ಹಾಲಿನ ದರ ಏರಿಕೆ ಬೆನ್ನಲ್ಲೇ ಕಾಫಿ, ಟೀ ಬೆಲೆಯೂ ₹5 ಹೆಚ್ಚಳ
ಮಿನಿ ಕಾಫಿ, ಟೀಗೆ ₹20; ಪೂರ್ಣ ಕಪ್ಗೆ ₹25 ನಿಗದಿ
Coffee-Tea-Prices-Hiked-By-Rs-5-Across-Karnataka-After-Milk-Price-Hike


ಬೆಂಗಳೂರು, 02 ನವೆಂಬರ್ (ಹಿ.ಸ.):

ರಾಜ್ಯದಲ್ಲಿ ಹಾಲಿನ ದರ ಏರಿಕೆಯ ಬಿಸಿ ಇದೀಗ ಕಾಫಿ ಮತ್ತು ಟೀ ಪ್ರಿಯರಿಗೂ ತಟ್ಟಿದೆ. ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ಹಾಲಿನ ದರ ಹೆಚ್ಚಳದ ಬೆನ್ನಲ್ಲೇ ರಾಜ್ಯಾದ್ಯಂತ ಹೋಟೆಲ್ಗಳಲ್ಲಿ ಕಾಫಿ ಮತ್ತು ಟೀ ಬೆಲೆಯನ್ನು ತಲಾ ಐದು ರೂಪಾಯಿ ಹೆಚ್ಚಿಸಲಾಗಿದೆ.

ಪರಿಷ್ಕೃತ ದರ ನವೆಂಬರ್ 2ರಿಂದಲೇ ಜಾರಿಗೆ ಬಂದಿದ್ದು, ಗ್ರಾಹಕರು ಹೆಚ್ಚುವರಿ ಹಣ ಪಾವತಿಸಬೇಕಾಗಿದೆ.

ಈ ಹಿಂದೆ 15 ರೂಪಾಯಿ ಇದ್ದ ಮಿನಿ ಕಾಫಿ ಮತ್ತು ಟೀ ಬೆಲೆ ಇದೀಗ 20 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ 20 ರೂಪಾಯಿ ಇದ್ದ ಪೂರ್ಣ ಕಪ್ ಕಾಫಿ ಮತ್ತು ಟೀ ಬೆಲೆ 25 ರೂಪಾಯಿಗೆ ತಲುಪಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಹೋಟೆಲ್ಗಳಲ್ಲಿ ಹೊಸ ದರ ಜಾರಿಯಾಗಿದೆ.

ಹಾಲಿನ ದರ ಏರಿಕೆ ಪ್ರಮುಖ ಕಾರಣ

ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಿಸಿರುವುದರಿಂದ ಹೋಟೆಲ್ಗಳ ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ. ಹಾಲಿನ ಜತೆಗೆ ಕಾಫಿ, ಟೀ ತಯಾರಿಕೆಗೆ ಅಗತ್ಯವಿರುವ ಇತರ ಸಾಮಗ್ರಿಗಳ ಬೆಲೆ ಹಾಗೂ ನಿರ್ವಹಣಾ ವೆಚ್ಚವನ್ನು ಪರಿಗಣಿಸಿ ದರ ಹೆಚ್ಚಳ ಮಾಡಲಾಗಿದೆ ಎಂದು ಸಾಗರ ಹೋಟೆಲ್ ಮಾಲೀಕ ಸದಾನಂದ ತಿಳಿಸಿದ್ದಾರೆ.

ಹಾಲಿನ ದರ ಏರಿಕೆಯಾದರೆ ಕಾಫಿ ಮತ್ತು ಟೀ ಬೆಲೆಯನ್ನೂ ಹೆಚ್ಚಿಸಬೇಕಾಗುತ್ತದೆ ಎಂದು ಹೋಟೆಲ್ ಮಾಲೀಕರು ಈ ಹಿಂದೆಯೇ ತಿಳಿಸಿದ್ದರು. ಅದರಂತೆ ಇದೀಗ ದರ ಪರಿಷ್ಕರಣೆ ಜಾರಿಗೆ ಬಂದಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande