
ಗದಗ, 18 ನವೆಂಬರ್ (ಹಿ.ಸ.)
ಗದಗ ಜಿಲ್ಲೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ದಂಧೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸರ್ಕಾರಿ ಹಾಗೂ ಖಾಸಗಿ ಗುಡ್ಡಗಳು ಅಕ್ರಮ ದಂಧೆಕೋರರ ಕಣ್ಣಿಗೆ ಗುರಿಯಾಗಿವೆ. ರಾತ್ರಿ ವೇಳೆ ಯಾರ ಭಯವೂ ಇಲ್ಲದೆ ಜೆಸಿಬಿ ಯಂತ್ರಗಳ ಮೂಲಕ ಗುಡ್ಡಗಳನ್ನು ಅಗೆದು ಮಣ್ಣು ಸಾಗಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ನಡುವೆ ಅಕ್ರಮವಾಗಿ ಮಣ್ಣು ಅಗೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಗುಡ್ಡ ಕುಸಿದು ಜೆಸಿಬಿ ಚಾಲಕ ಗಾಯಗೊಂಡಿದ್ದು, ಜೆಸಿಬಿ ಯಂತ್ರವೂ ಜಖಂಗೊಂಡಿರುವ ಘಟನೆ ಗದಗ ತಾಲೂಕಿನ ನಾಗಾವಿ ಗ್ರಾಮದ ಸಮೀಪ ಬೆಳಕಿಗೆ ಬಂದಿದೆ.
ರಾತ್ರೋರಾತ್ರಿ ಗುಡ್ಡದ ಮಣ್ಣನ್ನು ಅಗೆದು ಸಾಗಿಸುತ್ತಿದ್ದ ಸಂದರ್ಭದಲ್ಲಿ ಮಣ್ಣಿನ ರಾಶಿ ಏಕಾಏಕಿ ಕುಸಿದಿದೆ. ಈ ವೇಳೆ ಮಣ್ಣು ಅಗೆಯುತ್ತಿದ್ದ ಜೆಸಿಬಿ ಯಂತ್ರಕ್ಕೆ ಹಾನಿಯಾಗಿದ್ದು, ಚಾಲಕನಿಗೂ ಗಾಯವಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಈ ಘಟನೆ ನಡೆದ ಬಳಿಕ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರು ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಾಗಾವಿ ಗ್ರಾಮದ ಸಮೀಪದ ಗುಡ್ಡದಲ್ಲಿ ರಾತ್ರಿ ವೇಳೆ ಜೆಸಿಬಿ ಮೂಲಕ ಮಣ್ಣು ಅಗೆಯುವ ಕಾರ್ಯ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಗುಡ್ಡ ಕುಸಿದು ಜೆಸಿಬಿ ಜಖಂಗೊಂಡ ಬೆನ್ನಲ್ಲೇ, ಘಟನೆ ನಡೆದ ಸ್ಥಳದಿಂದ ಸುಮಾರು ಒಂದು ಕಿಲೋಮೀಟರ್ ದೂರಕ್ಕೆ ಯಂತ್ರವನ್ನು ಸಾಗಿಸಿ ಬಚ್ಚಿಡಲಾಗಿದೆ ಎನ್ನಲಾಗಿದೆ. ಗಾಯಗೊಂಡ ಚಾಲಕನನ್ನೂ ಸ್ಥಳದಿಂದ ಬೇರೆಡೆಗೆ ಕರೆದೊಯ್ದು ನಾಪತ್ತೆ ಮಾಡಲಾಗಿದೆ ಎಂದು ಹೋರಾಟಗಾರ ಮತ್ತಣ್ಣ ಆರೋಪ ಮಾಡಿದ್ದಾರೆ
