
ಬೆಂಗಳೂರು, 02 ನವೆಂಬರ್ (ಹಿ.ಸ.):
ಚಂಡಮಾರುತದಿಂದ ಹಾನಿಗೊಳಗಾಗಿರುವ ಆಂಧ್ರಪ್ರದೇಶದಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕರ್ನಾಟಕ ಸರ್ಕಾರ ನೆರವಿನ ಹಸ್ತ ಚಾಚಿದೆ. ರಾಜ್ಯದಿಂದ 500 ಕೌಶಲಯುತ ವಿದ್ಯುತ್ ಲೈನ್ಮನ್ಗಳು ಹಾಗೂ ಅಗತ್ಯ ಉಪಕರಣಗಳನ್ನು ಆಂಧ್ರಪ್ರದೇಶಕ್ಕೆ ರವಾನಿಸಲಾಗಿದೆ.
ವಿದ್ಯುತ್ ಪೂರೈಕೆ ಮೂಲಸೌಕರ್ಯ ಮರುಸ್ಥಾಪನೆಗೆ ಅಗತ್ಯವಾದ ಮಾನವ ಸಂಪನ್ಮೂಲ ಮತ್ತು ಉಪಕರಣಗಳನ್ನು ಒದಗಿಸುವಂತೆ ಆಂಧ್ರಪ್ರದೇಶ ಸರ್ಕಾರ ಕರ್ನಾಟಕಕ್ಕೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿರುವ ಕರ್ನಾಟಕ ಸರ್ಕಾರ, ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಮೇಲ್ವಿಚಾರಣೆಯಲ್ಲಿ ನೆರವು ನೀಡಲು ಮುಂದಾಗಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಆಂಧ್ರಪ್ರದೇಶದ ಜನರೊಂದಿಗೆ ಕರ್ನಾಟಕ ದೃಢವಾಗಿ ನಿಲ್ಲಲಿದೆ
ವಿದ್ಯುತ್ ಅತ್ಯಗತ್ಯ ಸೇವೆಯಾಗಿದ್ದು, ನೈಸರ್ಗಿಕ ವಿಕೋಪಕ್ಕೆ ಸಿಲುಕಿರುವ ಜನರ ಹಿತದೃಷ್ಟಿಯಿಂದ ವಿದ್ಯುತ್ ಪೂರೈಕೆಯನ್ನು ತಕ್ಷಣ ಪುನಃಸ್ಥಾಪಿಸುವುದು ಅಗತ್ಯವಾಗಿದೆ. ಸಂಕಷ್ಟದ ಈ ಸಮಯದಲ್ಲಿ ಕರ್ನಾಟಕವು ಆಂಧ್ರಪ್ರದೇಶದ ಜನರೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ಡಿ.ಕೆ. ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷೇತ್ರಮಟ್ಟದಲ್ಲಿ ಸಮರ್ಪಕ ಸಮನ್ವಯ ಸಾಧಿಸುವುದರ ಜತೆಗೆ ಆಧುನಿಕ ಉಪಕರಣಗಳನ್ನು ಬಳಸಿಕೊಂಡು ಆಂಧ್ರಪ್ರದೇಶದ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿ ವಿದ್ಯುತ್ ಪೂರೈಕೆಯನ್ನು ಶೀಘ್ರ ಪುನರಾರಂಭಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
500 ವಿದ್ಯುತ್ ಸಿಬ್ಬಂದಿ, 40 ಯಂತ್ರೋಪಕರಣಗಳ ನಿಯೋಜನೆ
ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಮರುಸ್ಥಾಪಿಸಲು ಕರ್ನಾಟಕದಿಂದ 500 ಕೌಶಲಯುತ ವಿದ್ಯುತ್ ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಇವರೊಂದಿಗೆ ಕ್ರೇನ್ ಮತ್ತು ಮಣ್ಣನ್ನು ಕೊರೆಯುವ ಯಂತ್ರಗಳನ್ನು ಹೊಂದಿರುವ 15 ಪಾಲ್ಫಿಂಗರ್ ಲಾರಿಗಳು ಹಾಗೂ 25 ಟ್ರ್ಯಾಕ್ಟರ್ ಆಧಾರಿತ ಕೊರೆಯುವ ಯಂತ್ರಗಳನ್ನು ರವಾನಿಸಲಾಗಿದೆ.
ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ತಂಡಗಳನ್ನು ಸಜ್ಜುಗೊಳಿಸಲಾಗಿದ್ದು, ಸೋಮವಾರ ಮಧ್ಯಾಹ್ನವೇ ಆಂಧ್ರಪ್ರದೇಶದತ್ತ ಪ್ರಯಾಣ ಬೆಳೆಸಿವೆ. ಮಧ್ಯರಾತ್ರಿಯ ವೇಳೆಗೆ ಅಲ್ಲಿಗೆ ತಲುಪಿವೆ.
ಕಾರ್ಯಾಚರಣೆಯ ಸಮರ್ಪಕ ನಿರ್ವಹಣೆಗಾಗಿ ಕರ್ನಾಟಕದ ಪ್ರತಿ ವಿದ್ಯುತ್ ಸರಬರಾಜು ಕಂಪನಿಯಿಂದ (ಎಸ್ಕಾಂ) ಒಬ್ಬ ಸಂಪರ್ಕ ಅಧಿಕಾರಿಯನ್ನು ನೇಮಿಸಲಾಗಿದೆ. ಇವರು ಆಂಧ್ರಪ್ರದೇಶದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಿದ್ದಾರೆ.
ವಿದ್ಯುತ್ ಸಿಬ್ಬಂದಿಯನ್ನು ತಲಾ 10 ಸದಸ್ಯರ ತಂಡಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ತಂಡಕ್ಕೂ ಕಿರಿಯ ಎಂಜಿನಿಯರ್ ಅಥವಾ ಸಹಾಯಕ ಎಂಜಿನಿಯರ್ ನೇತೃತ್ವ ವಹಿಸಲಿದ್ದಾರೆ. ನಿಯೋಜಿತ ತಂಡಗಳ ಮೇಲ್ವಿಚಾರಣೆ ಮತ್ತು ಸಮನ್ವಯಕ್ಕಾಗಿ ಪ್ರತಿ ಕಾರ್ಯಾಚರಣೆ ಮತ್ತು ನಿರ್ವಹಣಾ ವೃತ್ತದಿಂದ ಒಬ್ಬ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ನೇಮಿಸಲಾಗಿದೆ.
ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳ ವ್ಯವಸ್ಥೆ
ಕಾರ್ಯಾಚರಣೆ ಸ್ಥಳಗಳಲ್ಲಿ ಉಪಕರಣಗಳ ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಪಾಲ್ಫಿಂಗರ್ ಲಾರಿಗಳು ಮತ್ತು ಟ್ರ್ಯಾಕ್ಟರ್ ಆಧಾರಿತ ಕೊರೆಯುವ ಯಂತ್ರಗಳ ಜತೆಗೆ ಅವುಗಳ ಚಾಲಕರು ಹಾಗೂ ನಿರ್ವಾಹಕರನ್ನೂ ಕಳುಹಿಸಲಾಗಿದೆ.
ನಿಯೋಜಿತ ಸಿಬ್ಬಂದಿಯ ಪ್ರಯಾಣ, ವಸತಿ ಹಾಗೂ ಇತರ ಅಗತ್ಯ ವ್ಯವಸ್ಥೆಗಳಿಗಾಗಿ ಹೆಚ್ಚುವರಿ ತುರ್ತು ನಿಧಿಯನ್ನೂ ಒದಗಿಸಲಾಗುತ್ತಿದೆ.
ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನೆರೆಯ ರಾಜ್ಯಗಳಿಗೆ ಮೊದಲ ಆದ್ಯತೆ ನೀಡಿ ಸಹಾಯ ಮಾಡುವ ತತ್ವದಡಿ ಕರ್ನಾಟಕ ಸರ್ಕಾರ ಈ ನೆರವು ನೀಡಿದೆ. ಸಂಕಷ್ಟದಲ್ಲಿರುವ ಆಂಧ್ರಪ್ರದೇಶದ ಜನರಿಗೆ ಅಗತ್ಯ ವಿದ್ಯುತ್ ಸೇವೆಯನ್ನು ಆದಷ್ಟು ಶೀಘ್ರವಾಗಿ ಮರುಸ್ಥಾಪಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಪ್ರಕಟಣೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.