
ವಾಷಿಂಗ್ಟನ್, 12 ನವೆಂಬರ್ (ಹಿ.ಸ):
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಸ್ಕಾಟ್ ಕೊಲೊಮ್ ಅವರು ಮಿಸಿಸಿಪ್ಪಿ ಸೆನೆಟ್ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಹಾಲಿ ಸೆನೆಟರ್ ಸಿಂಡಿ ಹೈಡ್ ಸ್ಮಿತ್ ಅವರನ್ನು ಸೋಲಿಸಿದ್ದಾರೆ. ಹಲವು ದಿನಗಳ ಕಾಲ ನಡೆದ ರೋಚಕ ಹಾಗೂ ಅನಿಶ್ಚಿತ ಹಣಾಹಣಿಯ ಬಳಿಕ ಡೆಮಾಕ್ರಟಿಕ್ ಪಕ್ಷ ತನ್ನ ತೆಕ್ಕೆಗೆ ತೆಗೆದುಕೊಂಡ ಎಂಟನೇ ಸೆನೆಟ್ ಸ್ಥಾನ ಇದಾಗಿದೆ.
ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, 43 ವರ್ಷದ ಸ್ಕಾಟ್ ಕೊಲೊಮ್ ಅವರು ಜಿಲ್ಲಾ ಸರ್ಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಿಸಿಸಿಪ್ಪಿ ರಾಜ್ಯದಲ್ಲಿ ಏಳು ತಲೆಮಾರುಗಳಿಂದ ನೆಲೆಸಿರುವ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಜೀವನ ನಿರ್ವಹಣೆಯ ವೆಚ್ಚ ಮತ್ತು ಆರೋಗ್ಯ ಸೇವೆ ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅವರು ಚುನಾವಣಾ ಪ್ರಚಾರ ನಡೆಸಿದ್ದರು. ಮಿಸಿಸಿಪ್ಪಿ ರಾಜ್ಯದ ಜನರ ಹಿತಕ್ಕಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರು. ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಹಾಗೂ ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಪ್ರಮುಖ ನಾಯಕರು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.
67 ವರ್ಷದ ಸಿಂಡಿ ಹೈಡ್ ಸ್ಮಿತ್ ಅವರು 2018ರಿಂದ ಸೆನೆಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಮೆರಿಕದ ಕಾಂಗ್ರೆಸ್ನಲ್ಲಿ ಮಿಸಿಸಿಪ್ಪಿ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದಾಗಿತ್ತು.
ಮಿಸಿಸಿಪ್ಪಿ ರಾಜ್ಯವು ಸಾಂಪ್ರದಾಯಿಕವಾಗಿ ರಿಪಬ್ಲಿಕನ್ ಪಕ್ಷದ ಪ್ರಬಲ ನೆಲೆಯಾಗಿದೆ. ಹೀಗಾಗಿ ಇಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗೆ ಗೆಲುವು ಸಾಧಿಸುವುದು ಸವಾಲಿನ ಸಂಗತಿಯಾಗಿತ್ತು. 1982ರ ಬಳಿಕ ಇದೇ ಮೊದಲ ಬಾರಿಗೆ ಮಿಸಿಸಿಪ್ಪಿ ರಾಜ್ಯವು ಸೆನೆಟ್ಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ ಎಂದು ವರದಿ ತಿಳಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.