ಹಸಿರು ವಿಜಯಪುರ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯ ಸಸಿ ನೆಡುವ ಅಭಿಯಾನ: ಎಂ.ಬಿ. ಪಾಟೀಲ
ವಿಜಯಪುರ, 02 ನವೆಂಬರ್ (ಹಿ.ಸ.) ಬಸವನಾಡಿನಲ್ಲಿ ಪರಿಸರ ಸಂರಕ್ಷಣೆ ಹಾಗೂ ಹಸಿರು ಹೊದಿಕೆಯನ್ನು ಹೆಚ್ಚಿಸುವ ಸಂಕಲ್ಪಕ್ಕೆ ಪೊಲೀಸ್ ಇಲಾಖೆಯ ಸಸಿ ನೆಡುವ ಕಾರ್ಯಕ್ರಮ ಮತ್ತಷ್ಟು ಬಲ ತುಂಬಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು. ನಗರದ ವಿಜ
ಹಸಿರು ಜಿಲ್ಲಾ


ವಿಜಯಪುರ, 02 ನವೆಂಬರ್ (ಹಿ.ಸ.)

ಬಸವನಾಡಿನಲ್ಲಿ ಪರಿಸರ ಸಂರಕ್ಷಣೆ ಹಾಗೂ ಹಸಿರು ಹೊದಿಕೆಯನ್ನು ಹೆಚ್ಚಿಸುವ ಸಂಕಲ್ಪಕ್ಕೆ ಪೊಲೀಸ್ ಇಲಾಖೆಯ ಸಸಿ ನೆಡುವ ಕಾರ್ಯಕ್ರಮ ಮತ್ತಷ್ಟು ಬಲ ತುಂಬಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಹಸಿರು ವಾತಾವರಣ ನಿರ್ಮಿಸುವ ಉದ್ದೇಶದಿಂದ ಸುಮಾರು ಒಂದು ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಪೊಲೀಸ್ ಇಲಾಖೆ ಸುಮಾರು ಒಂದೂವರೆ ಎಕರೆ ಪ್ರದೇಶವನ್ನು ಮರಗಿಡಗಳ ಬೆಳೆವಣಿಗೆಗೆ ಬಳಸಿಕೊಳ್ಳಲು ಅವಕಾಶ ನೀಡಿರುವುದು ಶ್ಲಾಘನೀಯ.

ಜಿಲ್ಲೆಯ ವಿವಿಧ ಇಲಾಖೆಗಳು ತಮ್ಮ ಕಚೇರಿ ಆವರಣ ಹಾಗೂ ಲಭ್ಯವಿರುವ ಖಾಲಿ ಜಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಸಚಿವರು ಕರೆ ನೀಡಿದರು.

‘ಹಸಿರು ವಿಜಯಪುರ’ ನಿರ್ಮಾಣವಾದರೆ ಮುಂದಿನ ಪೀಳಿಗೆಯ ಭವಿಷ್ಯ ಮತ್ತಷ್ಟು ಉಜ್ವಲವಾಗಲಿದೆ. ನಗರದಲ್ಲಿ ಹಸಿರು ಪ್ರದೇಶವನ್ನು ಹೆಚ್ಚಿಸುವುದು, ಪರಿಸರ ಸಮತೋಲನ ಕಾಪಾಡುವುದು ಹಾಗೂ ಜನರಿಗೆ ಆರೋಗ್ಯಕರ ವಾತಾವರಣ ಒದಗಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಎಸ್ಪಿ ಕಚೇರಿ ಆವರಣದಲ್ಲಿರುವ ಖಾಲಿ ಪ್ರದೇಶದಲ್ಲಿ ಯಾವ ರೀತಿಯ ಗಿಡಗಳನ್ನು, ಎಷ್ಟು ಪ್ರಮಾಣದಲ್ಲಿ ಹಾಗೂ ಯಾವ ಸ್ಥಳದಲ್ಲಿ ನೆಡಬೇಕು ಎಂಬುದರ ಕುರಿತು ಕೋಟಿ ವೃಕ್ಷ ಅಭಿಯಾನ ತಂಡ ಸ್ಥಳ ಗುರುತಿಸುವುದು ಹಾಗೂ ನೆಲ ಸಮತಟ್ಟು ಮಾಡುವ ಕಾರ್ಯ ಕೈಗೊಂಡಿದೆ. ಸದ್ಯಕ್ಕೆ ಕಾರ್ಯಕ್ರಮದ ಅಂಗವಾಗಿ 10 ಸಸಿಗಳನ್ನು ಸಾಂಕೇತಿಕವಾಗಿ ನೆಡಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೆಚ್ಚಿನ ಸಸಿಗಳನ್ನು ನೆಡುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಸಸಿ ನೆಡುವ ಕಾರ್ಯಕ್ಕೆ ಅರಣ್ಯ ಇಲಾಖೆಯ ಸಹಕಾರ ಪಡೆಯಲಾಗುತ್ತಿದ್ದು, ನೆಟ್ಟ ಸಸಿಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲು ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಸಿಗಳು ಬೆಳೆದು ದೊಡ್ಡ ಮರಗಳಾಗುವವರೆಗೆ ಅವುಗಳ ಸಂರಕ್ಷಣೆ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಪೊಲೀಸ್ ಇಲಾಖೆ ವಹಿಸಿಕೊಳ್ಳಲಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಆನಂದ ಕೆ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು ಈ ಕಾರ್ಯಕ್ಕೆ ಕೈಜೋಡಿಸಿರುವುದು ಸಂತಸದ ಸಂಗತಿ. ಇಂತಹ ಸಾಮೂಹಿಕ ಪ್ರಯತ್ನಗಳು ಜಿಲ್ಲೆಯಲ್ಲಿ ಪರಿಸರ ಜಾಗೃತಿಯನ್ನು ಹೆಚ್ಚಿಸುವುದರ ಜೊತೆಗೆ ಹಸಿರು ಪ್ರದೇಶ ವಿಸ್ತರಣೆಗೆ ಸಹಕಾರಿಯಾಗಲಿವೆ ಎಂದು ಹೇಳಿದರು.

“ಗಿಡ ನೆಡುವುದು ಮಾತ್ರವಲ್ಲ, ಅವುಗಳನ್ನು ಬೆಳೆಸಿ ಸಂರಕ್ಷಿಸುವುದು ಮುಖ್ಯ. ಇಂದು ನಾವು ನೆಡುವ ಪ್ರತಿಯೊಂದು ಗಿಡವೂ ನಾಳಿನ ಪೀಳಿಗೆಗೆ ಶುದ್ಧ ಗಾಳಿ, ನೆರಳು ಹಾಗೂ ಆರೋಗ್ಯಕರ ಪರಿಸರದ ಕೊಡುಗೆಯಾಗಲಿದೆ. ಸ್ವಚ್ಛ, ಸುಂದರ ಹಾಗೂ ಹಸಿರು ವಿಜಯಪುರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು” ಎಂದು ಸಚಿವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮೀಸಲು ಪೊಲೀಸ್ ಪಡೆ ಡಿವೈಎಸ್ಪಿ ಮುರುಗೇಶ ಉಪಾಸೆ, ವಿಜಯಪುರ ನಗರ ಡಿವೈಎಸ್ಪಿ ನಾಗರಾಜ, ಗ್ರಾಮೀಣ ಡಿವೈಎಸ್ಪಿ ಟಿ.ಎಸ್. ಸುಲ್ಪಿ, ಅರಣ್ಯ ಇಲಾಖೆಯ ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಮಲ್ಲಿನಾಥ ಬಿ. ಕುಸನಾಳ, ಶಿವರುದ್ರಪ್ಪ ಕಬಾಡಗಿ, ವಲಯ ಅರಣ್ಯಾಧಿಕಾರಿಗಳಾದ ಸಂತೋಷ ಅಜೂರ, ರಾಜು ಬಿರಾದಾರ, ವಿಜಯಪುರ ಸೈಕ್ಲಿಂಗ್ ಗ್ರೂಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ, ಕೋಟಿ ವೃಕ್ಷ ಅಭಿಯಾನದ ಸಂಚಾಲಕ ಡಾ. ಮುರಗೇಶ ಪಟ್ಟಣಶೆಟ್ಟಿ, ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ ಸೇರಿದಂತೆ ಪದಾಧಿಕಾರಿಗಳು, ಪರಿಸರ ಪ್ರೇಮಿಗಳು ಹಾಗೂ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಸಂತೋಷ ಔರಸಂಗ, ವೀರೇಂದ್ರ ಗುಚ್ಚೆಟ್ಟಿ, ಶಿವಾನಂದ ಯರನಾಳ, ವಿನಯ ಕಂಚಾಣಿ, ಸೋಮಶೇಖರ, ಸಚಿನ ಪಾಟೀಲ, ಗುರುಶಾಂತ ಕಾಪ್ಸೆ, ಎ.ಪಿ. ಬಸನಾಳ, ಡಾ. ರಾಜು ಯಲಗೊಂಡ, ಸಂಗಮೇಶ ಹಾವರಗಿ, ಸಮೀರ್ ಬಳಿಗಾರ, ವಿಜಯಕುಮಾರ ಕೋರೆ, ಶಿವಾನಂದ ಕುಂಬಾರ, ಡಾ. ಪ್ರವೀಣ ಚೌರ, ರಮೇಶ ಬಿರಾದಾರ, ಉಮೇಶ ಮೆಟಗಾರ, ಅಮಿತ ಬಿರಾದಾರ, ವೀಣಾ ದೇಶಪಾಂಡೆ, ನಾವೀದ ನಾಗಠಾಣ ಸೇರಿದಂತೆ ಹಲವರು ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande