ಅಂಬರೀಶ್ ರಸ್ತೆ ಆಕರ್ಷಕ ಸಾರ್ವಜನಿಕ ತಾಣವಾಗಿ ಅಭಿವೃದ್ಧಿ: ಮಹೇಶ್ವರ ರಾವ್ ಸೂಚನೆ
ಬೆಂಗಳೂರು, 02 ನವೆಂಬರ್ (ಹಿ.ಸ.): ಬೆಂಗಳೂರಿನ ರಸ್ತೆ ಅಭಿವೃದ್ಧಿ, ಪಾದಚಾರಿ ಸುರಕ್ಷತೆ, ಹಸಿರು ಪ್ರದೇಶಗಳ ನಿರ್ಮಾಣ ಹಾಗೂ ಸಾರ್ವಜನಿಕ ಸೌಲಭ್ಯಗಳ ಸುಧಾರಣೆಗೆ ಆದ್ಯತೆ ನೀಡಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ
ಅಭಿವೃದ್ಧಿ ಕಾರ್ಯ ಪರಿಶೀಲಿಸಿದ ಜಿಬಿಎ ಮುಖ್ಯ ಆಯುಕ್ತ


ಬೆಂಗಳೂರು, 02 ನವೆಂಬರ್ (ಹಿ.ಸ.):

ಬೆಂಗಳೂರಿನ ರಸ್ತೆ ಅಭಿವೃದ್ಧಿ, ಪಾದಚಾರಿ ಸುರಕ್ಷತೆ, ಹಸಿರು ಪ್ರದೇಶಗಳ ನಿರ್ಮಾಣ ಹಾಗೂ ಸಾರ್ವಜನಿಕ ಸೌಲಭ್ಯಗಳ ಸುಧಾರಣೆಗೆ ಆದ್ಯತೆ ನೀಡಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಡಾ. ಎಂ.ಎಚ್. ಅಂಬರೀಶ್ ರಸ್ತೆ (ರೇಸ್ ಕೋರ್ಸ್ ರಸ್ತೆ)ಯನ್ನು ಆಕರ್ಷಕ ಹಾಗೂ ನಾಗರಿಕ ಸ್ನೇಹಿ ಸಾರ್ವಜನಿಕ ತಾಣವಾಗಿ ರೂಪಿಸಲು ಸಮಗ್ರ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಂಬರೀಶ್ ರಸ್ತೆಗೆ ಹಸಿರು ಕಾರಿಡಾರ್

ಮೌರ್ಯ ವೃತ್ತದ ಸಮೀಪ ಹಸಿರು ಕಾರಿಡಾರ್ ಮತ್ತು ಸಾರ್ವಜನಿಕ ಸ್ಥಳ ಅಭಿವೃದ್ಧಿಪಡಿಸುವಂತೆ ಸೂಚಿಸಿದರು. ಪಾದಚಾರಿ ಮಾರ್ಗ ಹಾಗೂ ಬಫರ್ ವಲಯದ ಕಾಮಗಾರಿಗಳನ್ನು ಪೂರ್ಣಗೊಳಿಸುವುದು, ಆಕರ್ಷಕ ಬೀದಿದೀಪ ಅಳವಡಿಸುವುದು, ಸಸಿಗಳನ್ನು ನೆಡುವುದು ಮತ್ತು ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಿದರು. ಸಾರ್ವಜನಿಕ ಶೌಚಾಲಯ ನಿರ್ಮಾಣ ಹಾಗೂ ಪ್ರತ್ಯೇಕ ಸೈಕಲ್ ಮಾರ್ಗ ಅಭಿವೃದ್ಧಿಪಡಿಸುವಂತೆಯೂ ತಿಳಿಸಿದರು.

ಮೌರ್ಯ ವೃತ್ತದಿಂದ ಹರೇಕೃಷ್ಣ ಜಂಕ್ಷನ್‌ವರೆಗಿನ 900 ಮೀಟರ್ ಉದ್ದದ ರಸ್ತೆಯ ಕಾಂಕ್ರೀಟ್ ಮೇಲ್ಮೈ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.

ಮಲ್ಲೇಶ್ವರಂ ಸಂಪರ್ಕ ರಸ್ತೆಯ ಅಭಿವೃದ್ಧಿ

780 ಮೀಟರ್ ಉದ್ದದ ಮಲ್ಲೇಶ್ವರಂ ಸಂಪರ್ಕ ರಸ್ತೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ವಿವಿಧ ಉಪಯುಕ್ತ ಸೇವೆಗಳ ಮಾರ್ಗ ಸ್ಥಳಾಂತರ ಮತ್ತು ಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಸ್ಮಾರ್ಟ್ ಬಜಾರ್ ಮುಂಭಾಗದ ಜಾಗವನ್ನು ವಿವಿಧ ಸಾರ್ವಜನಿಕ ಉದ್ದೇಶಗಳಿಗೆ ಬಳಸಿಕೊಳ್ಳುವಂತೆ ಅಭಿವೃದ್ಧಿಪಡಿಸಬೇಕು. ಈಗಿರುವ ಸಾರ್ವಜನಿಕ ಶೌಚಾಲಯವನ್ನು ನವೀಕರಿಸಿ, ಪಾದಚಾರಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ನಿರ್ದೇಶನ ನೀಡಿದರು.

ಪಾದಚಾರಿ ಮಾರ್ಗಕ್ಕೆ ಹಾನಿ ಮಾಡಿದರೆ ದಂಡ

ಪ್ಲಾಟ್‌ಫಾರಂ ರಸ್ತೆಯಲ್ಲಿ ಪಾದಚಾರಿ ಮಾರ್ಗಗಳ ನಿರ್ಮಾಣದಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕು. ಪಾದಚಾರಿ ಮಾರ್ಗದ ಇಳಿಜಾರು ಪ್ರವೇಶ ದಾರಿಗಳನ್ನು ವಾಹನಗಳ ಮೂಲಕ ಹಾನಿಗೊಳಿಸುವವರ ವಿರುದ್ಧ ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮೆಟ್ರೊ ಹಳಿಗಳ ಕೆಳಭಾಗದಲ್ಲಿರುವ ಕಳೆಗಿಡಗಳನ್ನು ತೆರವುಗೊಳಿಸಿ, ನೆಲಕ್ಕೆ ನೆಲಹಾಸು ಕಲ್ಲುಗಳನ್ನು ಅಳವಡಿಸಬೇಕು. ಮಂತ್ರಿ ಮಾಲ್ ಸಮೀಪದ ಕಟ್ಟಡಗಳ ಮೇಲ್ಭಾಗದಲ್ಲಿ ನಿಲುಗಡೆ ಮಾಡಿರುವ ಯಾವುದೇ ನಿರ್ವಹಣೆಯಿಲ್ಲದ ಕ್ರೇನ್‌ಗಳನ್ನು ಸಂಭವನೀಯ ಅಪಾಯ ತಡೆಗಟ್ಟುವ ಉದ್ದೇಶದಿಂದ ತಕ್ಷಣ ತೆರವುಗೊಳಿಸುವಂತೆ ಸೂಚಿಸಿದರು.

ಒಕಳಿಪುರಂ ಎಂಟು ಪಥದ ಕಾರಿಡಾರ್ ಕಾಮಗಾರಿ ಚುರುಕು

ಒಕಳಿಪುರಂ ಎಂಟು ಪಥದ ಕಾರಿಡಾರ್‌ನಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ವಿದ್ಯುತ್ ಕೇಬಲ್‌ಗಳನ್ನು ಸ್ಥಳಾಂತರಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದೊಂದಿಗೆ ಸಮನ್ವಯ ಸಾಧಿಸಬೇಕು. ಬಾಕಿ ಉಳಿದಿರುವ ತಡೆಗೋಡೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಮಳೆನೀರು ಚರಂಡಿಯ ಕೊಳವೆಗಳನ್ನು ಭೂಗತವಾಗಿ ಅಳವಡಿಸುವ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಬೇಕು. ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ನಿಗಮವೇ ಕೈಗೊಂಡು, ಅದಕ್ಕೆ ತಗಲುವ ವೆಚ್ಚವನ್ನು ರೈಲ್ವೆ ಇಲಾಖೆಯಿಂದ ವಸೂಲಿ ಮಾಡುವಂತೆ ಸೂಚಿಸಿದರು.

ನಗರದಲ್ಲಿ ಉತ್ತಮ ರಸ್ತೆಗಳು, ಸುರಕ್ಷಿತ ಪಾದಚಾರಿ ವ್ಯವಸ್ಥೆ, ಹಸಿರು ಸಾರ್ವಜನಿಕ ಸ್ಥಳಗಳು ಹಾಗೂ ಸುಧಾರಿತ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವುದು ಅಭಿವೃದ್ಧಿ ಕಾಮಗಾರಿಗಳ ಪ್ರಮುಖ ಉದ್ದೇಶವಾಗಿದೆ ಎಂದು ಮಹೇಶ್ವರ ರಾವ್ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande