ಚಿತ್ರ ಬಿಡುಗಡೆ ನೆಪದಲ್ಲಿ ಸೆನ್ಸಾರ್ ಮಂಡಳಿಗೆ ಒತ್ತಡ ಹೇರುವಂತಿಲ್ಲ: ಸಿಬಿಎಫ್ಸಿ ಕಟ್ಟುನಿಟ್ಟಿನ ಸೂಚನೆ
ಅಪೂರ್ಣ ಚಿತ್ರಗಳ ಅರ್ಜಿ ತಕ್ಷಣ ತಿರಸ್ಕಾರ; ಪ್ರಮಾಣಪತ್ರಕ್ಕೂ ಮುನ್ನ ಪ್ರಚಾರ ನಡೆಸದಂತೆ ನಿರ್ಮಾಪಕರಿಗೆ ಎಚ್ಚರಿಕೆ
CBFC-tightens-censor-certification-rules-no-rush-approvals-for-films


ಬೆಂಗಳೂರು, 02 ನವೆಂಬರ್ (ಹಿ.ಸ.):

ಸಿನಿಮಾ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಕೊನೆಯ ಕ್ಷಣದಲ್ಲಿ ಚಲನಚಿತ್ರ ಪ್ರಮಾಣಪತ್ರ ನೀಡುವಂತೆ ಒತ್ತಡ ಹೇರುವ ನಿರ್ಮಾಪಕರ ಪ್ರವೃತ್ತಿಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಕಡಿವಾಣ ಹಾಕಿದೆ.

ಬಿಡುಗಡೆ ದಿನಾಂಕ ಘೋಷಿಸಿರುವ ನೆಪದಲ್ಲಿ ಪ್ರಮಾಣೀಕರಣ ಪ್ರಕ್ರಿಯೆಯನ್ನು ಅವಸರವಾಗಿ ಪೂರ್ಣಗೊಳಿಸುವಂತೆ ಮಂಡಳಿಯ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಸಂಬಂಧ ಸಿಬಿಎಫ್‌ಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಸಿಂಗ್ ಅವರು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಸಿನಿಮಾಟೋಗ್ರಾಫ್ ಕಾಯ್ದೆ ಮತ್ತು 2024ರ ನಿಯಮಗಳ ಅನ್ವಯ ನಿಗದಿತ ಪ್ರಕ್ರಿಯೆ ಪೂರ್ಣಗೊಳಿಸಿ, ಸಮಗ್ರ ಪರಿಶೀಲನೆಯ ನಂತರವೇ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಅಪೂರ್ಣ ಚಿತ್ರಗಳ ಅರ್ಜಿ ತಿರಸ್ಕಾರ

ಹಿನ್ನೆಲೆ ಸಂಗೀತ, ದೃಶ್ಯಾವಳಿ, ಧ್ವನಿ ಸಂಯೋಜನೆ, ಶೀರ್ಷಿಕೆ ವಿವರಗಳು ಹಾಗೂ ಉಪಶೀರ್ಷಿಕೆ ಸೇರಿದಂತೆ ಎಲ್ಲ ತಾಂತ್ರಿಕ ಮತ್ತು ನಿರ್ಮಾಣೋತ್ತರ ಕೆಲಸಗಳನ್ನು ಪೂರ್ಣಗೊಳಿಸಿದ ಅಂತಿಮ ಚಿತ್ರಪ್ರತಿಯನ್ನೇ ಪ್ರಮಾಣೀಕರಣಕ್ಕೆ ಸಲ್ಲಿಸಬೇಕು.

ಅಪೂರ್ಣ ಚಿತ್ರಪ್ರತಿಗಳನ್ನು ಸಲ್ಲಿಸಿದರೆ ಯಾವುದೇ ಮುಲಾಜಿಲ್ಲದೆ ಅರ್ಜಿಯನ್ನು ತಕ್ಷಣ ತಿರಸ್ಕರಿಸಲಾಗುವುದು ಎಂದು ಮಂಡಳಿ ಎಚ್ಚರಿಸಿದೆ.

ಅರ್ಜಿಯಲ್ಲಿ ಚಿತ್ರದ ಶೀರ್ಷಿಕೆ ನಮೂದಿಸಿರುವ ಮಾತ್ರಕ್ಕೆ ಅದು ಅಂತಿಮಗೊಂಡಿದೆ ಎಂದರ್ಥವಲ್ಲ. ಅಗತ್ಯವಿದ್ದಲ್ಲಿ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುವ ಕಾನೂನು ಅಧಿಕಾರ ಪರಿಶೀಲನಾ ಸಮಿತಿಗೆ ಇದೆ ಎಂದು ಸ್ಪಷ್ಟಪಡಿಸಿದೆ.

ಪ್ರಮಾಣಪತ್ರಕ್ಕೂ ಮುನ್ನ ಪ್ರಚಾರ ಬೇಡ

ಚಿತ್ರಕ್ಕೆ ಅಧಿಕೃತ ಪ್ರಮಾಣಪತ್ರ ದೊರೆಯುವ ಮುನ್ನವೇ ಶೀರ್ಷಿಕೆ ಅಂತಿಮವಾಗಿದೆ ಎಂದು ಭಾವಿಸಿ ಪ್ರಚಾರ ಕಾರ್ಯ ಆರಂಭಿಸಬಾರದು ಎಂದು ನಿರ್ಮಾಪಕರಿಗೆ ಸೂಚಿಸಲಾಗಿದೆ.

ಬಿಡುಗಡೆ ದಿನಾಂಕಕ್ಕೆ ಸಾಕಷ್ಟು ಮುಂಚಿತವಾಗಿಯೇ ಪ್ರಮಾಣೀಕರಣಕ್ಕೆ ಅರ್ಜಿ ಸಲ್ಲಿಸಿ, ಅಗತ್ಯ ಸಮಯಾವಕಾಶ ಕಲ್ಪಿಸಿಕೊಳ್ಳಬೇಕು ಎಂದು ತಿಳಿಸಿದೆ.

ಕೊನೆಯ ಕ್ಷಣದಲ್ಲಿ ಗಡಿಬಿಡಿಯಿಂದ ಪ್ರಮಾಣಪತ್ರ ನೀಡುವಂತೆ ಮಂಡಳಿಯ ಮೇಲೆ ಒತ್ತಡ ಹೇರುವುದನ್ನು ಸಹಿಸುವುದಿಲ್ಲ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande