
ನವದೆಹಲಿ, 01 ನವೆಂಬರ್ (ಹಿ.ಸ.):
ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಪ್ರಹ್ಲಾದ ಜೋಶಿ ಅವರು ಕರ್ನಾಟಕದ ಜನತೆಗೆ ಶುಭಾಶಯ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ, ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯ ತಿಳಿಸಿದ್ದಾರೆ. ಶ್ರೀಮಂತ ಪರಂಪರೆ, ಗಮನಾರ್ಹ ಸಾಧನೆಗಳು ಹಾಗೂ ಅಪಾರ ಸಾಧ್ಯತೆಗಳನ್ನು ಹೊಂದಿರುವ ಕರ್ನಾಟಕವು ದೇಶದ ಸಾಂಸ್ಕೃತಿಕ ವೈಭವವನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಜನರು ಕಠಿಣ ಪರಿಶ್ರಮ, ಉದ್ಯಮಶೀಲತೆ ಹಾಗೂ ಭವಿಷ್ಯದ ವಲಯಗಳಲ್ಲಿನ ಕೌಶಲ್ಯದ ಮೂಲಕ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ, ಸುಧಾರಿತ ಉತ್ಪಾದನೆ ಮತ್ತು ನವೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಜಾಗತಿಕ ಮಟ್ಟದ ಸಂಕೀರ್ಣ ಸವಾಲುಗಳಿಗೆ ಪರಿಹಾರ ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ವಿಶೇಷ ದಿನ ಜನರ ಜೀವನದಲ್ಲಿ ಸಂತಸ ಮತ್ತು ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದ ಸಹೋದರ, ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ವೈಭವೋಪೇತ ಇತಿಹಾಸ ಮತ್ತು ಸಂಸ್ಕೃತಿಗೆ ಹೆಸರಾದ ಕರುನಾಡಿನ ಜನರು ತಮ್ಮ ಪರಿಶ್ರಮ ಹಾಗೂ ಭಾರತದ ಜಾಗತಿಕ ಸ್ಥಾನಮಾನಕ್ಕೆ ನೀಡುತ್ತಿರುವ ಕೊಡುಗೆಗಳ ಮೂಲಕ ನಾಡಿನ ಪರಂಪರೆಯನ್ನು ಬೆಳಗಿಸಿದ್ದಾರೆ. ರಾಜ್ಯ ನಿರಂತರವಾಗಿ ಪ್ರಗತಿ ಸಾಧಿಸಲಿ ಎಂದು ಹಾರೈಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಶುಭಾಶಯ ತಿಳಿಸಿ, ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಉದ್ಯಮಶೀಲ ಮನೋಭಾವ ಹಾಗೂ ವಿವಿಧ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳು ದೇಶಕ್ಕೆ ಹೆಮ್ಮೆಯ ಸಂಗತಿಯಾಗಿವೆ. ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದ ಪಯಣದಲ್ಲಿ ಕರ್ನಾಟಕ ಪ್ರಮುಖ ಪಾತ್ರ ವಹಿಸುತ್ತಾ ಮತ್ತಷ್ಟು ಸಮೃದ್ಧಿ ಹೊಂದಲಿ ಎಂದು ಆಶಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬ ಕವಿವಾಣಿಯೊಂದಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಕನ್ನಡ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಹೆಮ್ಮೆಯಿಂದ ಆಚರಿಸಬೇಕು. ಹೆತ್ತ ತಾಯಿಗಿಂತ ಹೊತ್ತ ನೆಲ ದೊಡ್ಡದು. ಕನ್ನಡ ನಾಡಿನ ಹಿರಿಮೆಯನ್ನು ಜಗದಗಲಕ್ಕೂ ಸಾರುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನಾಡಿನ ಜನತೆಗೆ 71ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದು, ಕನ್ನಡ ನಮ್ಮ ಹೆಮ್ಮೆ, ಕರ್ನಾಟಕ ನಮ್ಮ ಕರ್ಮಭೂಮಿ ಎಂದು ಹೇಳಿದ್ದಾರೆ. ಶ್ರೀಮಂತ ಇತಿಹಾಸ, ಸಮೃದ್ಧ ಸಾಹಿತ್ಯ ಪರಂಪರೆ, ವೈವಿಧ್ಯಮಯ ಸಂಸ್ಕೃತಿ ಮತ್ತು ಅದ್ವಿತೀಯ ಭಾಷಾ ಸೌಂದರ್ಯ ಕನ್ನಡ ನಾಡಿನ ಹೆಮ್ಮೆಯ ಪ್ರತೀಕಗಳಾಗಿವೆ. ಕನ್ನಡ ಭಾಷೆಯ ಉಳಿವು, ಬೆಳವಣಿಗೆ ಹಾಗೂ ಕನ್ನಡಿಗರ ಏಳಿಗೆಯ ಸಂಕಲ್ಪದೊಂದಿಗೆ ಅಭಿವೃದ್ಧಿ ಹೊಂದಿದ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು. ಕರ್ನಾಟಕದಲ್ಲಿ ಕನ್ನಡವೇ ಮೊದಲು ಎಂದು ಅವರು ಸಂದೇಶ ನೀಡಿದ್ದಾರೆ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದು ಹಾರೈಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.