ಬಾಂಗ್ಲಾದೇಶದಲ್ಲಿ ರಾತ್ರಿಯಿಡೀ ಹಿಂಸಾಚಾರ: ಸಂಸದನ ಮನೆ, ಪೊಲೀಸ್ ಠಾಣೆ, ರೈಲು ನಿಲ್ದಾಣಕ್ಕೆ ಬೆಂಕಿ
ಢಾಕಾ (ಬಾಂಗ್ಲಾದೇಶ), 18 ನವೆಂಬರ್ (ಹಿ.ಸ.): ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಡಿಸೆಂಬರ್‌ನಲ್ಲಿ ಸ್ವದೇಶಕ್ಕೆ ಮರಳುವುದಾಗಿ ಘೋಷಿಸಿರುವ ಬೆನ್ನಲ್ಲೇ ದೇಶದಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದೆ. ಹಲವು ಪ್ರದೇಶಗಳಲ್ಲಿ ರಾತ್ರಿಯಿಡೀ ಹಿಂಸಾಚಾರ ನಡೆದಿದ್ದು, ಸಂಸದನ ಮನೆ, ಪೊಲೀಸ
बांग्लादेश के गोपालगंज के तुंगीपारा में निल्फा बाजार के पास गोपालगंज-तुंगीपारा रोड पर कल रात गाड़ियां जला दी गईं। जिले में बढ़ती अशांति के बीच बदमाशों ने उनमें आग लगा दी। रात करीब 9:00 बजे चार गाड़ियों में आग लगा दी गई। इनमें बॉर्डर गार्ड बांग्लादेश (बीजीबी) की दो गाड़ियां भी शामिल हैं। फोटो -  द डेली स्टार


थाना में हुई हिंसा का स्क्रीन ग्रैब


ಢಾಕಾ (ಬಾಂಗ್ಲಾದೇಶ), 18 ನವೆಂಬರ್ (ಹಿ.ಸ.):

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಡಿಸೆಂಬರ್‌ನಲ್ಲಿ ಸ್ವದೇಶಕ್ಕೆ ಮರಳುವುದಾಗಿ ಘೋಷಿಸಿರುವ ಬೆನ್ನಲ್ಲೇ ದೇಶದಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದೆ. ಹಲವು ಪ್ರದೇಶಗಳಲ್ಲಿ ರಾತ್ರಿಯಿಡೀ ಹಿಂಸಾಚಾರ ನಡೆದಿದ್ದು, ಸಂಸದನ ಮನೆ, ಪೊಲೀಸ್ ಠಾಣೆ, ರೈಲು ನಿಲ್ದಾಣ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸ್ ವಶದಲ್ಲಿದ್ದವರನ್ನು ಠಾಣೆಯ ಬಂಧನ ಕೊಠಡಿಯಿಂದ ಬಲವಂತವಾಗಿ ಬಿಡಿಸಿಕೊಂಡು ಹೋಗಲಾಗಿದೆ. ಹಿಂಸಾಚಾರದಲ್ಲಿ ಕೃಷಕ್ ದಳದ ಮುಖಂಡರೊಬ್ಬರು ಮೃತಪಟ್ಟಿದ್ದಾರೆ.

ದಿ ಡೈಲಿ ಸ್ಟಾರ್ ಮತ್ತು ಢಾಕಾ ಟ್ರಿಬ್ಯೂನ್ ವರದಿಗಳ ಪ್ರಕಾರ, ಗೋಪಾಲಗಂಜ್ ಜಿಲ್ಲೆಯಲ್ಲಿ ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಅವಾಮಿ ಲೀಗ್ ಬೆಂಬಲಿಗರು ಸಂಸದನ ಮನೆ, ಪೊಲೀಸ್ ಠಾಣೆ ಹಾಗೂ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ತುಂಗಿಪಾರ ಉಪಜಿಲ್ಲೆಯಲ್ಲಿ ಆಡಳಿತಾರೂಢ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಸಂಸದ ಎಸ್.ಎಂ. ಜಿಲಾನಿ ಅವರ ಮನೆಗೂ ಬೆಂಕಿ ಹಚ್ಚಲಾಗಿದೆ.

ರಾತ್ರಿ 8.30ರಿಂದ 9 ಗಂಟೆಯ ನಡುವಿನ ಅವಧಿಯಲ್ಲಿ ಪಟ್ಟಗಾತಿ ಮಾರುಕಟ್ಟೆ ಪ್ರದೇಶದಲ್ಲಿರುವ ಸಂಸದ ಜಿಲಾನಿ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ತುಂಗಿಪಾರ ಉಪಜಿಲ್ಲೆಯ ಆಡಳಿತಾಧಿಕಾರಿ ಮೊಹಮ್ಮದ್ ದಿದಾರುಲ್ ಆಲಂ ದೃಢಪಡಿಸಿದ್ದಾರೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೆಲವರು 'ಜಯ್ ಬಾಂಗ್ಲಾ', 'ಜಯ್ ಬಂಗಬಂಧು' ಮತ್ತು 'ಜಯ್ ಹಸೀನಾ' ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿದೆ.

ಪೊಲೀಸ್ ಠಾಣೆಗೆ ಬೆಂಕಿ, ಬಂಧಿತರ ಬಿಡುಗಡೆ

ಅವಾಮಿ ಲೀಗ್ ಹಾಗೂ ಅದರೊಂದಿಗೆ ಸಂಬಂಧ ಹೊಂದಿರುವ ನಿಷೇಧಿತ ಸಂಘಟನೆಗಳ ಬೆಂಬಲಿಗರು ತುಂಗಿಪಾರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಪಕ್ಷದ ಹಲವು ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಸೀದಿಯ ಧ್ವನಿವರ್ಧಕದಲ್ಲಿ ಘೋಷಣೆ ಮಾಡಿದ ಬಳಿಕ ಪಕ್ಷದ ಬೆಂಬಲಿಗರು ಠಾಣೆಯ ಮುಂದೆ ಜಮಾಯಿಸಿ ಮುತ್ತಿಗೆ ಹಾಕಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗುಂಪನ್ನು ಚದುರಿಸಲು ಪೊಲೀಸರು ಸದ್ದು ಮಾಡುವ ಗ್ರೆನೇಡ್‌ಗಳು, ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಪ್ರಯೋಗಿಸಿದ್ದಾರೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡು ಎರಡೂ ಕಡೆಯವರ ನಡುವೆ ಘರ್ಷಣೆ ನಡೆದಿದೆ. ಬಳಿಕ ಪೊಲೀಸರು ಠಾಣೆಯಿಂದ ಹಿಂದೆ ಸರಿದಿದ್ದು, ಪ್ರತಿಭಟನಾಕಾರರು ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸ್ ಬಂಧನ ಕೊಠಡಿಯಲ್ಲಿದ್ದ ನಿಷೇಧಿತ ಛಾತ್ರ ಲೀಗ್ ಬೆಂಬಲಿಗರನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಿಲ್ಫಾ ಮಾರುಕಟ್ಟೆ ಸಮೀಪ ಗೋಪಾಲಗಂಜ್-ತುಂಗಿಪಾರ ರಸ್ತೆಗೆ ಪ್ರತಿಭಟನಾಕಾರರು ತಡೆ ಹಾಕಿದ್ದರಿಂದ ಅಗ್ನಿಶಾಮಕ ವಾಹನಗಳು ಠಾಣೆಯನ್ನು ತಲುಪಲು ಸಾಧ್ಯವಾಗಲಿಲ್ಲ. ಭದ್ರತಾ ಆತಂಕದಿಂದ ತಕ್ಷಣ ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ ಎಂದು ತುಂಗಿಪಾರ ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ಪ್ರದೇಶದಲ್ಲಿ ನಿಲ್ಫಾ ಮಾರುಕಟ್ಟೆ ಸಮೀಪ ರಾತ್ರಿ ಸುಮಾರು 9 ಗಂಟೆಗೆ ನಾಲ್ಕು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಅವುಗಳಲ್ಲಿ ಗಡಿ ಭದ್ರತಾ ಪಡೆ (ಬಿಜಿಬಿ)ಗೆ ಸೇರಿದ ಎರಡು ವಾಹನಗಳೂ ಸೇರಿವೆ.