ಘಟನೆ ನಡೆದ ಸ್ಥಳದಲ್ಲಿ ಜೆಸಿಬಿ ಯಂತ್ರ ಕಾಣಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಕ್ರಮ ಗಣಿಗಾರಿಕೆ ವೇಳೆ ಗುಡ್ಡ ಕುಸಿದಿರುವ ವಿಚಾರ ಹೊರಬಂದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಸಾಕ್ಷ್ಯಗಳನ್ನು ಮರೆಮಾಚಲು ಪ್ರಯತ್ನಿಸಲಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಧಿಕಾರಿಗಳ ಭೇಟಿ ಬಳಿಕವೂ ಮಾಯವಾದ ಜೆಸಿಬಿ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ರಕ್ಷಿತ ಹಾಗೂ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಷ್ಟರಲ್ಲಿ ಜೆಸಿಬಿ ಯಂತ್ರವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು ಎನ್ನಲಾಗಿದೆ. ಅಧಿಕಾರಿಗಳ ಪರಿಶೀಲನೆಯ ನಂತರವೂ ಜಖಂಗೊಂಡ ಜೆಸಿಬಿ ಯಂತ್ರವನ್ನು ಪತ್ತೆಹಚ್ಚುವ ವಿಚಾರದಲ್ಲಿ ಹಲವು ಪ್ರಶ್ನೆಗಳು ಎದುರಾಗಿವೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅಗತ್ಯ ಪರವಾನಗಿ ಪಡೆಯದೆ ಮಣ್ಣು ಗಣಿಗಾರಿಕೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವವರು ಯಾರು? ಜೆಸಿಬಿ ಯಾರಿಗೆ ಸೇರಿದೆ? ಗಾಯಗೊಂಡ ಚಾಲಕ ಯಾರು? ಯಂತ್ರವನ್ನು ಸ್ಥಳಾಂತರಿಸಿದವರು ಯಾರು? ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಗದಗ-ಬೆಟಗೇರಿ ಅವಳಿ ನಗರಕ್ಕೆ ಮಣ್ಣಿನ ಬೇಡಿಕೆ; ಗುಡ್ಡಗಳೇ ದಂಧೆಕೋರರ ಟಾರ್ಗೆಟ್!
ಗದಗ-ಬೆಟಗೇರಿ ಅವಳಿ ನಗರದಲ್ಲಿ ಮನೆ ನಿರ್ಮಾಣ, ನಿವೇಶನಗಳ ಭರ್ತಿ, ಕಟ್ಟಡ ಕಾಮಗಾರಿಗಳು ಸೇರಿದಂತೆ ವಿವಿಧ ಉದ್ದೇಶಗಳಿಗೆ ಮಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಈ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ದಂಧೆಕೋರರು ಸರ್ಕಾರಿ ಜಾಗಗಳು ಹಾಗೂ ಖಾಸಗಿ ಗುಡ್ಡಗಳನ್ನು ಗುರಿಯಾಗಿಸಿಕೊಂಡು ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾರೆ ಎಂಬ ಆರೋಪಗಳಿವೆ.
ಹಗಲಿನಲ್ಲಿ ಅಧಿಕಾರಿಗಳ ಕಣ್ಣಿಗೆ ಬೀಳದಂತೆ ರಾತ್ರಿ ವೇಳೆ ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ಮಣ್ಣು ಅಗೆಯಲಾಗುತ್ತಿದೆ ಎನ್ನಲಾಗಿದೆ. ಹೀಗೆ ಅಕ್ರಮವಾಗಿ ಮಣ್ಣು ಸಾಗಿಸುವುದರಿಂದ ಗುಡ್ಡಗಳ ಸ್ವರೂಪವೇ ಬದಲಾಗುತ್ತಿದೆ. ಪರಿಸರದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಗುಡ್ಡ ಕುಸಿತದಂತಹ ಅಪಾಯಕಾರಿ ಘಟನೆಗಳಿಗೂ ಕಾರಣವಾಗುತ್ತಿದೆ.
ನಾಗಾವಿ ಗ್ರಾಮದ ಸಮೀಪ ನಡೆದಿರುವ ಘಟನೆ ಅಕ್ರಮ ಗಣಿಗಾರಿಕೆಯ ಅಪಾಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಮಣ್ಣು ಅಗೆಯುವ ಸಂದರ್ಭದಲ್ಲಿ ಗುಡ್ಡ ಕುಸಿದಿದ್ದು, ಚಾಲಕನ ಜೀವಕ್ಕೂ ಅಪಾಯ ಎದುರಾಗಿದೆ. ಒಂದು ವೇಳೆ ಗುಡ್ಡದ ಮಣ್ಣು ಸಂಪೂರ್ಣವಾಗಿ ಕುಸಿದು ಜೆಸಿಬಿ ಚಾಲಕ ಅದರಡಿ ಸಿಲುಕಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.
ಜಿಲ್ಲೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳು ಪದೇಪದೆ ಕೇಳಿಬರುತ್ತಿದ್ದರೂ, ಇದಕ್ಕೆ ಕಡಿವಾಣ ಹಾಕುವಲ್ಲಿ ಸಂಬಂಧಪಟ್ಟ ಇಲಾಖೆಗಳು ಯಾವ ಕ್ರಮ ಕೈಗೊಂಡಿವೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ರಾತ್ರಿ ವೇಳೆ ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣು ತೆಗೆಯುವ ಮತ್ತು ವಾಹನಗಳ ಮೂಲಕ ಸಾಗಿಸುವ ಕಾರ್ಯ ನಡೆಯುತ್ತಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಸಿಗುತ್ತಿಲ್ಲವೇ? ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಸ್ಥಳಗಳನ್ನು ಗುರುತಿಸಿ ಪರಿಶೀಲನೆ ನಡೆಸಲು ಸಾಧ್ಯವಾಗುತ್ತಿಲ್ಲವೇ? ಎಂಬ ಪ್ರಶ್ನೆಗಳು ಎದುರಾಗಿವೆ.
ಈಗ ನಾಗಾವಿ ಗ್ರಾಮದ ಸಮೀಪ ಗುಡ್ಡ ಕುಸಿದು ಜೆಸಿಬಿ ಜಖಂಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿದ ಹೋರಾಟಗಾರ ಮುತ್ತಣ್ಣ ಅವರು, ಜಿಲ್ಲೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಿಯಂತ್ರಣಕ್ಕೆ ಸಂಬಂಧಪಟ್ಟ ಇಲಾಖೆಗಳು ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಹಾಗೂ ಖಾಸಗಿ ಗುಡ್ಡಗಳನ್ನು ಅಕ್ರಮವಾಗಿ ಅಗೆದು ಮಣ್ಣು ಸಾಗಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಡಾ. ಉಮೇಶ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ದೂರು ದಾಖಲಿಸಿರುವ ಕುರಿತು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ, ಗದಗ ಜಿಲ್ಲೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ದಂಧೆಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತಗಳು ಸಂಭವಿಸುವ ಆತಂಕವಿದೆ. ನಾಗಾವಿ ಗ್ರಾಮದ ಸಮೀಪ ನಡೆದಿರುವ ಗುಡ್ಡ ಕುಸಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವವರನ್ನು ಪತ್ತೆಹಚ್ಚಬೇಕು. ಜಖಂಗೊಂಡ ಜೆಸಿಬಿ ಯಂತ್ರವನ್ನು ವಶಕ್ಕೆ ಪಡೆದು, ಗಾಯಗೊಂಡ ಚಾಲಕನ ಹೇಳಿಕೆ ದಾಖಲಿಸಬೇಕು. ಅಕ್ರಮವಾಗಿ ಮಣ್ಣು ಸಾಗಿಸಿರುವ ವಾಹನಗಳು ಹಾಗೂ ದಂಧೆಯ ಹಿಂದೆ ಇರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP