
ಬೆಂಗಳೂರು, 13 ನವೆಂಬರ್ (ಹಿ.ಸ.):
ನಮ್ಮ ಮೆಟ್ರೊದ ಬಹುನಿರೀಕ್ಷಿತ ಗುಲಾಬಿ ಮಾರ್ಗದ ವಿಸ್ತರಿತ ವಿಭಾಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಕಾಳೇನ ಅಗ್ರಹಾರದಿಂದ ತಾವರೆಕೆರೆ ನಿಲ್ದಾಣದವರೆಗಿನ 7.5 ಕಿ.ಮೀ ಉದ್ದದ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಿಶೇಷ ವಿಮಾನದ ಮೂಲಕ ಎಚ್ಎಎಲ್ಗೆ ಆಗಮಿಸಲಿರುವ ಪ್ರಧಾನಿ ಮೋದಿ, ಅಲ್ಲಿಂದ ನೇರವಾಗಿ ಡೇರಿ ವೃತ್ತದಲ್ಲಿರುವ ಆರ್.ಎಂ. ಮುಂಡ್ಕೂರ್ ಅಗ್ನಿಶಾಮಕ ದಳದ ಅಕಾಡೆಮಿಗೆ ತೆರಳಲಿದ್ದಾರೆ. ಬಳಿಕ ತಾವರೆಕೆರೆ ಮೆಟ್ರೊ ನಿಲ್ದಾಣದಿಂದ ಬಿಳೇಕನಹಳ್ಳಿಯ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂಬಿ) ನಿಲ್ದಾಣದವರೆಗೆ ಮೆಟ್ರೊದಲ್ಲಿ ಪ್ರಯಾಣಿಸಲಿದ್ದಾರೆ. ನಂತರ ಐಐಎಂಬಿ ಆಯೋಜಿಸಿರುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
2 ಸಾವಿರ ಪೊಲೀಸರಿಂದ ಭದ್ರತೆ
ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಮೂವರು ಜಂಟಿ ಪೊಲೀಸ್ ಆಯುಕ್ತರು, 15 ಉಪ ಪೊಲೀಸ್ ಆಯುಕ್ತರು, 20 ಸಹಾಯಕ ಪೊಲೀಸ್ ಆಯುಕ್ತರು, 100 ಇನ್ಸ್ಪೆಕ್ಟರ್ಗಳು, 200ಕ್ಕೂ ಹೆಚ್ಚು ಉಪ ಇನ್ಸ್ಪೆಕ್ಟರ್ಗಳು ಹಾಗೂ 1,500ಕ್ಕೂ ಹೆಚ್ಚು ಪೊಲೀಸ್ ಕಾನ್ಸ್ಟೆಬಲ್ಗಳು ಸೇರಿದಂತೆ ಸುಮಾರು 2 ಸಾವಿರ ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಸಂಚಾರ ಮಾರ್ಗದಲ್ಲಿ ಬದಲಾವಣೆ
ಪ್ರಧಾನಿ ಆಗಮನ ಮತ್ತು ಮೆಟ್ರೊ ಮಾರ್ಗದ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾರ್ವಜನಿಕ ವಾಹನಗಳ ಸುಗಮ ಸಂಚಾರ ಹಾಗೂ ಭದ್ರತಾ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ನಗರ ಸಂಚಾರ ಪೊಲೀಸರು ಕೆಲವು ರಸ್ತೆಗಳಲ್ಲಿ ತಾತ್ಕಾಲಿಕ ಸಂಚಾರ ಮಾರ್ಪಾಡುಗಳನ್ನು ಜಾರಿಗೊಳಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸುಗಮವಾಗಿರುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.