
ನವದೆಹಲಿ, 13 ನವೆಂಬರ್ (ಹಿ.ಸ.):
ಬುಡಕಟ್ಟು ಸಮುದಾಯಗಳ ಭಾಷೆ ಮತ್ತು ಉಪಭಾಷೆಗಳನ್ನು ಉಳಿಸಿ ಬೆಳೆಸಲು ಅವುಗಳ ಸಾಹಿತ್ಯ, ಜನಪದ ಗೀತೆಗಳು, ಕಥೆಗಳು ಹಾಗೂ ಮೌಖಿಕ ಪರಂಪರೆಗಳನ್ನು ವ್ಯವಸ್ಥಿತವಾಗಿ ದಾಖಲೀಕರಣ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವೆಲ್ ಓರಂ ಹೇಳಿದರು.
ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ನಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಬುಡಕಟ್ಟು ಸಾಹಿತ್ಯ ಮಹೋತ್ಸವವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಬುಡಕಟ್ಟು ಸಾಹಿತಿಗಳು, ಸಂಶೋಧಕರು ಮತ್ತು ಭಾಷಾ ತಜ್ಞರು ಭಾಗವಹಿಸಿದ್ದ ಮಹೋತ್ಸವದಲ್ಲಿ ಬುಡಕಟ್ಟು ಭಾಷೆಗಳು, ಉಪಭಾಷೆಗಳು ಹಾಗೂ ಶ್ರೀಮಂತ ಮೌಖಿಕ ಪರಂಪರೆಗಳ ಸಂರಕ್ಷಣೆಯ ಕುರಿತು ಚರ್ಚೆ ನಡೆಯಿತು.
ಬುಡಕಟ್ಟು ಭಾಷೆ ಮತ್ತು ಉಪಭಾಷೆಗಳನ್ನು ಉಳಿಸಲು ಅವುಗಳ ಸಾಹಿತ್ಯ, ಜನಪದ ಗೀತೆ, ಕಥೆಗಳು ಹಾಗೂ ಮೌಖಿಕ ಸಂಪ್ರದಾಯಗಳನ್ನು ವ್ಯವಸ್ಥಿತವಾಗಿ ದಾಖಲಿಸಬೇಕು. ಈ ಕಾರ್ಯದಲ್ಲಿ ಕೇವಲ ಸಾಹಿತಿಗಳಷ್ಟೇ ಅಲ್ಲದೆ ಗೀತರಚನೆಕಾರರು, ಸಂಗೀತಗಾರರು, ಜನಪದ ಕಲಾವಿದರು ಮತ್ತು ಡಿಜಿಟಲ್ ವಿಷಯ ರಚನೆಕಾರರೂ ಕೈಜೋಡಿಸಬೇಕು ಎಂದು ಹೇಳಿದರು.
ಅನೇಕ ಬುಡಕಟ್ಟು ಭಾಷೆಗಳಿಗೆ ಸ್ವಂತ ಲಿಪಿಯಿಲ್ಲ. ಕೆಲವು ಉಪಭಾಷೆಗಳು ಅಳಿವಿನ ಅಂಚಿನಲ್ಲಿವೆ. ಆದರೆ ಲಿಪಿಯ ಕೊರತೆಯನ್ನು ದಾಖಲೀಕರಣಕ್ಕೆ ಅಡ್ಡಿಯಾಗಲು ಬಿಡಬಾರದು. ಲಭ್ಯವಿರುವ ಭಾರತೀಯ ಭಾಷೆಗಳ ಮೂಲಕವೂ ಅವುಗಳ ಮೌಖಿಕ ಪರಂಪರೆಗಳನ್ನು ಸಂರಕ್ಷಿಸಬಹುದು. ಬುಡಕಟ್ಟು ಭಾಷೆಗಳಲ್ಲಿ ಬರೆಯುವ ಲೇಖಕರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡುವ ಬಗ್ಗೆಯೂ ಪ್ರಸ್ತಾಪಿಸಿದರು.
ಕೇಂದ್ರ ಸಚಿವಾಲಯದ ರಾಜ್ಯ ಸಚಿವ ದುರ್ಗಾದಾಸ್ ಉಯಿಕೆ ಮಾತನಾಡಿ, ಬುಡಕಟ್ಟು ಸಮುದಾಯಗಳ ಮೌಖಿಕ ಪರಂಪರೆಯಲ್ಲಿ ಜನಪದ ಕಥೆಗಳು, ಗೀತೆಗಳು, ವೀರಗಾಥೆಗಳು, ಪುರಾಣಗಳು, ಗಾದೆಗಳು, ಒಗಟುಗಳು, ಧಾರ್ಮಿಕ ಆಚರಣೆಗಳು ಮತ್ತು ಪ್ರಾರ್ಥನೆಗಳು ಸೇರಿವೆ. ಇವುಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ. ಬುಡಕಟ್ಟು ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಅವರ ಹೋರಾಟದ ಇತಿಹಾಸವನ್ನು ಸಾಹಿತ್ಯದ ಮೂಲಕ ಸಮಾಜದ ಮುಂದಿಡಬೇಕು ಎಂದು ಹೇಳಿದರು.
ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷ ಚಾಮು ಕೃಷ್ಣ ಶಾಸ್ತ್ರಿ ಮಾತನಾಡಿ, ಭಾರತದ ಭಾಷಾ ವೈವಿಧ್ಯ ದೇಶದ ಏಕತೆಯ ಶಕ್ತಿಯಾಗಿದೆ ಎಂದರು. 2011ರ ಜನಗಣತಿ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಮಾತೃಭಾಷೆಗಳು ಮತ್ತು ಉಪಭಾಷೆಗಳಿವೆ ಎಂದು ತಿಳಿಸಿದರು. ಯಾವುದೇ ಭಾಷೆ ಬೆಳೆಯಬೇಕಾದರೆ ಅದನ್ನು ದೈನಂದಿನ ಸಂವಹನ, ಸಾಹಿತ್ಯ, ಶಿಕ್ಷಣ ಮತ್ತು ತಂತ್ರಜ್ಞಾನದಲ್ಲಿ ಬಳಸುವುದು ಅಗತ್ಯ. ಭಾರತದಲ್ಲಿ ಭಾಷಾ ವಿವಾದಗಳು ಎಂದಿಗೂ ಇರಲಿಲ್ಲ, ಭಾಷಾ ವಿವಾದಗಳು ಬ್ರಿಟಿಷರ ಕೊಡುಗೆ ಎಂದು ಅಭಿಪ್ರಾಯಪಟ್ಟರು.
ನೀತಿ ಆಯೋಗದ ಸದಸ್ಯೆ ಜೋರಾಮ್ ಅನ್ಯಾ ಮಾತನಾಡಿ, ಬುಡಕಟ್ಟು ಸಾಹಿತ್ಯದ ಬಹುಪಾಲು ಜನಪದ ಗೀತೆಗಳು, ಲಾಲಿಹಾಡುಗಳು ಮತ್ತು ಕಥೆಗಳ ರೂಪದಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿದುಬಂದಿದೆ. ಈಗ ಬುಡಕಟ್ಟು ಸಮುದಾಯದವರೇ ತಮ್ಮ ಇತಿಹಾಸ ಮತ್ತು ಜೀವನಾನುಭವಗಳನ್ನು ಸ್ವತಃ ಬರೆಯುತ್ತಿದ್ದಾರೆ ಎಂದು ಹೇಳಿದರು.
ಸಚಿವಾಲಯದ ಕಾರ್ಯದರ್ಶಿ ರಂಜನಾ ಚೋಪ್ರಾ ಮಾತನಾಡಿ, ಈ ಮಹೋತ್ಸವ ಬುಡಕಟ್ಟು ಲೇಖಕರು ಮತ್ತು ಪ್ರಕಾಶಕರಿಗೆ ವೇದಿಕೆ ಕಲ್ಪಿಸುವುದರ ಜತೆಗೆ ಹಿರಿಯ ಹಾಗೂ ಯುವ ಸಾಹಿತಿಗಳ ನಡುವೆ ಸಂವಾದಕ್ಕೂ ಅವಕಾಶ ಮಾಡಿಕೊಡುತ್ತಿದೆ. ದೇಶದಲ್ಲಿರುವ 800ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಸಂರಕ್ಷಿಸುವುದು ಮಹತ್ವದ್ದಾಗಿದೆ. ಮೌಖಿಕ ಪರಂಪರೆಗಳು ಕಣ್ಮರೆಯಾಗುವ ಮೊದಲೇ ಅವುಗಳನ್ನು ದಾಖಲಿಸಬೇಕು ಎಂದರು.
ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಂತ ಪ್ರಕಾಶ್ ಪಾಂಡೆ ಮಾತನಾಡಿ, ಬುಡಕಟ್ಟು ಸಮುದಾಯಗಳ ಜ್ಞಾನಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿಸಬೇಕು. ಈ ಕಾರ್ಯದಲ್ಲಿ ಹೊಸ ತಲೆಮಾರಿನ ಹಾಗೂ ಯುವ ಬುಡಕಟ್ಟು ಲೇಖಕರು ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
**ಸಾಹಿತ್ಯ, ಕಾವ್ಯ ಮತ್ತು ಜನಪದ ಪರಂಪರೆಗೆ ವೇದಿಕೆ**
ಮಹೋತ್ಸವದ ಮೊದಲ ಅಧಿವೇಶನವು 'ಸಾಮುದಾಯಿಕ ಸ್ಮೃತಿಯಿಂದ ಸಮಕಾಲೀನ ಅಭಿವ್ಯಕ್ತಿಯವರೆಗೆ ಬುಡಕಟ್ಟು ಸಾಹಿತ್ಯ' ಎಂಬ ವಿಷಯದ ಮೇಲೆ ನಡೆಯಿತು. ಅನಿಲ್ ಕುಮಾರ್ ಬೋರೊ ಅಧ್ಯಕ್ಷತೆ ವಹಿಸಿದ್ದರು. ಮೌಖಿಕ ಪರಂಪರೆ, ಸಮುದಾಯದ ಜ್ಞಾನ ವ್ಯವಸ್ಥೆಗಳು, ಸಾಂಸ್ಕೃತಿಕ ಸ್ಮರಣೆ ಮತ್ತು ಸಮಕಾಲೀನ ಸಾಹಿತ್ಯ ಸೃಜನಶೀಲತೆಯ ನಿರಂತರತೆಯ ಕುರಿತು ಚರ್ಚಿಸಲಾಯಿತು. ತೋಡಾ ಸಮುದಾಯದ ಕೆ. ವಾಸಮಲ್ಲಿ, ಸಂತಾಲಿ ಭಾಷೆಯ ದಮಯಂತಿ ಬೆಸ್ರಾ ಮತ್ತು ಧರ್ಮೇಂದ್ರ ಪಾರೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಎರಡನೇ ಅಧಿವೇಶನದಲ್ಲಿ ವಿವಿಧ ಬುಡಕಟ್ಟು ಭಾಷೆಗಳ ಕವಿಗಳು ಕವನ ವಾಚನ ಮಾಡಿದರು. ಕಾಂಜಿ ಪಟೇಲ್ ಸಂಯೋಜಿಸಿದ್ದ ಈ ಅಧಿವೇಶನದಲ್ಲಿ ಸಂತಾಲಿ ಭಾಷೆಯ ಯಶೋದಾ ಮುರ್ಮು, ಗಾಲೋ ಭಾಷೆಯ ಜೋಮಿರ್ ಜಿನಿ, ಕಿನ್ನೌರಿ ಭಾಷೆಯ ಸ್ನೇಹಲತಾ ನೇಗಿ ಮತ್ತು ಕುಡುಖ್ ಭಾಷೆಯ ಪಾರ್ವತಿ ತಿರ್ಕಿ ಕವನಗಳನ್ನು ಪ್ರಸ್ತುತಪಡಿಸಿದರು.
ಕೊನೆಯ ಅಧಿವೇಶನವು ಬುಡಕಟ್ಟು ಜನಪದ ಕಥೆಗಳು, ಗೀತೆಗಳು, ಪುರಾಣಗಳು, ಗಾದೆಗಳು ಮತ್ತು ಮೌಖಿಕ ಕಥನಗಳ ಕುರಿತು ನಡೆಯಿತು. ಸಿಲ್ವೆನಸ್ ಲಾಮೆಟ್ ಸಂಯೋಜಿಸಿದ್ದ ಈ ಅಧಿವೇಶನದಲ್ಲಿ ಲಿಸಾ ಲೋಮ್ಡಕ್, ಅನುಜ್ ಮೋಹನ್ ಪ್ರಧಾನ್ ಮತ್ತು ಸ್ವಾತಿ ಆನಂದ್ ವಿಚಾರಗಳನ್ನು ಮಂಡಿಸಿದರು.
ಬುಡಕಟ್ಟು ಸಮುದಾಯಗಳ ಹಾಡುಗಳು, ಧಾರ್ಮಿಕ ಆಚರಣೆಯ ಗೀತೆಗಳು, ಪುರಾಣಗಳು, ಐತಿಹ್ಯಗಳು, ಜನಪದ ಕಥೆಗಳು, ಗಾದೆಗಳು, ಒಗಟುಗಳು, ಮಕ್ಕಳ ಸಂಪ್ರದಾಯಗಳು, ಋತುಮಾನಕ್ಕೆ ಸಂಬಂಧಿಸಿದ ಕಥನಗಳು ಮತ್ತು ಮಹಿಳೆಯರ ಮೌಖಿಕ ಪರಂಪರೆಗಳ ವೈವಿಧ್ಯತೆಯ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಯಿತು.
ಬುಡಕಟ್ಟು ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಿಕೆ ದೊರಕಿಸುವುದು ಹಾಗೂ ಮುಂದಿನ ಪೀಳಿಗೆಗೆ ಈ ಅಮೂಲ್ಯ ಜ್ಞಾನವನ್ನು ಉಳಿಸಿಕೊಡುವುದು ಮಹೋತ್ಸವದ ಪ್ರಮುಖ ಉದ್ದೇಶವಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.