
ಅಂಕಾರಾ(ಟರ್ಕಿ), 10 ನವೆಂಬರ್ (ಹಿ.ಸ.):
ಪಶ್ಚಿಮ ಟರ್ಕಿಯ ಉಕ್ಕಿನ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಅಧ್ಯಕ್ಷ ರೆಜೆಪ್ ತಯ್ಯಿಪ್ ಎರ್ಡೊಗನ್ ಅವರು ಘಟನೆಯನ್ನು ದೃಢಪಡಿಸಿದ್ದಾರೆ.
ಇಜ್ಮಿರ್ ಪ್ರಾಂತ್ಯದ ಅಲಿಯಾಗಾ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಸ್ಫೋಟಕ್ಕೆ ಕಾರಣವೇನು ಮತ್ತು ಘಟನೆಗೆ ಹೊಣೆಗಾರರು ಯಾರು ಎಂಬುದನ್ನು ಪತ್ತೆಹಚ್ಚಲು ನ್ಯಾಯಾಂಗ ಹಾಗೂ ಆಡಳಿತಾತ್ಮಕ ತನಿಖೆ ಆರಂಭಿಸಲಾಗಿದೆ ಎಂದು ಎರ್ಡೊಗನ್ ತಿಳಿಸಿದ್ದಾರೆ.
ಟರ್ಕಿಯ ಪ್ರಮುಖ ಸುದ್ದಿ ವಾಹಿನಿ ಟಿಆರ್ಟಿ ವರ್ಲ್ಡ್ ವರದಿಯ ಪ್ರಕಾರ, ಅಂಕಾರಾದ ಅಧ್ಯಕ್ಷರ ಭವನದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಎರ್ಡೊಗನ್, ಈ ಘಟನೆಯಿಂದ ಇಡೀ ದೇಶವೇ ತೀವ್ರ ದುಃಖಕ್ಕೊಳಗಾಗಿದೆ. ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಲಾಗುವುದು ಎಂದು ಹೇಳಿದ್ದಾರೆ.
ಇಜ್ಮಿರ್ ಪ್ರಾಂತ್ಯದ ರಾಜ್ಯಪಾಲ ಸುಲೇಮಾನ್ ಎಲ್ಬಾನ್ ಅವರ ಪ್ರಕಾರ, ಸ್ಥಳೀಯ ಕಾಲಮಾನ ಸೋಮವಾರ ಬೆಳಿಗ್ಗೆ ಸುಮಾರು 11.46ಕ್ಕೆ ಹಬಾಸ್ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕುಲುಮೆಯನ್ನು ಬದಲಾಯಿಸುವ ಕಾಮಗಾರಿ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಈ ವೇಳೆ ಮೇಲ್ಛಾವಣಿಯ ಕ್ರೇನ್ ಕುಸಿದು, ಅದರಲ್ಲಿದ್ದ ಕೆಲವು ಸಾಮಗ್ರಿಗಳು ವಿದ್ಯುತ್ ಚಾಪ ಕುಲುಮೆಗೆ ಬಿದ್ದಿವೆ. ಇದರಿಂದ ನೈಸರ್ಗಿಕ ಅನಿಲ ಪೂರೈಕೆ ಕೊಳವೆಗೆ ಹಾನಿಯಾಗಿ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಆರಂಭದಲ್ಲಿ 10 ಮಂದಿ ಮೃತಪಟ್ಟಿದ್ದು, 15 ಜನರು ಗಾಯಗೊಂಡಿದ್ದಾರೆ ಎಂದು ರಾಜ್ಯಪಾಲರು ಮಾಹಿತಿ ನೀಡಿದ್ದರು. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅವಶೇಷಗಳ ಅಡಿಯಲ್ಲಿ ನಾಲ್ವರು ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಘಟನೆಯ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಸುಮಾರು 200 ಕಾರ್ಮಿಕರು ಇದ್ದರು. ಸಾಮಾನ್ಯ ಉತ್ಪಾದನಾ ಪಾಳಿಯಲ್ಲಿ 300ಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ನ್ಯಾಯಾಂಗ ಮತ್ತು ಆಡಳಿತಾತ್ಮಕ ತನಿಖೆ ಮುಂದುವರಿದಿದೆ.
ಸ್ಫೋಟದ ಘಟನೆಗೆ ಅಜರ್ಬೈಜಾನ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅಜರ್ಬೈಜಾನ್ ವಿದೇಶಾಂಗ ಸಚಿವಾಲಯವು ಮೃತರ ಕುಟುಂಬಗಳಿಗೆ ಹಾಗೂ ಅವರ ಆತ್ಮೀಯರಿಗೆ ಸಾಂತ್ವನ ತಿಳಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದೆ.
ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಕೂಡ ಘಟನೆಗೆ ದುಃಖ ವ್ಯಕ್ತಪಡಿಸಿದ್ದಾರೆ. ಈ ಕಠಿಣ ಸಂದರ್ಭದಲ್ಲಿ ಟರ್ಕಿಯ ಜನರೊಂದಿಗೆ ನಮ್ಮ ಸಂವೇದನೆ ಇದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಭೂಮಧ್ಯಸಾಗರದ ತೀರದಲ್ಲಿರುವ ಅಂತಾಲ್ಯಾ ನಗರದಲ್ಲಿ ಹವಾಮಾನ ಬದಲಾವಣೆ ತಡೆಗಟ್ಟುವ ಕ್ರಮಗಳ ಕುರಿತು ಚರ್ಚಿಸಲು ವಿಶ್ವ ನಾಯಕರು ಮತ್ತು ಪರಿಸರ ಹೋರಾಟಗಾರರು ಸಭೆ ಸೇರುತ್ತಿರುವ ಸಂದರ್ಭದಲ್ಲೇ ಈ ದುರಂತ ಸಂಭವಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.