ಬಾಂಬ್ ಸ್ಫೋಟದಲ್ಲಿ ಕೃಷಕ್ ದಳದ ಮುಖಂಡ ಸಾವು

ಫರೀದ್‌ಪುರ ಜಿಲ್ಲೆಯ ಭಾಂಗಾ ಉಪಜಿಲ್ಲೆಯಲ್ಲಿ ಅವಾಮಿ ಲೀಗ್ ಬೆಂಬಲಿಗರು ನಡೆಸಿದ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಬಿಎನ್‌ಪಿಯ ಕೃಷಕ್ ದಳದ ಮುಖಂಡ ರಾಜು ಮೊಲ್ಲಾ (34) ಮೃತಪಟ್ಟಿದ್ದಾರೆ.

ಭಾಂಗಾ ಉಪಜಿಲ್ಲೆಯ ಕೃಷಕ್ ದಳದ ಜಂಟಿ ಕಾರ್ಯದರ್ಶಿಯಾಗಿದ್ದ ರಾಜು ಮೊಲ್ಲಾ ಅವರು ರಾತ್ರಿ ಸುಮಾರು 9.15ಕ್ಕೆ ಢಾಕಾ-ಬಾರಿಸಾಲ್ ಹೆದ್ದಾರಿಯ ಹಮಿರ್ದಿ ಬಸ್ ನಿಲ್ದಾಣದ ಬಳಿ ನಡೆದ ಘಟನೆಯಲ್ಲಿ ಗಾಯಗೊಂಡಿದ್ದರು. ಅವಾಮಿ ಲೀಗ್ ಬೆಂಬಲಿಗರ ಮೆರವಣಿಗೆಯ ವೇಳೆ ಸ್ಥಳೀಯ ಬಿಎನ್‌ಪಿ ಕಚೇರಿಯ ಮೇಲೂ ದಾಳಿ ನಡೆಸಿ ಧ್ವಂಸಗೊಳಿಸಲಾಗಿದೆ. ಇದೇ ಸಂದರ್ಭದಲ್ಲಿ ರಾಜು ಮೊಲ್ಲಾ ಅವರ ಸಮೀಪವೇ ದೇಶೀಯವಾಗಿ ತಯಾರಿಸಿದ ಬಾಂಬ್ ಸ್ಫೋಟಗೊಂಡಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಭಾಂಗಾ ಉಪಜಿಲ್ಲೆಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ರಾಜು ಮೊಲ್ಲಾ ಒಬ್ಬಂಟಿಯಾಗಿದ್ದ ಸಂದರ್ಭದಲ್ಲಿ ಅವಾಮಿ ಲೀಗ್ ಕಾರ್ಯಕರ್ತರು ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಭಾಂಗಾ ಉಪಜಿಲ್ಲೆಯ ಬಿಎನ್‌ಪಿ ಅಧ್ಯಕ್ಷ ಖಂಡೇಕರ್ ಇಕ್ಬಾಲ್ ಹುಸೇನ್ ಸಲೀಂ ಆರೋಪಿಸಿದ್ದಾರೆ. ಆದರೆ, ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ದೃಢಪಟ್ಟಿಲ್ಲ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮೊಹಮ್ಮದ್ ರೆಹಾನ್ ಗಫೂರ್ ತಿಳಿಸಿದ್ದಾರೆ.

ಬಸ್, ರೈಲು ನಿಲ್ದಾಣಕ್ಕೂ ಬೆಂಕಿ

ರಾಜಧಾನಿ ಢಾಕಾದ ರಾಮಪುರ ಪೊಲೀಸ್ ಬಾಕ್ಸ್ ಎದುರು ರಾತ್ರಿ ಸುಮಾರು 11.15ಕ್ಕೆ ರೈಡಾ ಸಾರಿಗೆ ಸಂಸ್ಥೆಯ ಬಸ್‌ಗೆ ಬೆಂಕಿ ಹಚ್ಚಲಾಗಿದೆ. ಈ ಘಟನೆಯನ್ನು ರಾಮಪುರ ಪೊಲೀಸ್ ಠಾಣೆಯ ಅಧಿಕಾರಿ ಜಹಾಂಗೀರ್ ಆಲಂ ದೃಢಪಡಿಸಿದ್ದಾರೆ.

ಇನ್ನೊಂದೆಡೆ, ನೆಟ್ರಕೋಣ ಜಿಲ್ಲೆಯ ಬರಹಟ್ಟಾ ಉಪಜಿಲ್ಲೆಯಲ್ಲಿರುವ ಬಂದ್ ಆಗಿದ್ದ ಓತಿಥ್‌ಪುರ ರೈಲು ನಿಲ್ದಾಣದ ವೇದಿಕೆಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ವೇದಿಕೆಯ ನೆಲ ಮತ್ತು ಕಂಬಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ರೈಲ್ವೆ ಎಂಜಿನಿಯರಿಂಗ್ ವಿಭಾಗದ ಸಿಬ್ಬಂದಿ ಹಾಗೂ ಬರಹಟ್ಟಾ ಪೊಲೀಸರು ತಿಳಿಸಿದ್ದಾರೆ. ಕೃತ್ಯದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಮೊಹನ್‌ಗಂಜ್ ರೈಲು ನಿಲ್ದಾಣದ ವ್ಯವಸ್ಥಾಪಕ ಜಹಿರುಲ್ ಇಸ್ಲಾಂ ಘಟನೆಯನ್ನು ದೃಢಪಡಿಸಿದ್ದು, ಇದರಿಂದ ರೈಲು ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ಬರಹಟ್ಟಾ ಉಪಜಿಲ್ಲೆಯ ಪಾಟ್ಲಿ ಮತ್ತು ನೆಟ್ರಕೋಣ ಸದರ್ ಉಪಜಿಲ್ಲೆಯ ಚಲಿಶಾ ಪ್ರದೇಶಗಳಲ್ಲಿ ರೈಲು ಹಳಿಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆದಿದ್ದವು.

ಹೆಚ್ಚುವರಿ ಭದ್ರತಾ ಪಡೆ ನಿಯೋಜನೆ

ತುಂಗಿಪಾರ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿರುವುದನ್ನು ಪೊಲೀಸ್ ಮುಖ್ಯ ಕಚೇರಿಯ ವಕ್ತಾರೆ ಕಮರಂ ಮುನೀರಾ ರಾತ್ರಿ ಸುಮಾರು 9.10ಕ್ಕೆ ದೃಢಪಡಿಸಿದ್ದಾರೆ. ವಾಹನಗಳಿಗೆ ಬೆಂಕಿ ಹಚ್ಚಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

ಹಿಂಸಾಚಾರದ ಹಿನ್ನೆಲೆಯಲ್ಲಿ ಗೋಪಾಲಗಂಜ್ ಜಿಲ್ಲೆಗೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಉಪ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮೂರು ಪೊಲೀಸ್ ಠಾಣೆಗಳ ಮುಖ್ಯಸ್ಥರನ್ನು ವರ್ಗಾವಣೆ ಮಾಡಲಾಗಿದೆ. ಗೋಪಾಲಗಂಜ್ ಮತ್ತು ತುಂಗಿಪಾರ ಸಂಪರ್ಕಿಸುವ ರಸ್ತೆಗಳಲ್ಲಿ ಖಲೆಕ್ ಬಜಾರ್, ಪಟ್ಟಗಾತಿ ವೃತ್ತ, ಬರ್ನಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನಾಕಾರರು ಅಡ್ಡಗಟ್ಟೆಗಳನ್ನು ನಿರ್ಮಿಸಿದ್ದಾರೆ.

ಇದೇ ವೇಳೆ, ಗೋಪಾಲಗಂಜ್‌ನಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಕುರಿತು ವಿರೋಧ ಪಕ್ಷದ ನಾಯಕ ಹಾಗೂ ಜಮಾತ್ ಅಮೀರ್ ಶಫೀಕುರ್ ರೆಹಮಾನ್ ಸಂಸತ್ತಿನಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಫೇಸ್‌ಬುಕ್ ನೇರ ಪ್ರಸಾರದಲ್ಲಿ ಎಚ್.ಎಂ. ರುಬೆಲ್ ಫರಾಜಿ ಎಂಬ ವ್ಯಕ್ತಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿರುವುದು ಕಂಡುಬಂದಿದೆ. ಆದರೆ, ಈ ದೃಶ್ಯಗಳ ಸತ್ಯಾಸತ್ಯತೆ ಹಾಗೂ ಅದರ ಸಂಪೂರ್ಣ ಹಿನ್ನೆಲೆಯನ್ನು ಸ್ವತಂತ್ರವಾಗಿ ದೃಢಪಡಿಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande