ಡಾರ್ಜಿಲಿಂಗ್, ಸಿಲಿಗುರಿ ಸೇರಿದಂತೆ ಉತ್ತರ ಬಂಗಾಳದಲ್ಲಿ ಭೂಕಂಪನ
ಕೋಲ್ಕತ್ತಾ, 12 ನವೆಂಬರ್ (ಹಿ.ಸ.): ಪಶ್ಚಿಮ ಬಂಗಾಳದ ಡಾರ್ಜಿಲಿಂಗ್, ಸಿಲಿಗುರಿ ಸೇರಿದಂತೆ ಉತ್ತರ ಬಂಗಾಳದ ಹಲವು ಪ್ರದೇಶಗಳಲ್ಲಿ ಗುರುವಾರ ಮುಂಜಾನೆ ಭೂಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ ಸುಮಾರು 4.30ರ ವೇಳೆಗೆ ಭೂಕಂಪ ಸಂಭವಿಸಿದ್ದು, ಡಾರ್ಜಿಲಿಂಗ್, ಕಾ
भूकंप का मापन


ಕೋಲ್ಕತ್ತಾ, 12 ನವೆಂಬರ್ (ಹಿ.ಸ.):

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್, ಸಿಲಿಗುರಿ ಸೇರಿದಂತೆ ಉತ್ತರ ಬಂಗಾಳದ ಹಲವು ಪ್ರದೇಶಗಳಲ್ಲಿ ಗುರುವಾರ ಮುಂಜಾನೆ ಭೂಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ ಸುಮಾರು 4.30ರ ವೇಳೆಗೆ ಭೂಕಂಪ ಸಂಭವಿಸಿದ್ದು, ಡಾರ್ಜಿಲಿಂಗ್, ಕಾಲಿಂಪಾಂಗ್ ಮತ್ತು ಜಲ್ಪೈಗುರಿ ಜಿಲ್ಲೆಗಳಲ್ಲಿ ಕಂಪನದ ಪರಿಣಾಮ ಸ್ಪಷ್ಟವಾಗಿ ಕಂಡುಬಂದಿದೆ. ಸಿಕ್ಕಿಂ, ಬಿಹಾರ, ನೇಪಾಳ ಮತ್ತು ಭೂತಾನ್‌ನ ಕೆಲವು ಭಾಗಗಳಲ್ಲೂ ಭೂಮಿ ಕಂಪಿಸಿದೆ.

ಭೂಕಂಪದ ಕೇಂದ್ರಬಿಂದು ನೆರೆಯ ನೇಪಾಳದಲ್ಲಿತ್ತು. ಸಿಕ್ಕಿಂನ ನೇಪಾಳ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ಸಿಕ್ಕಿಂನ ಯುಕ್ಸೋಮ್‌ನಿಂದ ಸುಮಾರು 40 ಕಿಲೋಮೀಟರ್ ವಾಯವ್ಯ ಭಾಗದಲ್ಲಿ ಭೂಕಂಪದ ಕೇಂದ್ರಬಿಂದು ಗುರುತಿಸಲಾಗಿದೆ. ಹೀಗಾಗಿ ಸಿಕ್ಕಿಂನ ವ್ಯಾಪಕ ಪ್ರದೇಶಗಳ ಜತೆಗೆ ಪಶ್ಚಿಮ ಬಂಗಾಳದ ದಾರ್ಜಿಲಿಂಗ್ ಮತ್ತು ಕಾಲಿಂಪಾಂಗ್‌ನ ಬೆಟ್ಟಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ. ಬಾಂಗ್ಲಾದೇಶದ ಕೆಲವು ಭಾಗಗಳಲ್ಲೂ ಲಘು ಕಂಪನ ಉಂಟಾಗಿದೆ ಎಂದು ವರದಿಯಾಗಿದೆ.

ಹಠಾತ್ತನೆ ಭೂಮಿ ಕಂಪಿಸಿದ ಪರಿಣಾಮ ಜನರು ಆತಂಕಗೊಂಡು ಜೀವಭಯದಿಂದ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ವ್ಯಾಪಕ ಪ್ರದೇಶದಲ್ಲಿ ಕಂಪನದ ಅನುಭವವಾಗಿದ್ದರೂ, ನೇಪಾಳದಲ್ಲಿ ಸಂಭವಿಸಿದ ಈ ಭೂಕಂಪದಿಂದ ಈವರೆಗೆ ಯಾವುದೇ ಪ್ರಾಣಹಾನಿ ಅಥವಾ ಭಾರೀ ಆಸ್ತಿಪಾಸ್ತಿ ನಷ್ಟ ಸಂಭವಿಸಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಉತ್ತರ ಬಂಗಾಳದ ಈ ಪ್ರದೇಶ ಭೂಕಂಪನದ ದೃಷ್ಟಿಯಿಂದ ಸೂಕ್ಷ್ಮ ವಲಯವಾಗಿದೆ. ಈ ವರ್ಷದ ಜೂನ್ ತಿಂಗಳಲ್ಲಿಯೂ ಭೂತಾನ್‌ನಲ್ಲಿ ಸಂಭವಿಸಿದ್ದ 5.8 ತೀವ್ರತೆಯ ಭೂಕಂಪದಿಂದ ಉತ್ತರ ಬಂಗಾಳದ ಹಲವು ಪ್ರದೇಶಗಳಲ್ಲಿ ಕಂಪನ ಉಂಟಾಗಿತ್ತು. ಆಗ ಭೂತಾನ್ ರಾಜಧಾನಿ ಥಿಂಪು ನಗರದಿಂದ ಸುಮಾರು 22 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿತ್ತು.

ಆ ಭೂಕಂಪದ ಪರಿಣಾಮ ಭಾರತ, ಚೀನಾ, ಬಾಂಗ್ಲಾದೇಶ ಮತ್ತು ನೇಪಾಳದ ಗಡಿಭಾಗಗಳಲ್ಲೂ ಅನುಭವವಾಗಿತ್ತು. ಉತ್ತರ ಬಂಗಾಳದ ಜತೆಗೆ ಅಸ್ಸಾಂ ಮತ್ತು ಮೇಘಾಲಯದಲ್ಲೂ ಭೂಮಿ ಕಂಪಿಸಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande