22 ಗಂಟೆಗಳ ಕಾಲ ಬಾಹ್ಯಾಕಾಶದಲ್ಲಿ ಸಂಚರಿಸಿ ಭೂಮಿಗೆ ಮರಳಿದ ಸ್ಪೇಸ್ಎಕ್ಸ್ ನ ಸ್ಟಾರ್ ಶಿಪ್ ರಾಕೆಟ್
ವಾಷಿಂಗ್ಟನ್, 15 ನವೆಂಬರ್ (ಹಿ.ಸ.): ಬಾಹ್ಯಾಕಾಶದಲ್ಲಿ ಸುಮಾರು 22 ಗಂಟೆಗಳ ಕಾಲ ಸಂಚರಿಸಿದ ಬಳಿಕ ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ರಾಕೆಟ್ ಶನಿವಾರ ಯಶಸ್ವಿಯಾಗಿ ಭೂಮಿಗೆ ಮರಳಿದೆ. ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವ ಸಂದರ್ಭದಲ್ಲಿ ತೀವ್ರ ಉಷ್ಣತೆಯನ್ನು ಎದುರಿಸಿದ ರಾಕೆಟ್, ಟೆಕ್ಸಾಸ್‌ನ ಗಲ್ಫ್
स्पेसएक्स ने स्टारशिप रॉकेट को हवा में ही शानदार तरीके से पकड़ लिया। फोटो -  सीबीएस न्यूज


ವಾಷಿಂಗ್ಟನ್, 15 ನವೆಂಬರ್ (ಹಿ.ಸ.):

ಬಾಹ್ಯಾಕಾಶದಲ್ಲಿ ಸುಮಾರು 22 ಗಂಟೆಗಳ ಕಾಲ ಸಂಚರಿಸಿದ ಬಳಿಕ ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ರಾಕೆಟ್ ಶನಿವಾರ ಯಶಸ್ವಿಯಾಗಿ ಭೂಮಿಗೆ ಮರಳಿದೆ. ಭೂಮಿಯ ವಾತಾವರಣವನ್ನು ಮರುಪ್ರವೇಶಿಸುವ ಸಂದರ್ಭದಲ್ಲಿ ತೀವ್ರ ಉಷ್ಣತೆಯನ್ನು ಎದುರಿಸಿದ ರಾಕೆಟ್, ಟೆಕ್ಸಾಸ್‌ನ ಗಲ್ಫ್ ಕರಾವಳಿಯಲ್ಲಿರುವ ಉಡಾವಣಾ ಕೇಂದ್ರದತ್ತ ಸಾಗಿತು. ಕೊನೆಯ ಕ್ಷಣದಲ್ಲಿ ರಾಕೆಟ್ ನೇರವಾಗಿ ನಿಂತುಕೊಂಡಿದ್ದು, ಉಡಾವಣಾ ವೇದಿಕೆಯಲ್ಲಿದ್ದ ಎರಡು ಬೃಹತ್ ಯಾಂತ್ರಿಕ ತೋಳುಗಳು ಅದನ್ನು ಹಿಡಿದುಕೊಂಡವು.

ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, ರಾಕೆಟ್ ಯಶಸ್ವಿಯಾಗಿ ಹಿಡಿತಕ್ಕೆ ಸಿಗುತ್ತಿದ್ದಂತೆ ಸಮೀಪದಲ್ಲಿದ್ದ ಸ್ಪೇಸ್‌ಎಕ್ಸ್ ಸಿಬ್ಬಂದಿ ಹರ್ಷೋದ್ಗಾರ ವ್ಯಕ್ತಪಡಿಸಿ ಚಪ್ಪಾಳೆ ತಟ್ಟಿದರು. ರಾಕೆಟ್‌ನ ಆರು ಮೀಥೇನ್ ಇಂಧನ ಚಾಲಿತ ರಾಪ್ಟರ್ ಎಂಜಿನ್‌ಗಳ ಪೈಕಿ ಮೂರನ್ನು ಮರುಚಾಲನೆಗೊಳಿಸಿ ಅದರ ವೇಗವನ್ನು ತಗ್ಗಿಸಲಾಯಿತು. ಬಳಿಕ ರಾಕೆಟ್ ಅನ್ನು ನೇರವಾಗಿ ನಿಲ್ಲಿಸಿ, ಗಾಳಿಯಲ್ಲಿ ಬಹುತೇಕ ಸ್ಥಿರವಾಗುತ್ತಿದ್ದಂತೆಯೇ ಯಾಂತ್ರಿಕ ತೋಳುಗಳು ಅದನ್ನು ಬಿಗಿಯಾಗಿ ಹಿಡಿದವು. ಎಂಜಿನ್‌ಗಳು ಸ್ಥಗಿತಗೊಳ್ಳುವ ಕ್ಷಣಕ್ಕೂ ಮುನ್ನ ರಾಕೆಟ್ ಅನ್ನು ಯಶಸ್ವಿಯಾಗಿ ವಶಕ್ಕೆ ಪಡೆಯಲಾಯಿತು.

ಈ ಸಾಧನೆಯನ್ನು ಬಣ್ಣಿಸಿದ ಸ್ಪೇಸ್‌ಎಕ್ಸ್‌ನ ವಕ್ತಾರೆ ಜೆಸ್ಸಿ ಆಂಡರ್ಸನ್, ನಮ್ಮ ಕಣ್ಣೆದುರೇ ಅತ್ಯದ್ಭುತ ಎಂಜಿನಿಯರಿಂಗ್ ಸಾಧನೆ ಮತ್ತು ಐತಿಹಾಸಿಕ ಕ್ಷಣವೊಂದು ಸಾಕಾರಗೊಂಡಿದೆ. ಸ್ಪೇಸ್‌ಎಕ್ಸ್ ತಂಡ ಹಾಗೂ ಸ್ಟಾರ್‌ಶಿಪ್ ಯೋಜನೆಗೆ ಬೆಂಬಲ ನೀಡಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.

ಕಕ್ಷೆಯಿಂದ ಸ್ಟಾರ್‌ಶಿಪ್ ರಾಕೆಟ್ ಅನ್ನು ಭೂಮಿಗೆ ಮರಳಿ ತಂದು ಯಾಂತ್ರಿಕ ತೋಳುಗಳ ಮೂಲಕ ಹಿಡಿದಿರುವುದು ಇದೇ ಮೊದಲು. ಈ ಹಿಂದಿನ ಪರೀಕ್ಷಾರ್ಥ ಉಡಾವಣೆಗಳು ಸಮುದ್ರದಲ್ಲಿ ರಾಕೆಟ್ ಇಳಿಯುವುದರೊಂದಿಗೆ ಅಂತ್ಯಗೊಳ್ಳುತ್ತಿದ್ದವು. ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ ಕಕ್ಷಾ ಮಟ್ಟದ ರಾಕೆಟ್ ಅಭಿವೃದ್ಧಿಪಡಿಸುವ ಸ್ಪೇಸ್‌ಎಕ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆಗೆ ಈ ಸಾಧನೆ ಮಹತ್ವದ ಮೈಲಿಗಲ್ಲಾಗಿದೆ.

ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಅವರ ಪ್ರಕಾರ, ಈ ತಂತ್ರಜ್ಞಾನ ಯಶಸ್ವಿಯಾದರೆ ಭೂಮಿಯ ಕಕ್ಷೆ, ಚಂದ್ರ ಮತ್ತು ಭವಿಷ್ಯದಲ್ಲಿ ಮಂಗಳ ಗ್ರಹಕ್ಕೆ ಸರಕುಗಳನ್ನು ಸಾಗಿಸುವ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಶುಕ್ರವಾರ ಟೆಕ್ಸಾಸ್ ಕರಾವಳಿಯಲ್ಲಿರುವ ಸ್ಪೇಸ್‌ಎಕ್ಸ್‌ನ ಸ್ಟಾರ್‌ಬೇಸ್ ಉಡಾವಣಾ ಕೇಂದ್ರದಿಂದ ಸೂಪರ್ ಹೆವಿ ಬೂಸ್ಟರ್ ನೆರವಿನೊಂದಿಗೆ ಸ್ಟಾರ್‌ಶಿಪ್ ಉಡಾವಣೆಗೊಂಡಿತ್ತು. 407 ಅಡಿ ಎತ್ತರದ ಎರಡು ಹಂತಗಳ ಈ ರಾಕೆಟ್ ಜಗತ್ತಿನ ಅತ್ಯಂತ ಶಕ್ತಿಶಾಲಿ ಉಡಾವಣಾ ವಾಹನವಾಗಿದೆ. ಉಡಾವಣೆಯ ಸಂದರ್ಭದಲ್ಲಿ ಮೊದಲ ಹಂತದಲ್ಲಿರುವ 33 ರಾಪ್ಟರ್ ಎಂಜಿನ್‌ಗಳು ಸುಮಾರು 1.6 ಕೋಟಿ ಪೌಂಡ್‌ಗಳಷ್ಟು ಒತ್ತಡವನ್ನು ಉತ್ಪಾದಿಸುತ್ತವೆ.

ಸ್ಟಾರ್‌ಶಿಪ್‌ನ 15ನೇ ಪರೀಕ್ಷಾರ್ಥ ಹಾರಾಟಕ್ಕೂ ಮುನ್ನ, ಹಿಂದಿನ ಮೂರು ಹಾರಾಟಗಳಲ್ಲಿ ಬಳಸಲಾಗಿದ್ದ ಮೊದಲ ಹಂತದ ಬೂಸ್ಟರ್ ಅನ್ನು ಸ್ಪೇಸ್‌ಎಕ್ಸ್ ಯಶಸ್ವಿಯಾಗಿ ಮರಳಿ ವಶಪಡಿಸಿಕೊಂಡಿತ್ತು. ಇದೀಗ ಕಕ್ಷೆಯಿಂದ ಸ್ಟಾರ್‌ಶಿಪ್ ಅನ್ನು ಸುರಕ್ಷಿತವಾಗಿ ಭೂಮಿಗೆ ಮರಳಿಸಿ ಹಿಡಿಯುವ ಮೂಲಕ ಮರುಬಳಕೆ ಮಾಡಬಹುದಾದ ರಾಕೆಟ್ ತಂತ್ರಜ್ಞಾನದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande