




ಬಳ್ಳಾರಿ, 01 ನವೆಂಬರ್ (ಹಿ.ಸ.)
ಕರ್ನಾಟಕ ರಾಜ್ಯೋತ್ಸವವನ್ನು ರಾಜ್ಯದಾದ್ಯಂತ ನವೆಂಬರ್ ತಿಂಗಳ ಪೂರ್ತಿ ಹಬ್ಬದಂತೆ ಆಚರಿಸಲಾಗುತ್ತದೆ ಎಂದು ವಸತಿ ಸಚಿವರಾದ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತವು ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಶ್ರೀಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರು ಮಾತನಾಡಿದರು.
ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕರ್ನಾಟಕದಲ್ಲಿ ಸರ್ವ ಧರ್ಮೀಯರು ಅಣ್ಣ-ತಮ್ಮಂದಿರಂತೆ ಬದುಕುತ್ತಿರುವುದು ಈ ನಾಡಿನ ದೊಡ್ಡ ಹೆಮ್ಮೆ. ಕನ್ನಡ ಅತ್ಯಂತ ಸರಳ ಮತ್ತು ಸುಂದರವಾದ ಭಾಷೆ. ಹೊರರಾಜ್ಯಗಳಿಂದ ಬಂದವರೂ ಇದನ್ನು ಸುಲಭವಾಗಿ ಕಲಿತು ಮಾತನಾಡುತ್ತಿದ್ದಾರೆ. ಕನ್ನಡನಾಡಿನ ಯುವಕರು ಸಿರಿತನಕ್ಕೆ ಹಿಗ್ಗದೆ, ಬಡತನಕ್ಕೆ ಕುಗ್ಗದೆ ಶ್ರಮವಹಿಸಿ ಬೆಳೆಯಬೇಕು, ಅವರೇ ನಾಡಿನ ಭವ್ಯ ಭವಿಷ್ಯ.
ಶಾಸಕ ನಾರಾ ಭರತ್ ರೆಡ್ಡಿ ಅವರ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಹಿಂದಿನ ಅವಧಿಯಲ್ಲಿ ಮಂಜೂರಾಗಿದ್ದ ಮನೆಗಳಿಗೂ ಸರ್ಕಾರದ ವತಿಯಿಂದಲೇ ಹಣ ಒದಗಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಸುಮಾರು 2,000 ಮನೆಗಳು ಸಿದ್ಧವಾಗಿದ್ದು, ಶೀಘ್ರದಲ್ಲೇ ಕ್ಯಾಬಿನೆಟ್ ಒಪ್ಪಿಗೆ ಪಡೆದು ಬಡವರಿಗೆ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದರು.
*ಸಾಧಕರ ಸನ್ಮಾನ:*
2026ನೇ ಸಾಲಿನ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಂಸ್ಕøತಿಕ (ರಂಗಭೂಮಿ): ಬಸವರಾಜ ಜೋಳದರಾಶಿ, ಬಳ್ಳಾರಿ
ಸಾಂಸ್ಕøತಿಕ (ಜಾನಪದ): ಹೆಚ್.ಪಿ. ಶಿಕಾರಿ ರಾಮು, ಕಂಪ್ಲಿ
ಕನ್ನಡ ಸೇವೆ: ಕೆ.ಎಂ. ಮಹೇಶ್ವರ ಸ್ವಾಮಿ, ಬಳ್ಳಾರಿ
ಕ್ರೀಡೆ (ಈಜು): ರಜಿನಿ ಲಕ್ಕ, ಬಳ್ಳಾರಿ
ಸಮಾಜ ಸೇವೆ: ಜಿ. ವೀರೇಶ, ಸಂಡೂರು ಹಾಗೂ ಪಿ. ಹುಸೇನ್ ಸಾಹೇಬ್, ಬಳ್ಳಾರಿ
ವೈದ್ಯಕೀಯ: ಯೋಗಾನಂದ ರೆಡ್ಡಿ, ವೈ.ಸಿ., ಬಳ್ಳಾರಿ
ಪತ್ರಿಕೋದ್ಯಮ: ಎನ್. ವೀರಭದ್ರಗೌಡ, ಬಳ್ಳಾರಿ
ಕೃಷಿ: ಎಸ್. ಸಾದಣ್ಣ, ತೆಕ್ಕಲಕೋಟೆ (ಸಿರುಗುಪ್ಪ ತಾಲ್ಲೂಕು)
ಕೃಷಿ ತೋಟಗಾರಿಕೆ: ಚಲವಾದಿ ದೊಡ್ಡಬಸಪ್ಪ, ಮುಷ್ಟಗಟ್ಟೆ (ಕುರುಗೋಡು ತಾಲ್ಲೂಕು).
71ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶಾಲೆ ಮತ್ತು ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಆಶು-ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕನ್ನಡ ಪ್ರೇಮಿಗಳ ನೇತೃತ್ವದಲ್ಲಿ ಕಳೆದ 25 ವರ್ಷಗಳಿಂದ ಹಂಪಿಯ ತಾಯಿ ಭುವನೇಶ್ವರಿ ದೇವಸ್ಥಾನದಿಂದ ತರುತ್ತಿದ್ದ ಕನ್ನಡ ಜ್ಯೋತಿಯನ್ನು ಈ ವರ್ಷವೂ ಸಹ ಸಚಿವರ ಸಮ್ಮುಖದಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಬಳಿಕ ವಿವಿಧ ಪ್ರಕಾರ ಕಲಾ ತಂಡಗಳ ವಾದ್ಯಗಳ ಕಲರವದೊಂದಿಗೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳನ್ನೊಳಗೊಂಡ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಕನ್ನಡ ಪ್ರೇಮ ಮೂಡಿಸಲಾಯಿತು.
*ಸ್ತಬ್ಧಚಿತ್ರಗಳ ಅದ್ದೂರಿ ಮೆರವಣಿಗೆ:*
71ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸ್ತಬ್ಧಚಿತ್ರಗಳ ಅದ್ದೂರಿ ಮೆರವಣಿಗೆ ನಡೆಯಿತು. ವಸತಿ ಸಚಿವರಾದ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು ಚಾಲನೆ ನೀಡಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಸಾರಿಗೆ ಇಲಾಖೆ) ವತಿಯಿಂದ ಬಳ್ಳಾರಿಯ ಮಾದರಿ ಕ್ಲಾಕ್ ಟವರ್, ತೋಟಗಾರಿಕೆ ವತಿಯಿಂದ ಪರಿಸರ ಸಂರಕ್ಷಣೆಯ ಗಿಡಗಳು ಪ್ರದರ್ಶಿಸಿದರೆ ಮಹಾನಗರ ಪಾಲಿಕೆ ವತಿಯಿಂದ ಪ್ಲಾಸ್ಟಿಕ್ ಮುಕ್ತ ನಗರ-ಸ್ವಚ್ಛ ನಗರ ವಿಷಯದೊಂದಿಗೆ ಸ್ತಬ್ಧಚಿತ್ರ ರೂಪಿಸಲಾಗಿತ್ತು. ಅದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗೃಹಲಕ್ಷ್ಮಿ ಯೋಜನೆಯ ಸ್ತಬ್ಧಚಿತ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡೆಂಗ್ಯೂ ಹಾಗೂ ಇತರೆ ರೋಗಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ಸೇರಿದಂತೆ ಶಿಕ್ಷಣ ಇಲಾಖೆ, ಕೃಷಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸ್ತಬ್ಧಚಿತ್ರಗಳು ಗಮನ ಸೆಳೆದವು.
ವಿವಿಧ ಕನ್ನಡ ಪರ ಸಂಘಟನೆಗಳಿಂದ ಕನ್ನಡ ತಾಯಿ ಭುವನೇಶ್ವರಿ ದೇವಿ ಅವರ ಭಾವಚಿತ್ರ ಹಾಗೂ ಕರ್ನಾಟಕ ಏಕೀಕರಣದ ರೂವಾರಿ ಬಳ್ಳಾರಿಯ ಹೋರಾಟಗಾರ ಪಿಂಜಾರ ರಂಜಾನ್ ಸಾಬ್ ಅವರ ಭಾವಚಿತ್ರ ವಾಹನ ಕಾರ್ಯಕ್ರಮದ ವಿಶೇಷವಾಗಿತ್ತು. ಸಚಿವರು ವಾಹನ ಚಲಾಯಿಸಿ ನೋಡುಗರ ಗಮನಸೆಳೆದರು.
*ಸಚಿವರಿಂದ ‘ಗ್ರಾಮಾನುಭವ' ಕಾರ್ಯಕ್ರಮಕ್ಕೆ ಚಾಲನೆ:*
ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕು, ಕೃಷಿ ಚಟುವಟಿಕೆಗಳು ಹಾಗೂ ಸಂಸ್ಕøತಿಯ ಪ್ರಾಯೋಗಿಕ ಪರಿಚಯ ಮಾಡಿಕೊಡುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕರ್ನಾಟಕ, ಜಿಲ್ಲಾ ಯೋಜನಾ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ‘ಗ್ರಾಮಾನುಭವ' ಎಂಬ ವಿನೂತನ ಕಾರ್ಯಕ್ರಮವಕ್ಕೆ ವಸತಿ ಸಚಿವ ಬಿ. ಝಡ್. ಜಮೀರ್ ಅಹಮದ್ ಖಾನ್ ಅವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.
ನಗರ ಪ್ರದೇಶದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 8, 9 ಮತ್ತು 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಗ್ರಾಮೀಣ ಕಲೆ ಮತ್ತು ಸಂಸ್ಕøತಿಯ ನೇರ ಮತ್ತು ನೈಜ ಅನುಭವವನ್ನು ಒದಗಿಸುವುದು ಪ್ರಮುಖ ಗುರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಜೀವನದ ಬಗ್ಗೆ ಅರಿವು ಹಾಗೂ ಪ್ರಾಯೋಗಿಕ ಜ್ಞಾನ ಮೂಡಿಸಲು ಈ ವಿನೂತನ ಯೋಜನೆ ಸಹಕಾರಿಯಾಗಲಿದೆ.
ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ, ಮಹಾನಗರ ಪಾಲಿಕೆಯ ಮಹಾಪೌರರಾದ ಪಿ. ಗಾದೆಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ಬಳ್ಳಾರಿ ವಲಯ ಪೆÇಲೀಸ್ ಮಹಾನಿರೀಕ್ಷಕ ಡಾ. ಪಿ.ಎಸ್.ಹರ್ಷ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್ ಬಸವರಾಜ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್., ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ-ಸಿಬ್ಬಂದಿ, ಮಹಾನಗರ ಪಾಲಿಕೆ ಸದಸ್ಯರು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಶಾಲಾ-ಕಾಲೇಜು ಮಕ್ಕಳು, ಸಾರ್ವಜನಿಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್