ಕಲಬುರಗಿಯಲ್ಲಿ ಭೀಕರ ಸಿಲಿಂಡರ್ ಸ್ಫೋಟ: 20ಕ್ಕೂ ಹೆಚ್ಚು ಶೆಡ್ಗಳು ಬೆಂಕಿಗಾಹುತಿ
ಕಲಬುರಗಿ, 02 ನವೆಂಬರ್ (ಹಿ.ಸ.): ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ಸಮೀಪ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗ ಸಿಮೆಂಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಭೀಕರ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಕಾರ್ಮಿಕರ ವಾಸ್ತವ್ಯಕ್ಕಾಗಿ ನಿರ್ಮಿಸಲಾಗಿದ್ದ 20ಕ್ಕೂ ಹೆಚ್ಚು ಶೆಡ್ಗಳು ಬೆಂಕಿಗೆ ಆಹುತಿಯಾ
Kalaburagi-Cylinder-Blast-Fire-Destroys-Over-20-Workers-Sheds-Gulbarga-Cement-Factory


ಕಲಬುರಗಿ, 02 ನವೆಂಬರ್ (ಹಿ.ಸ.):

ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ಸಮೀಪ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗ ಸಿಮೆಂಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಭೀಕರ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಕಾರ್ಮಿಕರ ವಾಸ್ತವ್ಯಕ್ಕಾಗಿ ನಿರ್ಮಿಸಲಾಗಿದ್ದ 20ಕ್ಕೂ ಹೆಚ್ಚು ಶೆಡ್ಗಳು ಬೆಂಕಿಗೆ ಆಹುತಿಯಾಗಿವೆ.

ಕಾರ್ಖಾನೆಯ ಕಾರ್ಮಿಕರ ವಾಸ್ತವ್ಯಕ್ಕಾಗಿ ನಿರ್ಮಿಸಲಾಗಿದ್ದ ಶೆಡ್ನಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ.

ಕ್ಷಣಾರ್ಧದಲ್ಲಿ ಬೆಂಕಿ ಸುತ್ತಮುತ್ತಲಿನ ಶೆಡ್ಗಳಿಗೂ ವ್ಯಾಪಿಸಿದ್ದು, 20ಕ್ಕೂ ಹೆಚ್ಚು ಶೆಡ್ಗಳು ಹೊತ್ತಿ ಉರಿದಿವೆ. ಬೆಂಕಿಯ ತೀವ್ರತೆಗೆ ಶೆಡ್ಗಳಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

ಘಟನೆ ಸಂಭವಿಸಿದ ಸಂದರ್ಭದಲ್ಲಿ ಬಹುತೇಕ ಕಾರ್ಮಿಕರು ಸ್ಥಳಕ್ಕೆ ಬಂದಿರಲಿಲ್ಲ. ಎರಡು ಶೆಡ್ಗಳಲ್ಲಿ ಮಾತ್ರ ಕಾರ್ಮಿಕರು ಇದ್ದರು ಎನ್ನಲಾಗಿದ್ದು, ಅವರೂ ಕೆಲಸಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸಿಲಿಂಡರ್ ಸ್ಫೋಟಕ್ಕೆ ನಿಖರ ಕಾರಣ ತಿಳಿದುಬರಬೇಕಿದೆ.

--------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande