ವಾಯುಪಡೆಯ 52ನೇ ಉಪ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಇಂದ್ರಪಾಲ್ ಸಿಂಗ್ ವಾಲಿಯಾ ಅಧಿಕಾರ ಸ್ವೀಕಾರ
ನವದೆಹಲಿ, 02 ನವೆಂಬರ್ (ಹಿ.ಸ.): ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಏರ್ ಮಾರ್ಷಲ್ ಇಂದ್ರಪಾಲ್ ಸಿಂಗ್ ವಾಲಿಯಾ ಅವರು ವಾಯುಪಡೆಯ 52ನೇ ಉಪ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲದ
एयर मार्शल इंद्रपाल सिंह वालिया 52वें वाइस चीफ का पद संभालने के बाद


ನವದೆಹಲಿ, 02 ನವೆಂಬರ್ (ಹಿ.ಸ.):

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಏರ್ ಮಾರ್ಷಲ್ ಇಂದ್ರಪಾಲ್ ಸಿಂಗ್ ವಾಲಿಯಾ ಅವರು ವಾಯುಪಡೆಯ 52ನೇ ಉಪ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಮೂರು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ ಅವರು ಮಿಗ್-21, ಮಿಗ್-23, ಮಿಗ್-27, ಜಾಗ್ವಾರ್ ಹಾಗೂ ಸುಖೋಯ್-30 ಎಂಕೆಐ ಸೇರಿದಂತೆ ವಿವಿಧ ಯುದ್ಧ ವಿಮಾನಗಳಲ್ಲಿ 3,200 ಗಂಟೆಗಳಿಗೂ ಅಧಿಕ ಕಾಲ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.

ಅಧಿಕಾರ ಸ್ವೀಕರಿಸುವ ಮುನ್ನ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪುಷ್ಪನಮನ ಸಲ್ಲಿಸಿದರು. ಬಳಿಕ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.

1988ರ ಜೂನ್ 11ರಂದು ಭಾರತೀಯ ವಾಯುಪಡೆಯ ಯುದ್ಧ ವಿಮಾನ ವಿಭಾಗದಲ್ಲಿ ನಿಯೋಜನೆಗೊಂಡ ಇಂದ್ರಪಾಲ್ ಸಿಂಗ್ ವಾಲಿಯಾ ಅವರು ಖಡಕ್‌ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ದುಂಡಿಗಲ್‌ನ ವಾಯುಪಡೆ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಬ್ರಿಟನ್‌ನ ಉನ್ನತ ಕಮಾಂಡ್ ಮತ್ತು ಸಿಬ್ಬಂದಿ ತರಬೇತಿ ಕೋರ್ಸ್ ಹಾಗೂ ಬಾಂಗ್ಲಾದೇಶದ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿಯೂ ತರಬೇತಿ ಪಡೆದಿದ್ದಾರೆ. ರಕ್ಷಣಾ ಮತ್ತು ಕಾರ್ಯತಂತ್ರ ಅಧ್ಯಯನದಲ್ಲಿ ಮೂರು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ.

ಅತ್ಯಂತ ಅನುಭವಿ ಯುದ್ಧ ವಿಮಾನ ಚಾಲಕರಾಗಿರುವ ಅವರು, ವಿಮಾನ ಚಾಲನಾ ಉಪಕರಣಗಳ ಬಳಕೆಯ ತರಬೇತಿ ನೀಡುವ ಬೋಧಕ ಹಾಗೂ ಪರೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 222ನೇ ಯುದ್ಧ ವಿಮಾನ ದಳದ ಕಮಾಂಡಿಂಗ್ ಅಧಿಕಾರಿ ಹಾಗೂ ಯುದ್ಧ ತಂತ್ರ ಮತ್ತು ಸಮರಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಮುಂಚೂಣಿ ಯುದ್ಧ ವಿಮಾನ ದಳ ಮತ್ತು ಬರೇಲಿ ವಾಯುನೆಲೆಯ ವಾಯು ಅಧಿಕಾರಿ ಕಮಾಂಡಿಂಗ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

2008ರಲ್ಲಿ ವಾಯುಸೇನಾ ಪದಕ ಹಾಗೂ 2018ರಲ್ಲಿ ಅತಿವಿಶಿಷ್ಟ ಸೇವಾ ಪದಕ ನೀಡಿ ಅವರನ್ನು ಗೌರವಿಸಲಾಗಿದೆ.

ಏರ್ ಕಮೋಡೋರ್ ಆಗಿದ್ದ ಸಂದರ್ಭದಲ್ಲಿ ಪೂರ್ವ ವಾಯು ಕಮಾಂಡ್‌ನಲ್ಲಿ ಏರ್-1 ಅಧಿಕಾರಿಯಾಗಿ ಹಾಗೂ ನವದೆಹಲಿಯ ವಾಯುಪಡೆ ಪ್ರಧಾನ ಕಚೇರಿಯಲ್ಲಿ ವಾಯು ಸಿಬ್ಬಂದಿ ಪರಿಶೀಲನಾ ವಿಭಾಗದ ಏರ್ ಕಮೋಡೋರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ರಕ್ಷಣಾ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಈ ಹಿಂದೆ ಪೂರ್ವ ವಾಯು ಕಮಾಂಡ್‌ನ ಹಿರಿಯ ವಾಯು ಸಿಬ್ಬಂದಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅವರು, 2024ರ ಸೆಪ್ಟೆಂಬರ್ 9ರಂದು ಶಿಲ್ಲಾಂಗ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ 2026ರ ಫೆಬ್ರವರಿ 1ರಂದು ಪೂರ್ವ ವಾಯು ಕಮಾಂಡ್‌ನ ಮುಖ್ಯಸ್ಥರಾಗಿ ನೇಮಕಗೊಂಡು, ಜನವರಿ 31ರಂದು ನಿವೃತ್ತರಾದ ಏರ್ ಮಾರ್ಷಲ್ ಸೂರತ್ ಸಿಂಗ್ ಅವರ ಸ್ಥಾನವನ್ನು ಅಲಂಕರಿಸಿದ್ದರು.

ಇದೀಗ ಏರ್ ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಅವರು ವಾಯುಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಇಂದ್ರಪಾಲ್ ಸಿಂಗ್ ವಾಲಿಯಾ ಅವರು 52ನೇ ಉಪ ಮುಖ್ಯಸ್ಥರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

-------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande