ಮಕ್ಕಳನ್ನು ದೊಡ್ಡ ಹುದ್ದೆಗಳಲ್ಲಿ ನೋಡಲು ಬಯಸುವ ಪೋಷಕರು ವೃದ್ಧಾಶ್ರಮ ಸೇರುತ್ತಿರುವುದು ದುರಂತ: ಡಾ. ಕುಂಬಾರ ವೀರಭದ್ರಪ್ಪ
ಬಳ್ಳಾರಿ, 12 ನವೆಂಬರ್ (ಹಿ.ಸ.) ಮಕ್ಕಳನ್ನು ವಿದೇಶಗಳಲ್ಲಿ ಅಥವಾ ಉನ್ನತ ಹುದ್ದೆಗಳಲ್ಲಿ ನೋಡಬೇಕೆಂದು ಬಯಸುವ ಪೋಷಕರು, ಕೊನೆಗೆ ವೃದ್ಧಾಶ್ರಮ ಸೇರುತ್ತಿರುವ ದುರಂತ ಪರಿಸ್ಥಿತಿ ಹೆಚ್ಚುತ್ತಿರುವುದು ವಿಷಾದನೀಯ ಎಂದು ಹಿರಿಯ ಕಾದಂಬರಿಕಾರ ಡಾ. ಕುಂಬಾರ ವೀರಭದ್ರಪ್ಪ ಕೊಟ್ಟೂರು ಹೇಳಿದರು. ನಗರದ ಜಿಲ್ಲಾ ಪ
ಮಕ್ಕಳಿಗಾಗಿ ಜೀವವನ್ನೇ ಸವೆಸಿದ ಪೋಷಕರು ವೃದ್ಧಾಶ್ರಮದಲ್ಲಿ


ಮಕ್ಕಳಿಗಾಗಿ ಜೀವವನ್ನೇ ಸವೆಸಿದ ಪೋಷಕರು ವೃದ್ಧಾಶ್ರಮದಲ್ಲಿ


ಮಕ್ಕಳಿಗಾಗಿ ಜೀವವನ್ನೇ ಸವೆಸಿದ ಪೋಷಕರು ವೃದ್ಧಾಶ್ರಮದಲ್ಲಿ


ಬಳ್ಳಾರಿ, 12 ನವೆಂಬರ್ (ಹಿ.ಸ.)

ಮಕ್ಕಳನ್ನು ವಿದೇಶಗಳಲ್ಲಿ ಅಥವಾ ಉನ್ನತ ಹುದ್ದೆಗಳಲ್ಲಿ ನೋಡಬೇಕೆಂದು ಬಯಸುವ ಪೋಷಕರು, ಕೊನೆಗೆ ವೃದ್ಧಾಶ್ರಮ ಸೇರುತ್ತಿರುವ ದುರಂತ ಪರಿಸ್ಥಿತಿ ಹೆಚ್ಚುತ್ತಿರುವುದು ವಿಷಾದನೀಯ ಎಂದು ಹಿರಿಯ ಕಾದಂಬರಿಕಾರ ಡಾ. ಕುಂಬಾರ ವೀರಭದ್ರಪ್ಪ ಕೊಟ್ಟೂರು ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ನಜೀರ್ ಸಭಾಂಗಣದಲ್ಲಿ ಗುರುವಾರ ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ 2026-27ನೇ ಸಾಲಿನ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಹಣವೇ ಪ್ರಮುಖವಾಗಿದ್ದು, ಮಾನವೀಯತೆ ಮತ್ತು ಹಿರಿಯರನ್ನು ಗೌರವಿಸುವ ಮೌಲ್ಯಗಳಿಗೆ ಸೂಕ್ತ ಸ್ಥಾನ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಳ್ಳಿಗಳಲ್ಲಿನ ಜಾನಪದ ಕಲೆಗಳು, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅಗತ್ಯವಿದೆ. ವೃದ್ಧ ತಂದೆ-ತಾಯಂದಿರು ತಮ್ಮ ದೇಹವನ್ನು ವೈದ್ಯಕೀಯ ಕಾಲೇಜುಗಳಿಗೆ ದಾನ ಮಾಡುವುದು ಉತ್ತಮ ಮಾದರಿಯಾಗಿದ್ದು, ಪ್ರತಿಯೊಬ್ಬರೂ ಇಂತಹ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಕಲ್ಯಾಣ, ಪೌಷ್ಟಿಕ ಆಹಾರ ಮತ್ತು ಅಂಗನವಾಡಿಗಳಲ್ಲಿ ನೀಡುವ ಆಹಾರದ ವಿಚಾರದಲ್ಲಿ ರಾಜ್ಯ ಸರ್ಕಾರ ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಚಿಂತನೆ ನಡೆಸುತ್ತಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಖಾಸಗಿ ಶಾಲೆಗಳಲ್ಲಿ ಜಾರಿಯಲ್ಲಿರುವ ತ್ರೈಮಾಸಿಕ ಶಿಕ್ಷಣ ಪದ್ಧತಿ ಹಾಗೂ ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮನೆಗೆಲಸ ನೀಡುತ್ತಿರುವುದರಿಂದ ಅವರ ಆಟೋಟ ಮತ್ತು ಸಂವಹನ ಸಾಮರ್ಥ್ಯ ಕುಂಠಿತವಾಗುತ್ತಿದೆ. ಮೊಬೈಲ್ ದೂರವಾಣಿಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ದೊಡ್ಡ ಶತ್ರುವಾಗಿವೆ. ಅಧಿಕಾರಿಗಳು ಕೇವಲ ಸಭೆ ಮತ್ತು ಒತ್ತಡಗಳಲ್ಲೇ ಕಾಲ ಕಳೆಯದೆ, ಮುಂದಿನ ಪೀಳಿಗೆಯ ಆರೋಗ್ಯ ಹಾಗೂ ಮಕ್ಕಳ ರಕ್ಷಣೆಯ ಬಗ್ಗೆ ಗಂಭೀರವಾಗಿ ಚಿಂತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್. ಹೊಸಮನೆ ಮಾತನಾಡಿ, ಇಂದಿನ ಮಕ್ಕಳಲ್ಲಿ ನೈತಿಕತೆ, ಮೌಲ್ಯಗಳು, ಸಂಪ್ರದಾಯಗಳು ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಬೆಳೆಸುವುದು ಅತ್ಯಂತ ಅವಶ್ಯಕವಾಗಿದೆ ಎಂದರು.

ಮಕ್ಕಳ ದಿನಾಚರಣೆ ಅಂಗವಾಗಿ 9ರಿಂದ 16 ವರ್ಷದೊಳಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸೃಜನಾತ್ಮಕ ಕಲೆ, ಬರವಣಿಗೆ, ಪ್ರದರ್ಶನ ಕಲೆ ಹಾಗೂ ವಿಜ್ಞಾನ ಕ್ಷೇತ್ರದ ನೂತನ ಆವಿಷ್ಕಾರಗಳಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆದವು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಎಂ., ಜಿಲ್ಲಾ ನಿರೂಪಣಾಧಿಕಾರಿ ಸವಿತಾ ಸಿ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧೆ ನಂದಿನಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ತ್ರಿವೇಣಿ ಪತ್ತಾರ್, ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande