
ಉತ್ತರ ಕನ್ನಡ, 02 ನವೆಂಬರ್ (ಹಿ.ಸ.):
ವಾರಾಂತ್ಯದ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಆಗಮಿಸಿದ್ದ ಬೆಂಗಳೂರಿನ ಐಟಿ ಉದ್ಯೋಗಿಗಳ ತಂಡಕ್ಕೆ ಕಡಲತೀರದ ಪ್ರವಾಸ ದುರಂತದಲ್ಲಿ ಅಂತ್ಯಗೊಂಡಿದೆ.
ಗೋಕರ್ಣದ ದುಬ್ಬಣಶಶಿ ಕಡಲತೀರದಲ್ಲಿ ಭಾರಿ ಅಲೆಗೆ ಸಿಲುಕಿ ಐವರು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಈ ಪೈಕಿ ಜಾರ್ಖಂಡ್ ಮೂಲದ ಯುವತಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಇಬ್ಬರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.
ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ಅಲೋರಿಯಾ ಇಕೋಸ್ಪೇಸ್ ಕಂಪನಿಯ 16 ಉದ್ಯೋಗಿಗಳ ತಂಡ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಆಗಮಿಸಿತ್ತು.
ದುಬ್ಬಣಶಶಿ ಬೀಚ್ನಲ್ಲಿರುವ ಕೋಜೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ತಂಡದ ಕೆಲವರು ಸಮುದ್ರದಲ್ಲಿ ಆಟವಾಡಲು ನೀರಿಗಿಳಿದಿದ್ದರು.
ಈ ವೇಳೆ ಏಕಾಏಕಿ ಅಪ್ಪಳಿಸಿದ ಭಾರಿ ಅಲೆಗೆ ಐವರು ಸಿಲುಕಿ ಸಮುದ್ರದಲ್ಲಿ ಕೊಚ್ಚಿಹೋಗಿದ್ದರು.
ಘಟನೆ ತಿಳಿಯುತ್ತಿದ್ದಂತೆ ರೆಸಾರ್ಟ್ನ ಜೀವರಕ್ಷಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ರಕ್ಷಣಾ ಕಾರ್ಯಾಚರಣೆ ನಡೆಸಿ ನಾಲ್ವರನ್ನು ದಡಕ್ಕೆ ಕರೆತಂದಿದ್ದರು. ಆದರೆ, ತೀವ್ರ ಅಸ್ವಸ್ಥಗೊಂಡಿದ್ದ ಜಾರ್ಖಂಡ್ ಮೂಲದ 22 ವರ್ಷದ ಶೋಭಾ ದಾಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತಂಡದ ನಾಯಕ ಮಹಮ್ಮದ್ ಅಕ್ರಮ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ನಾಪತ್ತೆಯಾಗಿದ್ದ ವಿಶ್ವನ ಮೃತದೇಹ ಪತ್ತೆ
ಇನ್ನು ಘಟನೆಯಲ್ಲಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿನ ಕಲ್ಯಾಣನಗರದ 24 ವರ್ಷದ ವಿಶ್ವ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿತ್ತು.
ಇದೀಗ ಅವರ ಮೃತದೇಹವೂ ಪತ್ತೆಯಾಗಿದೆ. ನಿಶಾಂತ್ ಮತ್ತು ಮಹಮ್ಮದ್ ಖಾಸಿಂ ಅವರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದು, ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಗೋಕರ್ಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕಾರವಾರ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದುರಂತದ ಬೆನ್ನಲ್ಲೇ ಕಡಲತೀರಗಳಿಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಕುರಿತು ರೆಸಾರ್ಟ್ ಹಾಗೂ ಹೋಮ್ಸ್ಟೇ ಮಾಲೀಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಸಮುದ್ರದ ಅಲೆಗಳ ತೀವ್ರತೆ ಹೆಚ್ಚಿರುವ ಸಂದರ್ಭದಲ್ಲಿ ಪ್ರವಾಸಿಗರು ನೀರಿಗಿಳಿಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R