
ಪೇಶಾವರ (ಖೈಬರ್ ಪಖ್ತುನ್ಖ್ವಾ), ಪಾಕಿಸ್ತಾನ, 16 ನವೆಂಬರ್ (ಹಿ.ಸ.):
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು, ಬಜೌರ್, ಲಕ್ಕಿ ಮರ್ವತ್, ಸ್ವಾಬಿ ಮತ್ತು ಟ್ಯಾಂಕ್ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಒಂದು ತಿಂಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಪರಿಗಣಿಸಿ ಭಾನುವಾರ ಆಯಾ ಜಿಲ್ಲಾಡಳಿತಗಳು ಈ ಆದೇಶ ಹೊರಡಿಸಿವೆ. ಈ ಐದು ಜಿಲ್ಲೆಗಳ ಪೈಕಿ ಬನ್ನು, ಬಜೌರ್ ಮತ್ತು ಟ್ಯಾಂಕ್ ಜಿಲ್ಲೆಗಳು ತೀವ್ರ ಭದ್ರತಾ ಸವಾಲು ಎದುರಿಸುತ್ತಿರುವ 12 ಜಿಲ್ಲೆಗಳ ಪಟ್ಟಿಯಲ್ಲಿವೆ. ಈ ಜಿಲ್ಲೆಗಳಲ್ಲಿ ವಿಶೇಷ ತುರ್ತು ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.
'ಡಾನ್' ಪತ್ರಿಕೆಯ ವರದಿಯ ಪ್ರಕಾರ, ಬಜೌರ್ ಜಿಲ್ಲೆಯಲ್ಲಿ ಎಲ್ಲ ರೀತಿಯ ರಾಜಕೀಯ ಸಭೆಗಳು, ರಾಜ್ಯದ ವಿರುದ್ಧ ದ್ವೇಷಪೂರಿತ ಭಾಷಣಗಳು ಮತ್ತು ಶಸ್ತ್ರಾಸ್ತ್ರಗಳ ಪ್ರದರ್ಶನಕ್ಕೆ 30 ದಿನಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾಧಿಕಾರಿ ಅದ್ನಾನ್ ಫರೀದ್ ಅಫ್ರಿದಿ ಅವರು ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಬಂಧಗಳಿಗೆ ಅನುಮೋದನೆ ನೀಡಿದ್ದಾರೆ. ಜನರ ಜೀವ ಮತ್ತು ಆಸ್ತಿಯ ರಕ್ಷಣೆ ಹಾಗೂ ಶಾಂತಿ ಕಾಪಾಡಲು ಹೆಚ್ಚುವರಿ ಕ್ರಮಗಳು ಅಗತ್ಯವೆಂದು ಅವರು ತಿಳಿಸಿದ್ದಾರೆ.
ಕಾನೂನು ಜಾರಿ ಸಂಸ್ಥೆಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಜಾಗರೂಕತೆ ವಹಿಸಬೇಕು. ಜಿಲ್ಲೆಯ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಲ್ಲಿ ಭದ್ರತೆ ಹೆಚ್ಚಿಸಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿಯಿಲ್ಲದ ಸಭೆಗಳನ್ನು ತಡೆಯಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ನವೆಂಬರ್ 15ರಿಂದ ಜಾರಿಗೆ ಬಂದಿರುವ ಈ ಆದೇಶ ಡಿಸೆಂಬರ್ 15ರವರೆಗೆ ಮುಂದುವರಿಯಲಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 188ರ ಅಡಿಯಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಕಳೆದ ಅಕ್ಟೋಬರ್ನಲ್ಲಿಯೂ ಭದ್ರತಾ ಕಾರಣಗಳಿಗಾಗಿ ಬಜೌರ್ ಜಿಲ್ಲೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರ ಸಂಚಾರಕ್ಕೆ 10 ದಿನಗಳ ನಿರ್ಬಂಧ ವಿಧಿಸಲಾಗಿತ್ತು. ಬನ್ನು ಜಿಲ್ಲೆಯಲ್ಲಿ ವಾಹನಗಳ ಕಿಟಕಿಗಳಿಗೆ ಕಪ್ಪು ಬಣ್ಣದ ಪರದೆ ಅಳವಡಿಸುವುದನ್ನೂ ನಿಷೇಧಿಸಲಾಗಿದೆ. ಇದೇ ವೇಳೆ ಬನ್ನು ಜಿಲ್ಲೆಯಲ್ಲಿಯೂ ಒಂದು ತಿಂಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸ್ವಾಬಿ ಜಿಲ್ಲಾಧಿಕಾರಿ ನಸ್ರುಲ್ಲಾ ಖಾನ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಒಂದು ತಿಂಗಳ ಅವಧಿಗೆ ಸಾರ್ವಜನಿಕ ಸಭೆಗಳು, ರ್ಯಾಲಿಗಳು, ಮೆರವಣಿಗೆಗಳು ಮತ್ತು ಪ್ರತಿಭಟನೆಗಳನ್ನು ನಿಷೇಧಿಸಿದ್ದಾರೆ. ಆದರೆ, ನಿರ್ಬಂಧ ಜಾರಿಯಲ್ಲಿದ್ದರೂ ಜಮಿಯತ್ ಉಲೇಮಾ-ಎ-ಇಸ್ಲಾಂ (ಫಜಲ್) ಪಕ್ಷದ ಕಾರ್ಯಕರ್ತರು ಕರ್ನೇಲ್ ಶೇರ್ ಖಾನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಲಕ್ಕಿ ಮರ್ವತ್ ಜಿಲ್ಲೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾಧಿಕಾರಿ ಶಾಹಿದ್ ರಫೀಕ್ ಅವರು ಜಿಲ್ಲಾ ಪೊಲೀಸ್ ಅಧಿಕಾರಿಯ ಮನವಿಯ ಮೇರೆಗೆ ಸಾರ್ವಜನಿಕ ಸಭೆಗಳು, ರ್ಯಾಲಿಗಳು, ಮೆರವಣಿಗೆಗಳು ಮತ್ತು ಜನಸಮೂಹ ಸೇರುವುದಕ್ಕೆ ಒಂದು ತಿಂಗಳ ಕಾಲ ನಿಷೇಧ ಹೇರಿದ್ದಾರೆ.
ಟ್ಯಾಂಕ್ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಜಮ್ಶೆದ್ ಖಾನ್ ಅಧಿಸೂಚನೆ ಹೊರಡಿಸಿ ಸಾರ್ವಜನಿಕ ಸಭೆಗಳು, ರ್ಯಾಲಿಗಳು ಮತ್ತು ಮೆರವಣಿಗೆಗಳನ್ನು ನಿಷೇಧಿಸಿದ್ದಾರೆ.
ಇನ್ನೊಂದೆಡೆ, ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬನ್ನು ಮಧ್ಯಂತರ ಮತ್ತು ಪ್ರೌಢಶಿಕ್ಷಣ ಮಂಡಳಿಯು ಉತ್ತರ ವಜಿರಿಸ್ತಾನದಲ್ಲಿ ನಡೆಯಬೇಕಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಮುಂದೂಡಿದೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯವು ಹಲವು ವರ್ಷಗಳಿಂದ ಉಗ್ರರ ದಾಳಿ ಮತ್ತು ಭದ್ರತಾ ಸವಾಲುಗಳನ್ನು ಎದುರಿಸುತ್ತಿದೆ. ಕಳೆದ ತಿಂಗಳು ಬಜೌರ್ನಲ್ಲಿ ಉಗ್ರರು ಪೊಲೀಸ್ ಠಾಣೆಯ ಮೇಲೆ ನಡೆಸಿದ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದರು. ಶುಕ್ರವಾರ ಸೇನೆಯ ಮಾಧ್ಯಮ ವಿಭಾಗ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನದಲ್ಲಿ ಗುಪ್ತಚರ ಮಾಹಿತಿಯ ಆಧಾರದ ಮೇಲೆ ನಡೆಸಿದ ಕಾರ್ಯಾಚರಣೆಗಳಲ್ಲಿ 74 ಉಗ್ರರನ್ನು ಹತ್ಯೆ ಮಾಡಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.