
ವಾಷಿಂಗ್ಟನ್, 10 ನವೆಂಬರ್(ಹಿ.ಸ.):
ಇರಾನ್ ಯುದ್ಧದ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ತೀವ್ರ ಒತ್ತಡಕ್ಕೆ ಸಿಲುಕಿದೆ. ಈ ನಡುವೆ, ಟ್ರಂಪ್ ಅವರದೇ ರಿಪಬ್ಲಿಕನ್ ಪಕ್ಷದ ಕೆಂಟಕಿ ಸಂಸದ ಥಾಮಸ್ ಮಾಸ್ಸಿ ಅವರು ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಕೋರಿ ಮಹಾಭಿಯೋಗ ಪ್ರಸ್ತಾವ ಮಂಡಿಸಿದ್ದಾರೆ. ಇದರಿಂದ ಆಡಳಿತಾರೂಢ ರಿಪಬ್ಲಿಕನ್ ಪಕ್ಷಕ್ಕೆ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಟ್ರಂಪ್ ಆಡಳಿತದ ಪ್ರಮುಖ ಸಚಿವರನ್ನು ಬೆಂಬಲಿಸಬೇಕೇ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಎಂಬುದನ್ನು ಪಕ್ಷದ ಸಂಸದರು ನಿರ್ಧರಿಸಬೇಕಿದೆ. ಅಮೆರಿಕದ ಕೆಳಮನೆಯಾದ ಪ್ರತಿನಿಧಿ ಸಭೆಯಲ್ಲಿ ಬುಧವಾರದೊಳಗೆ ಈ ಪ್ರಸ್ತಾವದ ಮೇಲೆ ಮತದಾನ ನಡೆಯುವ ಸಾಧ್ಯತೆಯಿದೆ.
ಅಮೆರಿಕದ ಸುದ್ದಿ ಜಾಲತಾಣ 'ಆಕ್ಸಿಯೋಸ್' ವರದಿಯ ಪ್ರಕಾರ, ಇರಾನ್ ಯುದ್ಧವನ್ನು ನಿರ್ವಹಿಸಿದ ರೀತಿ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಹೆಗ್ಸೆತ್ ವಿರುದ್ಧ ಈ ಮಹಾಭಿಯೋಗ ಪ್ರಸ್ತಾವ ಮಂಡಿಸಲಾಗಿದೆ. ಟ್ರಂಪ್ ಅವರ ಎರಡನೇ ಅವಧಿಯಲ್ಲಿ ಸಂಪುಟ ದರ್ಜೆಯ ಸಚಿವರೊಬ್ಬರ ವಿರುದ್ಧ ಮಂಡನೆಯಾಗುತ್ತಿರುವ ಮೊದಲ ಮಹಾಭಿಯೋಗ ಪ್ರಸ್ತಾವ ಇದಾಗಿದೆ. ಮುಂದಿನ ವರ್ಷ ಕಾಂಗ್ರೆಸ್ನಲ್ಲಿ ಡೆಮಾಕ್ರಟಿಕ್ ಪಕ್ಷದ ನಿಯಂತ್ರಣ ಬಂದರೆ ಇಂತಹ ಮತ್ತಷ್ಟು ಬೆಳವಣಿಗೆಗಳು ನಡೆಯುವ ಸಾಧ್ಯತೆಯನ್ನೂ ಈ ಬೆಳವಣಿಗೆ ಸೂಚಿಸಿದೆ.
ಪ್ರತಿನಿಧಿ ಸಭೆಯಲ್ಲಿ ಮಹಾಭಿಯೋಗ ಪ್ರಸ್ತಾವವನ್ನು ಮಂಡಿಸುವ ವೇಳೆ ಮಾತನಾಡಿದ ಥಾಮಸ್ ಮಾಸ್ಸಿ, ಹೆಗ್ಸೆತ್ ಅಧಿಕಾರದಲ್ಲಿ ಮುಂದುವರಿದರೆ ಸಂವಿಧಾನಕ್ಕೆ ಅಪಾಯ ಎದುರಾಗಲಿದೆ ಎಂದು ಆರೋಪಿಸಿದರು. ಅವರು ತಮ್ಮ ಕರ್ತವ್ಯಗಳು ಮತ್ತು ಕಾನೂನಿನ ಆಡಳಿತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ದೂರಿದರು.
ವಿದೇಶಿ ರಾಷ್ಟ್ರದ ವಿರುದ್ಧ ಯುದ್ಧ ಆರಂಭಿಸಲು ಹೆಗ್ಸೆತ್ ಉದ್ದೇಶಪೂರ್ವಕವಾಗಿ ಕಾನೂನುಬಾಹಿರ ಆದೇಶಗಳನ್ನು ಜಾರಿಗೊಳಿಸಿದ್ದಾರೆ. ಕಾಂಗ್ರೆಸ್ನ ಸಾಂವಿಧಾನಿಕ ಮತ್ತು ಕಾನೂನುಬದ್ಧ ನಿರ್ಧಾರಗಳನ್ನು ಕಡೆಗಣಿಸಿ ತಮ್ಮ ಕಾನೂನುಬಾಹಿರ ಕಾರ್ಯಕಾರಿ ಕ್ರಮಗಳನ್ನು ಹೇರಿದ್ದಾರೆ ಎಂದು ಮಾಸ್ಸಿ ಆರೋಪಿಸಿದರು.
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿಯೂ ಮಾತನಾಡಿದ ಮಾಸ್ಸಿ, ಹೆಗ್ಸೆತ್ ಅಧಿಕಾರದಲ್ಲಿ ಮುಂದುವರಿದರೆ ಡೆಮಾಕ್ರಟಿಕ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಅವರ ವಿರುದ್ಧ ವಿಚಾರಣೆ ನಡೆಸಲಿದೆ. ಅವರೊಂದಿಗೆ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿ, ಸೆನೆಟ್ನಲ್ಲಿ ಮಹಾಭಿಯೋಗ ಪ್ರಕ್ರಿಯೆ ಆರಂಭಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಆದರೆ, ಮಹಾಭಿಯೋಗ ಪ್ರಸ್ತಾವದ ಪ್ರಯತ್ನವನ್ನು ರಾಜಕೀಯ ಪ್ರೇರಿತ ಗದ್ದಲ ಎಂದು ಹೆಗ್ಸೆತ್ ತಳ್ಳಿಹಾಕಿದ್ದಾರೆ. ಈ ಬೆಳವಣಿಗೆಯಿಂದ ತಮಗಾಗಲಿ, ತಮ್ಮ ತಂಡಕ್ಕಾಗಲಿ ಯಾವುದೇ ಆತಂಕವಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಕುರಿತು ಆಕ್ಸಿಯೋಸ್ ಕೇಳಿದ ಪ್ರತಿಕ್ರಿಯೆಗೆ ರಕ್ಷಣಾ ಇಲಾಖೆ ತಕ್ಷಣ ಯಾವುದೇ ಉತ್ತರ ನೀಡಿಲ್ಲ.
ಪ್ರತಿನಿಧಿ ಸಭೆಯ ಸದಸ್ಯರು ಚುನಾವಣಾ ಪ್ರಚಾರಕ್ಕಾಗಿ ತೆರಳುವ ಉದ್ದೇಶದಿಂದ ಸದನದ ಕಲಾಪಕ್ಕೆ ವಿರಾಮ ನೀಡುವ ಮುನ್ನ ಮಾಸ್ಸಿ ಮೊದಲ ಬಾರಿಗೆ ಮಹಾಭಿಯೋಗ ಪ್ರಸ್ತಾವ ಮಂಡಿಸಿದ್ದರು. ಸೋಮವಾರ ಮತ್ತೊಮ್ಮೆ ಪ್ರಸ್ತಾವ ಮಂಡಿಸುವ ಮೂಲಕ ಸದನದ ನಾಯಕತ್ವ ಕ್ರಮ ಕೈಗೊಳ್ಳಲು ಎರಡು ಕಾರ್ಯದಿನಗಳ ಗಡುವು ಆರಂಭವಾಗಿದೆ.
ಕಾಂಗ್ರೆಸ್ನ ಅಧಿಕಾರವನ್ನು ಹೆಗ್ಸೆತ್ ಉಲ್ಲಂಘಿಸಿದ್ದಾರೆ ಎಂಬುದು ಮಾಸ್ಸಿ ಸೇರಿದಂತೆ ಹಲವು ಸಂಸದರ ಆರೋಪವಾಗಿದೆ. ಇರಾನ್ನಲ್ಲಿ ನಡೆಯುತ್ತಿರುವ ಜನಪ್ರಿಯತೆ ಕಳೆದುಕೊಂಡ ಯುದ್ಧವನ್ನು ನಿಲ್ಲಿಸಲು ಕಾಂಗ್ರೆಸ್ ಶಾಸಕಾಂಗದ ಮೂಲಕ ಪ್ರಯತ್ನಿಸಿದ್ದರೂ, ಹೆಗ್ಸೆತ್ ಅದನ್ನು ನಿರ್ಲಕ್ಷಿಸಿ ಯುದ್ಧವನ್ನು ಮುಂದುವರಿಸಿದ್ದಾರೆ ಎಂದು ದೂರಲಾಗಿದೆ.
ಒಟ್ಟು ಎಂಟು ಆರೋಪಗಳ ಪೈಕಿ ಮೂರು ಆರೋಪಗಳು ಇರಾನ್ನಲ್ಲಿ ಯುದ್ಧ ನಡೆಸುವ ವಿಚಾರದಲ್ಲಿ ಕಾಂಗ್ರೆಸ್ನ ಅಧಿಕಾರವನ್ನು ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿವೆ. ನಾಗರಿಕರ ಸಾವು, ಮಾದಕ ವಸ್ತುಗಳ ಸಾಗಣೆ ನಡೆಸುತ್ತಿರುವ ಶಂಕೆಯಿರುವ ದೋಣಿಗಳ ಮೇಲಿನ ದಾಳಿ, ಸೆನೆಟರ್ ಮಾರ್ಕ್ ಕೆಲ್ಲಿ ವಿರುದ್ಧ ಪ್ರತೀಕಾರದ ಕ್ರಮ, ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿಯುವ ಕಾರ್ಯಾಚರಣೆ ಹಾಗೂ ಯೆಮನ್ನಲ್ಲಿ ನಡೆಸಿದ ಸೇನಾ ಕಾರ್ಯಾಚರಣೆ ಸೇರಿದಂತೆ ಹಲವು ಆರೋಪಗಳನ್ನು ಪ್ರಸ್ತಾವದಲ್ಲಿ ಉಲ್ಲೇಖಿಸಲಾಗಿದೆ.
ವರದಿಗಳ ಪ್ರಕಾರ, ಹೆಗ್ಸೆತ್ ಇರಾನ್ ಯುದ್ಧದ ಅತ್ಯಂತ ಕಟ್ಟಾ ಬೆಂಬಲಿಗರಲ್ಲಿ ಒಬ್ಬರಾಗಿದ್ದಾರೆ. ಈ ಸಂಘರ್ಷದಲ್ಲಿ ಗೆಲುವು ಸಾಧಿಸುವುದು ಸುಲಭ ಎಂದು ಅವರು ಅಧ್ಯಕ್ಷ ಟ್ರಂಪ್ ಅವರಿಗೆ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ, ಯುದ್ಧ ಆರಂಭವಾಗಿ ಎಂಟು ತಿಂಗಳು ಕಳೆದರೂ ಪರಿಸ್ಥಿತಿ ಅವರು ನಿರೀಕ್ಷಿಸಿದಂತೆ ಇಲ್ಲ ಎಂಬುದು ವರದಿಯ ಸಾರಾಂಶವಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.