
ನವದೆಹಲಿ, 18 ನವೆಂಬರ್ (ಹಿ.ಸ.):
ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೈಬಾ ಸಂಘಟನೆಯ ಕಮಾಂಡರ್ ಮೊಹಮ್ಮದ್ ಲತೀಫ್ ಭಟ್‌ನನ್ನು ಹತ್ಯೆ ಮಾಡಲಾಗಿದೆ. ಈತ ಕಾಶ್ಮೀರ ಕಣಿವೆಯಲ್ಲಿ ಲಷ್ಕರ್ ಸಂಘಟನೆಯ ಕೊನೆಯ ಪರಿಚಿತ ಸ್ಥಳೀಯ ಸಕ್ರಿಯ ಉಗ್ರನಾಗಿದ್ದ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಜಮ್ಮು-ಕಾಶ್ಮೀರ ಪೊಲೀಸರು, ಭಾರತೀಯ ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಹಾಗೂ ಗುಪ್ತಚರ ಸಂಸ್ಥೆಗಳ ಜಂಟಿ ಸಮನ್ವಯದೊಂದಿಗೆ ಬುಧವಾರ ಮುಂಜಾನೆ ಕುಲ್ಗಾಮ್‌ನಲ್ಲಿ ಕಾರ್ಯಾಚರಣೆ ನಡೆಸಿ ಲತೀಫ್ ಭಟ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಲತೀಫ್‌ನ ಉಗ್ರ ಸಹಚರ ಉಮರ್ ನಿಸಾರ್‌ನನ್ನು ಇದಕ್ಕೂ ಒಂದು ದಿನ ಮೊದಲು ಕುಲ್ಗಾಮ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಸಂಪೂರ್ಣ ಕಾರ್ಯಾಚರಣೆಯು ಭದ್ರತಾ ಸಂಸ್ಥೆಗಳ ನಡುವಿನ ಉನ್ನತ ಮಟ್ಟದ ಸಮನ್ವಯಕ್ಕೆ ಸಾಕ್ಷಿಯಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಜಮ್ಮು-ಕಾಶ್ಮೀರ ಪೊಲೀಸರು, ಸೇನೆ, ಸಿಆರ್‌ಪಿಎಫ್ ಮತ್ತು ಗುಪ್ತಚರ ಸಂಸ್ಥೆಗಳ ಸಿಬ್ಬಂದಿಯ ಧೈರ್ಯ ಹಾಗೂ ಸಾಹಸವನ್ನು ಶ್ಲಾಘಿಸಿದ ಅವರು, ರಾಷ್ಟ್ರವು ಅವರ ಶೌರ್ಯಕ್ಕೆ ಗೌರವ ಸಲ್ಲಿಸುತ್ತದೆ ಎಂದಿದ್ದಾರೆ.
ಇದೇ ವೇಳೆ, ಕಾಶ್ಮೀರ ವಲಯದ ಪೊಲೀಸರು ಬುಧವಾರ ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿ, ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಹತ್ಯೆಯಾದ ಉಗ್ರನ ಮೃತದೇಹ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಮೃತ ಉಗ್ರನನ್ನು ಕುಲ್ಗಾಮ್ ಜಿಲ್ಲೆಯ ಖ್ರೇವಾನ್ ನಿವಾಸಿ ಮೊಹಮ್ಮದ್ ಲತೀಫ್ ಭಟ್ ಎಂದು ಗುರುತಿಸಲಾಗಿದೆ.
ಕಾರ್ಯಾಚರಣೆ ಬಳಿಕ ಸಿಆರ್‌ಪಿಎಫ್ ಮಹಾನಿರ್ದೇಶಕ ಜಿ.ಪಿ. ಸಿಂಗ್ ಅವರು ಭದ್ರತಾ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಲಭ್ಯ ಮಾಹಿತಿಯ ಪ್ರಕಾರ, 22 ವರ್ಷದ ಲತೀಫ್ ಭಟ್ ಈ ಹಿಂದೆ ಮರಗೆಲಸ ಮಾಡುತ್ತಿದ್ದ. ಆತನ ಸುಳಿವು ನೀಡಿದವರಿಗೆ 15 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ನವೆಂಬರ್ 11ರಂದು ಕುಲ್ಗಾಮ್‌ನಲ್ಲಿ ಸಿಆರ್‌ಪಿಎಫ್‌ನ ತಪಾಸಣಾ ಕೇಂದ್ರದ ಮೇಲೆ ನಡೆದ ದಾಳಿಯಲ್ಲಿ ಈತ ಭಾಗಿಯಾಗಿದ್ದ ಎನ್ನಲಾಗಿದೆ. ಈ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದರು.
ಕಾರ್ಯಾಚರಣೆಯ ಸಂದರ್ಭದಲ್ಲಿ ಭದ್ರತಾ ಪಡೆಗಳು ಲತೀಫ್ ಭಟ್‌ಗೆ ಶರಣಾಗಲು ಹಲವು ಅವಕಾಶಗಳನ್ನು ನೀಡಿದ್ದವು. ವಿಡಿಯೊ ಕರೆ ಮೂಲಕವೂ ಮನವೊಲಿಸಲು ಪ್ರಯತ್ನಿಸಲಾಗಿತ್ತು. ಆದರೆ, ಆತ ಶರಣಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ಮುಂದುವರಿಸಿದವು. ಮಸೀದಿಯೊಂದರಲ್ಲಿ ಅಡಗಿದ್ದ ಆತನನ್ನು ಹೊರಗೆ ಕರೆತರಲು ಅಶ್ರುವಾಯು ಪ್ರಯೋಗಿಸಲಾಗಿತ್ತು. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಆತನನ್ನು ಹತ್ಯೆ ಮಾಡಲಾಯಿತು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.