್ಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಚಿವರು, ಇನ್ನುಳಿದವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. 396 ಗ್ರಾಮಗಳಿಗೆ ಮಲಪ್ರಭಾ ನದಿ ನೀರು ಪೂರೈಸುವ ಯೋಜನೆ ಆರಂಭವಾಗಿದ್ದು, ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುವುದಾಗಿ ಹೇಳಿದರು.

ಮನಸೂರು ಗ್ರಾಮದಲ್ಲಿ ಬರ ಹಿನ್ನೆಲೆಯಲ್ಲಿ ರೈತರಿಗೆ ಮೇವು ಬೀಜ ವಿತರಿಸಲಾಯಿತು. ಮನಸೂರು ಮತ್ತು ಮನಗುಂಡಿ ಗ್ರಾಮಗಳ 10 ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್‌ಪುಸ್ತಕಗಳನ್ನು ನೀಡಲಾಯಿತು. ಮನಸೂರು–ಮನಗುಂಡಿ–ಬೆಳ್ಳಿಗಟ್ಟಿ ರಸ್ತೆ ಅಭಿವೃದ್ಧಿ ಹಾಗೂ ಮನಸೂರು ವ್ಯಾಪ್ತಿಯಲ್ಲಿ ಕಾಲುದಾರಿ ನಿರ್ಮಾಣ ಕಾಮಗಾರಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು. ಈ ಕಾಮಗಾರಿಗೆ ₹1.50 ಕೋಟಿ ಅನುದಾನ ನಿಗದಿಪಡಿಸಲಾಗಿದೆ.

ಮುಮ್ಮಿಗಟ್ಟಿ ಗ್ರಾಮದಲ್ಲಿ ಸ್ಮಶಾನಕ್ಕೆ ಸಂಬಂಧಿಸಿದಂತೆ 20 ಗುಂಟೆ ಜಮೀನಿನ ವ್ಯತ್ಯಾಸವನ್ನು ಸರಿಪಡಿಸುವುದಾಗಿ ತಿಳಿಸಿದ ಸಚಿವರು, ಇದಕ್ಕೆ ತಗಲುವ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದರು. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು, ವಸತಿ ನಿಲಯ ಸೌಲಭ್ಯ ಮತ್ತು ಗಣಕಯಂತ್ರ ವಿತರಣೆ ಮಾಡುವುದಾಗಿಯೂ, ಅಂಗವಿಕಲರಿಗೆ ಸ್ವಯಂ ಉದ್ಯೋಗಕ್ಕಾಗಿ ಅಂಗಡಿ ಆರಂಭಿಸಲು ನೆರವು ನೀಡುವುದಾಗಿಯೂ ತಿಳಿಸಿದರು.

ಗ್ರಾಮದಲ್ಲಿ 12 ಎಮ್ಮೆ ಮತ್ತು ಹಸುಗಳು ಮೃತಪಟ್ಟ ಹಿನ್ನೆಲೆಯಲ್ಲಿ ಸಂತ್ರಸ್ತ ರೈತರಿಗೆ ₹1.80 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು. ಕಾರ್ಮಿಕರ ಮಕ್ಕಳ ವಿವಾಹ ಸಹಾಯಧನವಾಗಿ ತಲಾ ₹60 ಸಾವಿರ ಮೊತ್ತದ ಎರಡು ಚೆಕ್‌ಗಳನ್ನು ಪೋಷಕರಿಗೆ ನೀಡಲಾಯಿತು. ವಿಕಾಸನಗರ ಉಪಗ್ರಾಮದ ಫಲಾನುಭವಿಗಳಿಗೆ ಭೂಗ್ಯಾರಂಟಿ ಹಕ್ಕುಪತ್ರಗಳನ್ನೂ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಧಾರವಾಡ ತಹಶೀಲ್ದಾರ್ ಡಾ. ಡಿ.ಎಚ್. ಹೂಗಾರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಡಿ. ಹಿರೇಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಮುಖಂಡರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande