
ಬೆಂಗಳೂರು, 02 ನವೆಂಬರ್ (ಹಿ.ಸ.):
ಬನಶಂಕರಿಯ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಪ್ರದರ್ಶನಗೊಂಡಿದ್ದ ‘ಗಾಂಧಿ ಹತ್ಯೆಯ ಸತ್ಯ’ ನಾಟಕದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.
ನಾಟಕ ಪ್ರದರ್ಶನದ ವೇಳೆ ನಡೆದ ಗಲಾಟೆ ಹಾಗೂ ಹಲ್ಲೆ ಆರೋಪಗಳ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಅಕಾಡೆಮಿಯಲ್ಲಿ ಯಾವುದೇ ನಾಟಕ ಪ್ರದರ್ಶನ ನಡೆಸದಂತೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.
ಇದರ ಬೆನ್ನಲ್ಲೇ, ನಾಟಕದ ನಿರ್ದೇಶಕ ಹಾಗೂ ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಕಚೇರಿಯ ಗೇಟ್ ಬಳಿಯೇ ತಡೆದು ವಶಕ್ಕೆ ಪಡೆದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ನಾಟಕದಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ಸಂಬಂಧ ಅಡ್ಡಂಡ ಕಾರ್ಯಪ್ಪ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೂರು ನೀಡಿದವರ ವಿರುದ್ಧವೇ ಪೊಲೀಸರು ನೋಟಿಸ್ ಜಾರಿ ಮಾಡಿರುವುದು ಸರಿಯಲ್ಲ. ದೂರು ನಿರ್ಲಕ್ಷಿಸಿದ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಡ್ಡಂಡ ಕಾರ್ಯಪ್ಪ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಫಲಕಗಳನ್ನು ಪ್ರದರ್ಶಿಸಿದ ಕಾರ್ಯಕರ್ತರು, 'ಗಾಂಧಿ ವಿರೋಧಿಗಳಿಗೆ ಧಿಕ್ಕಾರ' ಎಂದು ಘೋಷಣೆ ಕೂಗಿದರು. ಪ್ರತಿಭಟನೆಯ ಸಂದರ್ಭದಲ್ಲಿ ಕೆಲಕಾಲ ಹೈಡ್ರಾಮಾ ನಡೆಯಿತು.
ಬನಶಂಕರಿ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲು
ನಾಟಕ ಪ್ರದರ್ಶನದ ವೇಳೆ ನಡೆದ ಗಲಾಟೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿವೆ. ನಾಟಕ ಪ್ರದರ್ಶನದ ವೇಳೆ ಮಸಿ ಬಳಿದು ಹಲ್ಲೆ ನಡೆಸಲಾಗಿದೆ ಹಾಗೂ ಬೆದರಿಕೆ ಹಾಕಲಾಗಿದೆ ಎಂದು ಅಡ್ಡಂಡ ಕಾರ್ಯಪ್ಪ ನೀಡಿದ ದೂರಿನ ಆಧಾರದಲ್ಲಿ 12ರಿಂದ 15 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದಕ್ಕೆ ಪ್ರತಿಯಾಗಿ, ಮಹಾತ್ಮ ಗಾಂಧೀಜಿ ಕುರಿತು ಅವಹೇಳನಕಾರಿ ಹಾಗೂ ಸುಳ್ಳು ಮಾಹಿತಿಯನ್ನು ನಾಟಕದ ಮೂಲಕ ಪ್ರಚಾರ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ವಿರುದ್ಧವೂ ಅಪಪ್ರಚಾರ ನಡೆಸಲಾಗಿದೆ. ಇದನ್ನು ಪ್ರಶ್ನಿಸಿದಾಗ ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ಆರೋಪಿಸಿ ಮತ್ತೊಂದು ದೂರು ದಾಖಲಾಗಿದೆ. ಎರಡೂ ಪ್ರಕರಣಗಳ ಸಂಬಂಧ ಪೊಲೀಸರು ಉಭಯ ಕಡೆಯವರಿಗೆ ನೋಟಿಸ್ ಜಾರಿ ಮಾಡಿ ತನಿಖೆ ಮುಂದುವರಿಸಿದ್ದಾರೆ.
ಸುಚಿತ್ರಾ ಅಕಾಡೆಮಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್
ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಆವರಣದ ಬಳಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎರಡು ಕೆಎಸ್ಆರ್ಪಿ ತುಕಡಿಗಳ ಜತೆಗೆ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ. ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಯಾವುದೇ ಕಾರ್ಯಕ್ರಮ ಇರುವುದಿಲ್ಲ ಎಂದು ಸೂಚಿಸುವ ನೋಟಿಸ್ ಅನ್ನು ಅಕಾಡೆಮಿ ಆವರಣದಲ್ಲಿ ಪ್ರದರ್ಶಿಸಲಾಗಿದೆ.
ನಾಟಕ ನಿಲ್ಲಿಸುವ ಉದ್ದೇಶದಿಂದಲೇ ಹಲ್ಲೆ: ಅಡ್ಡಂಡ ಕಾರ್ಯಪ್ಪ
ಈ ಕುರಿತು ಪ್ರತಿಕ್ರಿಯಿಸಿರುವ ಅಡ್ಡಂಡ ಕಾರ್ಯಪ್ಪ, 'ಗಾಂಧಿ ಹತ್ಯೆಯ ಸತ್ಯ' ನಾಟಕದ ಕುರಿತು ಈಗಾಗಲೇ ಪುಸ್ತಕವನ್ನೂ ಪ್ರಕಟಿಸಲಾಗಿದೆ. ಇತ್ತೀಚೆಗೆ ಸುಚಿತ್ರಾ ಅಕಾಡೆಮಿಯಲ್ಲಿ ನಾಟಕ ಪ್ರದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ 12ರಿಂದ 13 ಮಂದಿ ಬಂದು ಗಲಾಟೆ ನಡೆಸಿ ಹಲ್ಲೆ ಮಾಡಿದ್ದಾರೆ. ಮಹಿಳೆಯರ ಮೇಲೆಯೂ ಮಸಿ ಎರಚಿದ್ದಾರೆ. ಮತ್ತೆ ನಾಟಕ ಪ್ರದರ್ಶನ ಮಾಡಬಾರದು ಎಂದು ಬೆದರಿಕೆ ಹಾಕಿದ್ದಾರೆ' ಎಂದು ಆರೋಪಿಸಿದ್ದಾರೆ.
'ನಾಟಕ ಪ್ರದರ್ಶನವನ್ನು ನಿಲ್ಲಿಸುವುದೇ ಗಲಾಟೆ ನಡೆಸಿದವರ ಉದ್ದೇಶವಾಗಿತ್ತು. ನಾಟಕದಲ್ಲಿ ಕಾಂಗ್ರೆಸ್ ಎಂಬ ಪದವೂ ಬರಬಾರದು ಎಂಬ ಮನೋಭಾವ ಅವರಲ್ಲಿದೆ.
ಚರಿತ್ರೆಯಲ್ಲಿ ಉಲ್ಲೇಖವಾಗಿರುವ ಕೆಲವು ಅಂಶಗಳು ಅವರನ್ನು ಕೆರಳಿಸಿವೆ. ಆಕ್ಷೇಪಗಳಿದ್ದರೆ ಗೂಂಡಾಗಿರಿ ಮಾಡುವ ಬದಲು ಕಾನೂನುಬದ್ಧವಾಗಿ ಹೋರಾಟ ನಡೆಸಲಿ' ಎಂದು ಅವರು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R