ಭಾರತದ ವೈಜ್ಞಾನಿಕ ಸಾಧನೆಗಳ ಪಯಣಕ್ಕೆ ಮೈಸೂರಿನ ಕಾಸ್ಮೋಸ್ ತಾರಾಲಯದಿಂದ ಹೊಸ ಅಧ್ಯಾಯ: ಪ್ರಧಾನಿ ಮೋದಿ
ವಿಶ್ವದ ಮೊದಲ 15 ಡಿಗ್ರಿ ಓರೆಯಾದ ಎಲ್ಇಡಿ ತಾರಾಲಯ ಉದ್ಘಾಟನೆ – ಯುವ ವಿಜ್ಞಾನಿಗಳ ಸಾಧನೆಗೆ ಮೆಚ್ಚುಗೆ – ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯಕ್ಕೆ ಹೊಸ ಅವಕಾಶ
ಕರ್ನಾಟಕದ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಲಾಗಿರುವ ಕಾಸ್ಮೋಸ್ ತಾರಾಲಯವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ


ಕರ್ನಾಟಕದ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಲಾಗಿರುವ ಕಾಸ್ಮೋಸ್ ತಾರಾಲಯವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ


ಮೈಸೂರು, 13 ನವೆಂಬರ್ (ಹಿ.ಸ.):

ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಸಾಧನೆಗಳನ್ನು ಮಾಡುತ್ತಿರುವ ಸಂದರ್ಭದಲ್ಲಿ, ಮೈಸೂರಿನಲ್ಲಿ ಅತ್ಯಾಧುನಿಕ ಕಾಸ್ಮೋಸ್ ತಾರಾಲಯ ನಿರ್ಮಾಣವಾಗಿರುವುದು ದೇಶದ ವೈಜ್ಞಾನಿಕ ಪಯಣಕ್ಕೆ ಹೊಸ ಅಧ್ಯಾಯವನ್ನು ಸೇರ್ಪಡೆಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕರ್ನಾಟಕದ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಲಾಗಿರುವ ಕಾಸ್ಮೋಸ್ ತಾರಾಲಯವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಭಾರತದ ಪ್ರಾಚೀನ ವೈಜ್ಞಾನಿಕ ಪರಂಪರೆ, ಇಂದಿನ ಬಾಹ್ಯಾಕಾಶ ಸಾಧನೆಗಳು ಹಾಗೂ ಯುವ ವಿಜ್ಞಾನಿಗಳ ಆವಿಷ್ಕಾರಗಳನ್ನು ಸ್ಮರಿಸಿದರು.

ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಮತ್ತು ನೀಲಕಂಠ ಸೋಮಯಾಜಿ ಸೇರಿದಂತೆ ಅನೇಕ ಮಹಾನ್ ಖಗೋಳ ವಿಜ್ಞಾನಿಗಳು ಭಾರತದಲ್ಲಿ ಆಗಿಹೋಗಿದ್ದಾರೆ. ಆ ಕಾಲದಲ್ಲಿ ಇಂದಿನಂತೆ ಅತ್ಯಾಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನಗಳು ಲಭ್ಯವಿರಲಿಲ್ಲ. ಆದರೂ ಅವರು ಮಹತ್ವದ ಆವಿಷ್ಕಾರಗಳನ್ನು ಮಾಡಿದ್ದಲ್ಲದೆ, ಸಂಕೀರ್ಣ ಗಣಿತದ ಲೆಕ್ಕಾಚಾರಗಳನ್ನು ನಡೆಸಿ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ದೇಶದ ಬಾಹ್ಯಾಕಾಶ ಕ್ಷೇತ್ರವನ್ನು ಸರ್ಕಾರ ಮುಕ್ತಗೊಳಿಸಿರುವುದರಿಂದ ಖಾಸಗಿ ವಲಯಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ. ಭಾರತದ ನವೋದ್ಯಮಗಳಿಗೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ದೊರೆತಿದೆ. ಇಂದು ದೇಶದ ಅನೇಕ ಯುವಕರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಯುವ ವಿಜ್ಞಾನಿಗಳು ರಾಕೆಟ್‌ಗಳನ್ನು ಉಡಾವಣೆ ಮಾಡುತ್ತಿದ್ದಾರೆ. ಆವಿಷ್ಕಾರ ಕ್ಷೇತ್ರದಲ್ಲಿ ಯುವಜನರ ಸಾಧನೆಗಳು ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಂತ್ರಜ್ಞಾನವು ಅತ್ಯಂತ ವೇಗವಾಗಿ ಜಗತ್ತನ್ನು ಬದಲಾಯಿಸುತ್ತಿದೆ. ಇಂದು ರೈಲು ಎಲ್ಲಿದೆ, ಎಷ್ಟು ಹೊತ್ತಿಗೆ ನಿಲ್ದಾಣಕ್ಕೆ ತಲುಪಲಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳುವಷ್ಟು ತಂತ್ರಜ್ಞಾನ ಮುಂದುವರಿದಿದೆ. ಇಂತಹ ವೈಜ್ಞಾನಿಕ ಬೆಳವಣಿಗೆಗಳಲ್ಲಿ ಯುವಜನರ ಪಾಲ್ಗೊಳ್ಳುವಿಕೆ ಮಹತ್ವದ್ದಾಗಿದೆ ಎಂದರು.

ಮೈಸೂರಿಗೆ ಆಗಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ, ಕೆಲ ತಿಂಗಳ ಹಿಂದೆ ಸ್ವಾಮಿ ವಿವೇಕಾನಂದರ ಸ್ಮಾರಕ ಉದ್ಘಾಟನೆಗಾಗಿ ಮೈಸೂರಿಗೆ ಭೇಟಿ ನೀಡಿದ್ದನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು ನೆನೆದರು.

ಕಾಸ್ಮೋಸ್ ತಾರಾಲಯ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಅವರು, ಮೈಸೂರು ರಾಜಮನೆತನದ ಕೊಡುಗೆಯನ್ನೂ ಸ್ಮರಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕುಟುಂಬವು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಪ್ರೋತ್ಸಾಹ ನೀಡುವ ಮೂಲಕ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದ ಬೆಳವಣಿಗೆಗೆ ನೆರವಾಗಿದೆ. ಮೈಸೂರು ಇಂತಹ ವೈಜ್ಞಾನಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದು ಹೇಳಿದರು.

ವಿಶ್ವದ ಮೊದಲ ಓರೆಯಾದ ಎಲ್‌ಇಡಿ ತಾರಾಲಯ

ಮೈಸೂರಿನಲ್ಲಿ ನಿರ್ಮಿಸಲಾಗಿರುವ ಕಾಸ್ಮೋಸ್ ತಾರಾಲಯ ವಿಶ್ವದ ಮೊದಲ 15 ಡಿಗ್ರಿ ಓರೆಯಾದ ಎಲ್‌ಇಡಿ ಗುಮ್ಮಟದ ತಾರಾಲಯ ಎಂಬ ವಿಶೇಷತೆಯನ್ನು ಹೊಂದಿದೆ. ಮೈಸೂರು ವಿಶ್ವವಿದ್ಯಾಲಯದ ವತಿಯಿಂದ 3.5 ಎಕರೆ ಪ್ರದೇಶದಲ್ಲಿ, ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ಈ ತಾರಾಲಯವನ್ನು ನಿರ್ಮಿಸಲಾಗಿದೆ. ಸುಮಾರು 115 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಪೂರ್ಣಗೊಂಡಿದೆ.

ತಾರಾಲಯದ ಮತ್ತೊಂದು ವಿಶೇಷವೆಂದರೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಅಕ್ಷರಗಳನ್ನು ಬಳಸಿಕೊಂಡು ಮೈಸೂರು ಹೆಸರನ್ನು ರೂಪಿಸಿರುವುದು. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿರುವ ಈ ತಾರಾಲಯವು ಖಗೋಳ ವಿಜ್ಞಾನ ಮತ್ತು ಬಾಹ್ಯಾಕಾಶದ ಕುರಿತ ಅರಿವು ಮೂಡಿಸುವ ಕೇಂದ್ರವಾಗಿ ರೂಪುಗೊಂಡಿದೆ.

ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿ ಅವರು ಕಾಸ್ಮೋಸ್ ತಾರಾಲಯದ ಪರಿಚಯಾತ್ಮಕ ವಿಡಿಯೊ ವೀಕ್ಷಿಸಿದರು. ಖಗೋಳ ವಿಜ್ಞಾನ, ಬಾಹ್ಯಾಕಾಶ ಹಾಗೂ ಮೈಸೂರಿನ ಇತಿಹಾಸಕ್ಕೆ ಸಂಬಂಧಿಸಿದ ವಿಶೇಷ ಪ್ರದರ್ಶನಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande