
ಬಾಗಲಕೋಟೆ, 02 ನವೆಂಬರ್ (ಹಿ.ಸ.)
ಹುನಗುಂದ ಕ್ಷೇತ್ರದ ಅಭಿವೃದ್ಧಿ ಕುರಿತು ಪ್ರಶ್ನೆಗಳನ್ನು ಕೇಳಿದಾಗ ಸಹಿಸಿಕೊಳ್ಳಲಾಗದಿದ್ದರೆ, ಜನಸಾಮಾನ್ಯರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತೀರಿ? ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೆ ಅವುಗಳ ದಾಖಲೆಗಳ ಸಮೇತ ಜನರ ಮುಂದಿಡಿ ಎಂದು ಬಿಜೆಪಿ ಮುಖಂಡ ರಾಜುಗೌಡ ದೊಡ್ಡನಗೌಡ ಪಾಟೀಲ ಅವರು ಸಚಿವ ವಿಜಯಾನಂದ ಕಾಶಪ್ಪನವರ ಅವರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು, ಮಂಜೂರಾದ ಅನುದಾನ ಹಾಗೂ ಪೂರ್ಣಗೊಂಡ ಯೋಜನೆಗಳ ವಿವರಗಳನ್ನು ಜನರ ಮುಂದಿಡುವುದು ಅವರ ಜವಾಬ್ದಾರಿಯಾಗಿದೆ. ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನೆ ಕೇಳಿದವರನ್ನು ಏಕವಚನದಲ್ಲಿ ಸಂಬೋಧಿಸುವುದು ಅಥವಾ ವೈಯಕ್ತಿಕವಾಗಿ ವಾಗ್ದಾಳಿ ನಡೆಸುವುದು ಸಚಿವ ಸ್ಥಾನದ ಘನತೆಗೆ ತಕ್ಕದ್ದಲ್ಲ ಎಂದು ಹೇಳಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವುದು ಜನರ ಹಕ್ಕು. ಪ್ರಶ್ನೆಗಳಿಗೆ ಉತ್ತರಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಅಧಿಕಾರದಲ್ಲಿದ್ದೇವೆ ಎಂಬ ಕಾರಣಕ್ಕೆ ಪ್ರಶ್ನಿಸುವವರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ” ಎಂದು ರಾಜುಗೌಡ ಪಾಟೀಲ ಹೇಳಿದ್ದಾರೆ.
ಅಧಿಕಾರಕ್ಕಿಂತ ಜವಾಬ್ದಾರಿ ದೊಡ್ಡದು, ಅಹಂಕಾರಕ್ಕಿಂತ ಜನರ ತೀರ್ಪು ದೊಡ್ಡದು ಎಂಬುದನ್ನು ರಾಜಕಾರಣಿಗಳು ಮರೆಯಬಾರದು. ಸಾರ್ವಜನಿಕ ಜೀವನದಲ್ಲಿರುವವರು ಟೀಕೆಗಳನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಟೀಕೆಗಳಿಗೆ ವಿಷಯಾಧಾರಿತವಾಗಿ ಉತ್ತರಿಸುವ ಬದಲು ವೈಯಕ್ತಿಕವಾಗಿ ಮಾತನಾಡುವುದು ಸರಿಯಾದ ರಾಜಕೀಯ ಸಂಸ್ಕೃತಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಏಕವಚನದಲ್ಲಿ ಮಾತನಾಡುವುದರಿಂದ ಯಾರೂ ದೊಡ್ಡವರಾಗುವುದಿಲ್ಲ.
ರಾಜಕೀಯವಾಗಿ ಎದುರಿಸಲು ನಮ್ಮಲ್ಲಿಯೂ ಸಾಕಷ್ಟು ವಿಷಯಗಳಿವೆ. ಆದರೆ ನಮ್ಮ ಸಂಸ್ಕೃತಿ ಮತ್ತು ಸಭ್ಯತೆ ವೈಯಕ್ತಿಕ ವಾಗ್ದಾಳಿಗೆ ಅವಕಾಶ ನೀಡುವುದಿಲ್ಲ. ನಮ್ಮ ಮೌನವನ್ನು ದೌರ್ಬಲ್ಯವೆಂದು ಭಾವಿಸಬೇಡಿ ಎಂದು ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜಕೀಯವಾಗಿ ಎದುರಿಸಲು ವಿಷಯಗಳಿಲ್ಲದಾಗ ಕೆಲವರು ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ. ನಾವು ಮಾತನಾಡಲು ಆರಂಭಿಸಿದರೆ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬಹುದು. ಆದರೆ ನಮ್ಮ ಘನತೆ ಮತ್ತು ಸಂಸ್ಕಾರವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ರಾಜುಗೌಡ ಪಾಟೀಲ ಹೇಳಿದ್ದಾರೆ.
“ನಿಮ್ಮ ರಾಜಕೀಯ ಸಾಧನೆಗಳ ಲೆಕ್ಕ ಕೊಡಿ”
ಕ್ಷೇತ್ರದ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಮ್ಮ ತಂದೆಯವರ ವಯಸ್ಸಿನ ಲೆಕ್ಕ ಹಾಕುವ ಬದಲು ನಿಮ್ಮ ರಾಜಕೀಯ ಸಾಧನೆಗಳ ಲೆಕ್ಕ ಕೊಡಿ. ವಯಸ್ಸಿನ ಬಗ್ಗೆ ಮಾತನಾಡುವುದು ಸುಲಭ; ಆದರೆ ಜನರ ವಿಶ್ವಾಸ ಗಳಿಸುವುದು ಅಷ್ಟು ಸುಲಭವಲ್ಲ” ಎಂದು ಹೇಳಿದ್ದಾರೆ.
ತಾವು ಕೂಡ 60ರ ಆಸುಪಾಸಿನ ವಯಸ್ಸಿನಲ್ಲಿದ್ದೀರಿ ಎಂದು ಉಲ್ಲೇಖಿಸಿದ ಅವರು, ವಯಸ್ಸಿನ ವಿಚಾರವನ್ನು ರಾಜಕೀಯ ಟೀಕೆಗೆ ಬಳಸುವುದಕ್ಕಿಂತ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವುದು ಸೂಕ್ತ ಎಂದು ಹೇಳಿದ್ದಾರೆ.
ಅಲ್ಲದೆ, ತಮ್ಮ ಹೇಳಿಕೆಯಲ್ಲಿ “ಮರಳು” ವಿಚಾರವನ್ನೂ ಪ್ರಸ್ತಾಪಿಸಿರುವ ರಾಜುಗೌಡ ಪಾಟೀಲ, ಮರಳು ಗಣಿಗಾರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ರಾಜಕೀಯ ಚರ್ಚೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಅವರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳ ಆಧಾರದ ಮೇಲೆ ಚರ್ಚೆ ನಡೆಯಬೇಕು ಎಂದು ತಿಳಿಸಿದ್ದಾರೆ.
“ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡಿಸುವ ಅಗತ್ಯ ನಮಗಿಲ್ಲ”
ಮಾಧ್ಯಮಗಳಿಗೆ ಹಣ ನೀಡಿ ತಮ್ಮ ಬಗ್ಗೆ ಅಪಪ್ರಚಾರ ಮಾಡಿಸುವ ನೈತಿಕತೆ ನಮಗಾಗಲಿ, ನಮ್ಮ ಪಕ್ಷಕ್ಕಾಗಲಿ ಇಲ್ಲ ಎಂದು ರಾಜುಗೌಡ ಪಾಟೀಲ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಚಿವರ ಕುರಿತು ಸಾರ್ವಜನಿಕರಿಂದ ಬರುತ್ತಿರುವ ಪ್ರತಿಕ್ರಿಯೆಗಳನ್ನು ಒಮ್ಮೆ ಗಮನಿಸಬೇಕು. ವಿವಿಧ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಪ್ರತಿಯೊಬ್ಬರನ್ನೂ ಹಣಕೊಟ್ಟು ಕೊಂಡುಕೊಳ್ಳಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜ. ಟೀಕೆಗಳಿಗೆ ಉತ್ತರ ನೀಡುವುದು ರಾಜಕೀಯ ನಾಯಕರ ಜವಾಬ್ದಾರಿ. ಆದರೆ ವೈಯಕ್ತಿಕ ವಾಗ್ದಾಳಿ ನಡೆಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಜನರ ಪ್ರಶ್ನೆಗಳಿಗೆ ಅಭಿವೃದ್ಧಿ ಕಾರ್ಯಗಳ ದಾಖಲೆಗಳೊಂದಿಗೆ ಉತ್ತರ ನೀಡುವುದು ಹೆಚ್ಚು ಸೂಕ್ತ ಎಂದು ಅವರು ಹೇಳಿದ್ದಾರೆ.
“ಪ್ರಶ್ನೆಗಳಿಗೆ ಉತ್ತರ ಕೊಡಿ, ಏಕವಚನದ ವಾಗ್ದಾಳಿ ಬೇಡ”
ಕ್ಷೇತ್ರದ ಅಭಿವೃದ್ಧಿ, ಅನುದಾನ, ಕಾಮಗಾರಿಗಳು ಹಾಗೂ ಜನರ ಸಮಸ್ಯೆಗಳ ಕುರಿತು ಕೇಳಲಾಗುವ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡಬೇಕು. ಪ್ರಶ್ನೆ ಕೇಳಿದವರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಮಾತನಾಡುವುದನ್ನು ಬಿಟ್ಟು, ವಿಷಯಾಧಾರಿತ ಚರ್ಚೆಗೆ ಆದ್ಯತೆ ನೀಡಬೇಕು ಎಂದು ರಾಜುಗೌಡ ದೊಡ್ಡನಗೌಡ ಪಾಟೀಲ ಆಗ್ರಹಿಸಿದ್ದಾರೆ.
“ಅಭಿವೃದ್ಧಿ ಮಾಡಿದ್ದರೆ ಲೆಕ್ಕ ಕೊಡಿ, ಅಹಂಕಾರವನ್ನಲ್ಲ. ಪ್ರಶ್ನೆಗಳಿಗೆ ಉತ್ತರ ಕೊಡಿ, ಏಕವಚನದ ವಾಗ್ದಾಳಿ ಬೇಡ. ಅಧಿಕಾರ ತಲೆಗೇರಿದರೆ ಜನರ ತೀರ್ಪನ್ನು ನೆನಪಿಸಿಕೊಳ್ಳಿ. ಟೀಕೆಗಳನ್ನು ಸಹಿಸಿಕೊಳ್ಳಲಾಗದವರು ಸಾರ್ವಜನಿಕ ಜೀವನದಲ್ಲಿ ಇರುವುದಾದರೂ ಏಕೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ತಮ್ಮ ಕಾರ್ಯಗಳ ಬಗ್ಗೆ ಜನರಿಗೆ ಉತ್ತರದಾಯಕರಾಗಿರಬೇಕು. ರಾಜಕೀಯ ಭಿನ್ನಾಭಿಪ್ರಾಯಗಳು ಮತ್ತು ಟೀಕೆಗಳನ್ನು ವೈಯಕ್ತಿಕ ಸಂಘರ್ಷವನ್ನಾಗಿ ಮಾಡದೆ, ಅಭಿವೃದ್ಧಿ ಹಾಗೂ ಸಾರ್ವಜನಿಕ ಸಮಸ್ಯೆಗಳ ಚರ್ಚೆಯಾಗಿ ಪರಿವರ್ತಿಸಬೇಕು ಎಂಬುದು ತಮ್ಮ ನಿಲುವಾಗಿದೆ ಎಂದು ರಾಜುಗೌಡ ದೊಡ್ಡನಗೌಡ ಪಾಟೀಲ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande