ಬರದಲ್ಲೂ ಭರ್ಜರಿ ಈರುಳ್ಳಿ ಬೆಳೆದ ರೈತ: ವಿದೇಶಕ್ಕೂ ರಫ್ತಾಗುತ್ತಿದೆ ಕಲಬುರಗಿ ರೈತನ ಈರುಳ್ಳಿ
ಕಲಬುರಗಿ ತಾಲೂಕಿನ ಜಂಬಗಾ (ಬಿ) ಗ್ರಾಮದ ರೈತ ಶ್ರೀಕಾಂತ್ ಅವರು ಬರದ ನಡುವೆಯೂ ಕೇವಲ 3 ಕೆ.ಜಿ. ಈರುಳ್ಳಿ ಬೀಜ ಬಳಸಿ ಎರಡು ಎಕರೆ ಜಮೀನಿನಲ್ಲಿ 80ರಿಂದ 100 ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಇದೀಗ ಅವರ ಈರುಳ್ಳಿ ಥೈಲ್ಯಾಂಡ್ಗೂ ರಫ್ತಾಗುತ್ತಿದ್ದು, ರೈತರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
Kalaburagi-Farmer-Grows-80-to-100-Quintals-of-Onion-Amid-Drought-Exports-to-Thailand


ಕಲಬುರಗಿ, 11 ನವೆಂಬರ್ (ಹಿ.ಸ.):

ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ನೀರಿನ ಅಭಾವ. ಇಂತಹ ಬರದ ಸಂಕಷ್ಟದ ನಡುವೆಯೂ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆದು ಕಲಬುರಗಿ ತಾಲೂಕಿನ ಜಂಬಗಾ (ಬಿ) ಗ್ರಾಮದ ರೈತರೊಬ್ಬರು ಗಮನ ಸೆಳೆದಿದ್ದಾರೆ.

ಕೇವಲ ಮೂರು ಕೆ.ಜಿ. ಈರುಳ್ಳಿ ಬೀಜ ಬಿತ್ತನೆ ಮಾಡಿ ಎರಡು ಎಕರೆ ಜಮೀನಿನಲ್ಲಿ ಸುಮಾರು 80ರಿಂದ 100 ಕ್ವಿಂಟಾಲ್ ಈರುಳ್ಳಿ ಬೆಳೆದಿದ್ದು, ಇದೀಗ ಈರುಳ್ಳಿಗೆ ವಿದೇಶದಲ್ಲೂ ಬೇಡಿಕೆ ಸೃಷ್ಟಿಯಾಗಿದೆ.

ಜಂಬಗಾ (ಬಿ) ಗ್ರಾಮದ ರೈತ ಶ್ರೀಕಾಂತ್ ಅವರು ಎರಡು ಎಕರೆ ಜಮೀನನ್ನು ಲೀಜ್ಗೆ ಪಡೆದು ಈರುಳ್ಳಿ ಕೃಷಿ ಆರಂಭಿಸಿದ್ದರು. ನೀರಿನ ಕೊರತೆಯ ನಡುವೆಯೂ ಪಕ್ಕದ ಜಮೀನಿನಿಂದ ನೀರು ಪಡೆದು ರೇನ್ಪೈಪ್ ಮೂಲಕ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದರು. ಸತತ ನಾಲ್ಕು ತಿಂಗಳ ಪರಿಶ್ರಮದ ಫಲವಾಗಿ ಉತ್ತಮ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈರುಳ್ಳಿ ಬೆಳೆಯಲು ಬೀಜ, ಗೊಬ್ಬರ, ಔಷಧ ಸೇರಿದಂತೆ ಒಟ್ಟು 70ರಿಂದ 80 ಸಾವಿರ ರೂಪಾಯಿ ವೆಚ್ಚ ಮಾಡಿದ್ದಾರೆ. ಕಡಿಮೆ ಪ್ರಮಾಣದ ಬೀಜ ಬಳಸಿ ಇಷ್ಟೊಂದು ಪ್ರಮಾಣದ ಇಳುವರಿ ಪಡೆದಿರುವುದು ವಿಶೇಷವಾಗಿದೆ.

ಇನ್ನು ಶ್ರೀಕಾಂತ್ ಬೆಳೆದ ಈರುಳ್ಳಿಗೆ ವಿದೇಶದಲ್ಲೂ ಬೇಡಿಕೆ ವ್ಯಕ್ತವಾಗಿದೆ. ಬೀಜ ಉತ್ಪಾದನೆ ಉದ್ದೇಶಕ್ಕಾಗಿ ಈರುಳ್ಳಿ ಖರೀದಿಸಲು ಕಂಪನಿಯೊಂದು ಮುಂದೆ ಬಂದಿದ್ದು, ಪ್ರತಿ ಕ್ವಿಂಟಾಲ್ಗೆ 5 ಸಾವಿರ ರೂಪಾಯಿ ದರ ನಿಗದಿಪಡಿಸಿದೆ ಎನ್ನಲಾಗಿದೆ. ಕಲಬುರಗಿಯಿಂದ ಔರಂಗಾಬಾದ್ ಮೂಲಕ ಥೈಲ್ಯಾಂಡ್ಗೆ ಈರುಳ್ಳಿ ರವಾನೆಯಾಗುತ್ತಿದೆ.

ಈ ಕುರಿತು ರೈತ ಶ್ರೀಕಾಂತ್ ಮಾತನಾಡಿ ಕಡಿಮೆ ನೀರಿನ ಸೌಲಭ್ಯವಿದ್ದರೂ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಈರುಳ್ಳಿ ಬೆಳೆದಿದ್ದೇನೆ. ನಾಲ್ಕು ತಿಂಗಳ ಪರಿಶ್ರಮಕ್ಕೆ ಉತ್ತಮ ಇಳುವರಿ ದೊರೆತಿದ್ದು, ವಿದೇಶಕ್ಕೂ ನಮ್ಮ ಬೆಳೆಗೆ ಬೇಡಿಕೆ ಬಂದಿರುವುದು ಸಂತಸ ತಂದಿದೆ ಎಂದಿದ್ದಾರೆ.

ಈ ಕುರಿತು ಸ್ಥಳೀಯ ಬಸವರಾಜ್ ಪ್ರತಿಕ್ರಿಯಿಸಿದ್ದು, ಬರದ ಪರಿಸ್ಥಿತಿಯಲ್ಲಿಯೂ ಶ್ರೀಕಾಂತ್ ಅವರು ಉತ್ತಮ ರೀತಿಯಲ್ಲಿ ಈರುಳ್ಳಿ ಬೆಳೆದು ಸಾಧನೆ ಮಾಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆದಿರುವುದು ಇತರೆ ರೈತರಿಗೂ ಪ್ರೇರಣೆಯಾಗಿದೆ. ಒಟ್ಟಿನಲ್ಲಿ ಬರದ ನಡುವೆಯೂ ಕೃಷಿಯಲ್ಲಿ ಹೊಸ ಪ್ರಯೋಗದ ಮೂಲಕ ಯಶಸ್ಸು ಕಂಡಿರುವ ಶ್ರೀಕಾಂತ್ ಅವರ ಸಾಧನೆ ಇತರೆ ರೈತರಿಗೆ ಮಾದರಿಯಾಗಿದೆ ಎಂದಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande