₹7,500 ಕನಿಷ್ಠ ಪಿಂಚಣಿಗೆ ಆಗ್ರಹಿಸಿ ದಾವಣಗೆರೆಯಲ್ಲಿ ಇಪಿಎಸ್-95 ಪಿಂಚಣಿದಾರರ ಪ್ರತಿಭಟನೆ
ಕನಿಷ್ಠ ₹7,500 ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಾವಣಗೆರೆಯಲ್ಲಿ ಇಪಿಎಸ್-95 ಪಿಂಚಣಿದಾರರು ಪಿಎಫ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
EPS-95-pensioners-protest-in-davangere-demand-rs-7500-minimum-pension


ದಾವಣಗೆರೆ, 18 ನವೆಂಬರ್ (ಹಿ.ಸ.):

ಕನಿಷ್ಠ ಮಾಸಿಕ ಪಿಂಚಣಿಯನ್ನು ₹7,500ಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಸಂಘರ್ಷ ಸಮಿತಿ ಇಪಿಎಸ್-95 ಪಿಂಚಣಿದಾರರ ಸಂಘದ ವತಿಯಿಂದ ನಗರದ ಪಿಎಫ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಖಾಸಗಿ, ಸಾರ್ವಜನಿಕ, ನಿಗಮ, ಮಂಡಳಿ ಹಾಗೂ ಸಹಕಾರ ವಲಯಗಳಲ್ಲಿ ಸುಮಾರು 30ರಿಂದ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕಾರ್ಮಿಕರಿಗೆ ಇಂದಿಗೂ ಸಮರ್ಪಕ ಪಿಂಚಣಿ ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

2014ರಿಂದ ಕನಿಷ್ಠ ₹1,000 ಪಿಂಚಣಿ ನೀಡಲಾಗುತ್ತಿದೆ. ಆದರೆ ಇಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಕೇವಲ ₹1,000 ಪಿಂಚಣಿಯಲ್ಲಿ ಜೀವನ ನಡೆಸುವುದು ಅತ್ಯಂತ ಕಷ್ಟಕರವಾಗಿದೆ.

ದಶಕಗಳ ಕಾಲ ದುಡಿದು ನಿವೃತ್ತರಾದ ಹಿರಿಯ ನಾಗರಿಕರು ಗೌರವಯುತ ಜೀವನ ನಡೆಸಲು ಅಗತ್ಯವಾದಷ್ಟು ಪಿಂಚಣಿ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸಂಘರ್ಷ ಸಮಿತಿಯ ರಾಷ್ಟ್ರಾಧ್ಯಕ್ಷ ಅಶೋಕ್ ರಾವತ್ ಅವರ ನೇತೃತ್ವದಲ್ಲಿ ಕಳೆದ ಹಲವು ವರ್ಷಗಳಿಂದ ಪಿಂಚಣಿ ಹೆಚ್ಚಳಕ್ಕಾಗಿ ಹೋರಾಟ ನಡೆಸಲಾಗುತ್ತಿದೆ.

ಈ ಸಂಬಂಧ ಕೇಂದ್ರ ಕಾರ್ಮಿಕ ಸಚಿವರು, ಹಣಕಾಸು ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಪ್ರಮುಖ ಬೇಡಿಕೆಗಳು: ಇಪಿಎಸ್-95 ಪಿಂಚಣಿದಾರರಿಗೆ ಕನಿಷ್ಠ ₹7,500 ಮಾಸಿಕ ಪಿಂಚಣಿ ನೀಡಬೇಕು. ಪಿಂಚಣಿಯೊಂದಿಗೆ ತುಟ್ಟಿಭತ್ಯೆ ಒದಗಿಸಬೇಕು.

ಪಿಂಚಣಿದಾರರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಅವಲಂಬಿತ ವಿಧವೆಯರಿಗೆ ಪೂರ್ಣ ಪ್ರಮಾಣದ ಪಿಂಚಣಿ ನೀಡಬೇಕು. ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ₹5,000 ಪಿಂಚಣಿ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ನಮ್ಮ ದುಡಿಮೆಯ ಹಣದಿಂದಲೇ ವಂತಿಗೆ ಸಂಗ್ರಹಿಸಿರುವ ಇಪಿಎಫ್ಒ ಸಂಸ್ಥೆ ಹಾಗೂ ಕೇಂದ್ರ ಸರ್ಕಾರ ಪಿಂಚಣಿದಾರರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಯುತ ಪಿಂಚಣಿ ನೀಡಬೇಕು.

ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಷ್ಟ್ರವ್ಯಾಪಿ ಹೋರಾಟದ ಭಾಗವಾಗಿ ದಾವಣಗೆರೆಯಲ್ಲಿಯೂ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪಿಂಚಣಿದಾರ ಶಾಂತಪ್ಪ, ಸುಮಾರು 40 ವರ್ಷಗಳ ಕಾಲ ದುಡಿದರೂ ಇಂದು ನಮಗೆ ಸಿಗುತ್ತಿರುವುದು ಕೇವಲ ₹1,000 ಪಿಂಚಣಿ. ಇಂದಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಈ ಅಲ್ಪ ಮೊತ್ತದಲ್ಲಿ ಜೀವನ ನಡೆಸುವುದು ಹೇಗೆ? ವಯಸ್ಸಾದ ಸಂದರ್ಭದಲ್ಲಿ ಔಷಧಿ, ವೈದ್ಯಕೀಯ ಚಿಕಿತ್ಸೆ ಹಾಗೂ ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದೇ ಕಷ್ಟವಾಗಿದೆ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಿ ಕನಿಷ್ಠ ₹7,500 ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande