
ಬೆಂಗಳೂರು, 11 ನವೆಂಬರ್ (ಹಿ.ಸ.):
ಬೆಂಗಳೂರು ಮೆಟ್ರೋ ಯೋಜನೆಯ ಸಮಗ್ರ ಅಭಿವೃದ್ಧಿಯಲ್ಲಿ ಕರ್ನಾಟಕ ಸರ್ಕಾರವೇ ಅತಿ ಹೆಚ್ಚಿನ ಆರ್ಥಿಕ ಕೊಡುಗೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಮೆಟ್ರೋ ಮಾರ್ಗಗಳ ನಿರ್ಮಾಣಕ್ಕೆ ಹಣಕಾಸು ಒದಗಿಸುವುದರ ಜತೆಗೆ ಭೂಸ್ವಾಧೀನ, ಪುನರ್ವಸತಿ, ರಾಜ್ಯ ತೆರಿಗೆ, ನಿರ್ಮಾಣದ ಅವಧಿಯ ಬಡ್ಡಿ, ಸಾಲ ಮರುಪಾವತಿ ಹಾಗೂ ಮೆಟ್ರೋ ರೈಲುಗಳ ನಿರ್ವಹಣೆಯ ಜವಾಬ್ದಾರಿಯನ್ನೂ ರಾಜ್ಯ ಸರ್ಕಾರ ನಿಭಾಯಿಸುತ್ತಿದೆ ಎಂದು ಹೇಳಿದ್ದಾರೆ.
ಮೆಟ್ರೋ ಯೋಜನೆಯ ವಿವಿಧ ಹಂತಗಳಲ್ಲಿ ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಹಣವನ್ನು ಕರ್ನಾಟಕ ಸರ್ಕಾರವೇ ಹೂಡಿಕೆ ಮಾಡಿದೆ. ಕಾಮಗಾರಿಗಳ ವಿಳಂಬದಿಂದ ಉಂಟಾಗುವ ಹೆಚ್ಚುವರಿ ವೆಚ್ಚದ ಹೊರೆಯಲ್ಲಿಯೂ ರಾಜ್ಯದ ಪಾಲು ಗಣನೀಯವಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಮೆಟ್ರೋ ಮಾರ್ಗಗಳ ನಿರ್ಮಾಣ ಮತ್ತು ಅಸ್ತಿತ್ವದಲ್ಲಿರುವ ಜಾಲದ ವಿಸ್ತರಣೆಗೆ ರಾಜ್ಯ ಸರ್ಕಾರ ನಿರಂತರವಾಗಿ ಅನುದಾನ ಹಾಗೂ ಅಗತ್ಯ ನೆರವು ಒದಗಿಸುತ್ತಿದೆ. ಯೋಜನೆಯ ಒಟ್ಟು ವೆಚ್ಚ, ನಿರ್ಮಾಣದ ನಂತರದ ನಿರ್ವಹಣೆ ಮತ್ತು ಭವಿಷ್ಯದ ವಿಸ್ತರಣೆ ಸೇರಿದಂತೆ ಎಲ್ಲ ಹಂತಗಳಲ್ಲೂ ರಾಜ್ಯ ಸರ್ಕಾರದ ಪಾಲುದಾರಿಕೆ ಪ್ರಮುಖವಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನ ಬೆಳವಣಿಗೆಗೆ ಪೂರಕವಾಗಿ ಸಮಗ್ರ, ಸುಸ್ಥಿರ ಮತ್ತು ಸುಗಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ರೂಪಿಸುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.