ಬ್ರಿಮ್ಸ್ ಆಸ್ಪತ್ರೆಗೆ ಸಚಿವ ಈಶ್ವರ್ ಖಂಡ್ರೆ ದಿಢೀರ್ ಭೇಟಿ: ರೋಗಿಗಳಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲನೆ
ಬೀದರ್ನ ಬ್ರಿಮ್ಸ್ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ದಿಢೀರ್ ಭೇಟಿ ನೀಡಿ ರೋಗಿಗಳಿಗೆ ನೀಡುವ ಚಿಕಿತ್ಸೆ ಹಾಗೂ ಆಹಾರದ ಗುಣಮಟ್ಟ ಪರಿಶೀಲಿಸಿದರು. ಅಡುಗೆ ಕೋಣೆಗೆ ತೆರಳಿ ಅನ್ನ, ಸಾಂಬಾರ್ ತಪಾಸಣೆ ನಡೆಸಿ, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಆಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂ
Minister-Eshwar-Khandre-Sudden-Visit-to-BRIMS-Hospital-Bidar


ಬೀದರ್, 01 ನವೆಂಬರ್ (ಹಿ.ಸ.):

ಜಿಲ್ಲೆಯ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ಬೀದರ್ನ ಬ್ರಿಮ್ಸ್ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಹಾಗೂ ಆಹಾರದ ವ್ಯವಸ್ಥೆಯನ್ನು ಸಚಿವರು ಪರಿಶೀಲಿಸಿದರು.

ವಿವಿಧ ವಾರ್ಡ್ಗಳಿಗೆ ತೆರಳಿ ರೋಗಿಗಳೊಂದಿಗೆ ಮಾತನಾಡಿದ ಅವರು, ಆರೋಗ್ಯದ ಸ್ಥಿತಿಗತಿ ಹಾಗೂ ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಚಿಕಿತ್ಸೆಯ ಕುರಿತು ಮಾಹಿತಿ ಪಡೆದುಕೊಂಡರು.

ಬಳಿಕ ಆಸ್ಪತ್ರೆಯ ಅಡುಗೆ ಕೋಣೆಗೆ ಭೇಟಿ ನೀಡಿದ ಸಚಿವರು, ರೋಗಿಗಳಿಗೆ ತಯಾರಿಸಲಾಗುತ್ತಿದ್ದ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು.

ಅನ್ನ ಮತ್ತು ಸಾಂಬಾರ್ ಪರಿಶೀಲಿಸಿದ ಅವರು, ಅಡುಗೆಗೆ ಬಳಸುವ ಅಕ್ಕಿ ಯಾವುದು? ಅದರ ಬೆಲೆ ಎಷ್ಟು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿ ಮಾಹಿತಿ ಪಡೆದರು.

ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆಗಾಗಿ ಆಗಮಿಸುವ ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು.

ಗುಣಮಟ್ಟದ ಚಿಕಿತ್ಸೆ ನೀಡುವುದರ ಜೊತೆಗೆ ಪೌಷ್ಟಿಕ ಹಾಗೂ ಉತ್ತಮ ಗುಣಮಟ್ಟದ ಆಹಾರವನ್ನೂ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಗುಣಮಟ್ಟ ಕಾಪಾಡುವುದು ಅತ್ಯಂತ ಮುಖ್ಯ. ಆಸ್ಪತ್ರೆಯ ಸ್ವಚ್ಛತೆ, ಚಿಕಿತ್ಸಾ ವ್ಯವಸ್ಥೆ ಹಾಗೂ ರೋಗಿಗಳಿಗೆ ನೀಡುವ ಆಹಾರದ ಗುಣಮಟ್ಟದ ಬಗ್ಗೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಸೂಚಿಸಿದರು.

ಈ ಸಂದರ್ಭದಲ್ಲಿ ಬ್ರಿಮ್ಸ್ ನಿರ್ದೇಶಕಿ ಶಾಂತಲಾ ಕೌಜಲಗಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೇ ಮಾಧವ್ ವಿಠಲರಾವ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande