ಹಾಲಿನ ದರ ಏರಿಕೆ ಹಿಂಪಡೆಯಲು ಪರಿಷತ್ ಸದಸ್ಯ ರವಿಕುಮಾರ್ ಆಗ್ರಹ
ಕಲಬುರಗಿ, 01 ನವೆಂಬರ್ (ಹಿ.ಸ.): ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಬೇಕಿದ್ದ ಕಾಂಗ್ರೆಸ್ ಸರ್ಕಾರ, ಹಾಲಿನ ದರ ಏರಿಕೆ ಮಾಡುವ ಮೂಲಕ ಕಹಿ ಸುದ್ದಿ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಲಬುರ
MLC-Ravikumar-Demands-Withdrawal-of-Milk-Price-Hike-in-Karnataka


ಕಲಬುರಗಿ, 01 ನವೆಂಬರ್ (ಹಿ.ಸ.):

ಕನ್ನಡ ರಾಜ್ಯೋತ್ಸವದ ಸಂಭ್ರಮದ ಸಂದರ್ಭದಲ್ಲಿ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಬೇಕಿದ್ದ ಕಾಂಗ್ರೆಸ್ ಸರ್ಕಾರ, ಹಾಲಿನ ದರ ಏರಿಕೆ ಮಾಡುವ ಮೂಲಕ ಕಹಿ ಸುದ್ದಿ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಲಿನ ದರವನ್ನು ಪ್ರತಿ ಲೀಟರ್ಗೆ 8 ರೂಪಾಯಿ ಹೆಚ್ಚಿಸಿದೆ. ಈಗಾಗಲೇ ಐದನೇ ಬಾರಿ ಹಾಲಿನ ದರ ಏರಿಕೆ ಮಾಡಲಾಗಿದೆ.

ಪ್ರತಿಯೊಂದು ಮನೆಯಲ್ಲೂ ದಿನದ ಆರಂಭವಾಗುವುದೇ ಹಾಲಿನಿಂದ. ಹೀಗಾಗಿ ಯಾವುದೇ ಕಾರಣಕ್ಕೂ ಹಾಲಿನ ದರ ಹೆಚ್ಚಿಸಬಾರದು. ಕೂಡಲೇ ದರ ಏರಿಕೆ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಕಸದ ಮೇಲೂ ತೆರಿಗೆ ವಿಧಿಸಲಾಗುತ್ತಿದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು. ಜನವಿರೋಧಿ ಹಾಗೂ ಕನ್ನಡ ವಿರೋಧಿ ನೀತಿಗಳನ್ನು ಕೈಬಿಡಬೇಕು.

ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರಬೇಕಾದ ಜನರನ್ನು ರಾಜ್ಯ ಸರ್ಕಾರ ದುಃಖದಲ್ಲಿರುವಂತೆ ಮಾಡಿದೆ. ಇದು ನಾಡಿನ ಜನತೆಗೆ ಮಾಡಿದ ದ್ರೋಹ ಎಂದು ಕಿಡಿಕಾರಿದರು.

ಇದೇ ವೇಳೆ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಮಾತನಾಡಿದ ರವಿಕುಮಾರ್, ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕ ಮಾಡುವಾಗ ರೈತರಿಗೆ ಅನ್ಯಾಯವಾಗುತ್ತಿದೆ. ವೆಸ್ಟೇಜ್ ಹೆಸರಿನಲ್ಲಿ ಹೆಚ್ಚಿನ ಪ್ರಮಾಣದ ಕಬ್ಬನ್ನು ಕಡಿತಗೊಳಿಸಲಾಗುತ್ತಿದೆ.

ಕೆಲವು ಸಕ್ಕರೆ ಕಾರ್ಖಾನೆಗಳು ಮನಬಂದಂತೆ ತೂಕ ಮಾಡುತ್ತಿವೆ. ಮಹಾರಾಷ್ಟ್ರದ ಕಾರ್ಖಾನೆಗಳಲ್ಲಿ ಹೆಚ್ಚಿನ ರಿಕವರಿ ಬರುತ್ತಿದ್ದರೆ, ಕರ್ನಾಟಕದ ಕಾರ್ಖಾನೆಗಳಲ್ಲಿ ಅದೇ ಕಬ್ಬಿಗೆ ಕಡಿಮೆ ಇಳುವರಿ ತೋರಿಸಲಾಗುತ್ತಿದೆ ಎಂದು ಆರೋಪಿಸಿದರು.

ಕಬ್ಬು ಬೆಳೆಗಾರರ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ತಮಿಳುನಾಡಿನಲ್ಲಿ ಎಸ್ಎಪಿ ಅಡಿಯಲ್ಲಿ 700 ರೂಪಾಯಿ ನೀಡಲಾಗುತ್ತಿದೆ. ಇತರ ರಾಜ್ಯಗಳಲ್ಲಿ 400ರಿಂದ 700 ರೂಪಾಯಿವರೆಗೆ ನೀಡಲಾಗುತ್ತಿದೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಕಬ್ಬು ಬೆಳೆಗಾರರಿಗೆ ಎಸ್ಎಪಿ ನೀಡಬೇಕು ಎಂದು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಆರೋಪ ಮಾಡುತ್ತಿದೆ. ಆದರೆ, ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ 16,600 ಕೋಟಿ ರೂಪಾಯಿ ಸಬ್ಸಿಡಿ ನೀಡಿದೆ.

ರೈತರ ಬಾಕಿ ಹಣ ಪಾವತಿಸಲು ಕಾರ್ಖಾನೆಗಳಿಗೆ ನೆರವು ನೀಡಲಾಗಿದೆ. ಅಲ್ಲದೆ, ಸಕ್ಕರೆ ಕಾರ್ಖಾನೆಗಳಿಂದ 1,200 ಕೋಟಿ ಲೀಟರ್ ಎಥನಾಲ್ ಖರೀದಿಸಲಾಗುತ್ತಿದೆ ಎಂದು ರವಿಕುಮಾರ್ ಹೇಳಿದರು.

ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಬದಲು ಕೇಂದ್ರದ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande