ಕನ್ನಡ ಕಟ್ಟುವಲ್ಲಿ ಧಾರವಾಡದ ಧುರೀಣರ ಕೊಡುಗೆ ಅಪಾರ: ಸಚಿವ ಸಂತೋಷ್ ಲಾಡ್
ಧಾರವಾಡ, 01 ನವೆಂಬರ್ (ಹಿ.ಸ.): ಕನ್ನಡ ಭಾಷೆ ಮತ್ತು ನಾಡು ಕಟ್ಟುವಲ್ಲಿ ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಪಾಟೀಲ ಪುಟ್ಟಪ್ಪ ಸೇರಿದಂತೆ ಧಾರವಾಡದ ಹಲವು ಧುರೀಣರ ಕೊಡುಗೆ ಅಪಾರವಾಗಿದೆ. ಕನ್ನಡವನ್ನು ಕೇವಲ ಆಡಳಿತ ಭಾಷೆಯಾಗಿ ಬಳಸದೆ, ದೈನಂದಿನ ಬದುಕು, ಮನೆ ಮತ್ತು ವ್ಯವಹಾರಗಳಲ್ಲಿಯೂ ಹೆಚ್
ಧಾರವಾಡ ರಾಜ್ಯೋತ್ಸವ ಕಾರ್ಯಕ್ರಮ


ಧಾರವಾಡ, 01 ನವೆಂಬರ್ (ಹಿ.ಸ.):

ಕನ್ನಡ ಭಾಷೆ ಮತ್ತು ನಾಡು ಕಟ್ಟುವಲ್ಲಿ ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಪಾಟೀಲ ಪುಟ್ಟಪ್ಪ ಸೇರಿದಂತೆ ಧಾರವಾಡದ ಹಲವು ಧುರೀಣರ ಕೊಡುಗೆ ಅಪಾರವಾಗಿದೆ. ಕನ್ನಡವನ್ನು ಕೇವಲ ಆಡಳಿತ ಭಾಷೆಯಾಗಿ ಬಳಸದೆ, ದೈನಂದಿನ ಬದುಕು, ಮನೆ ಮತ್ತು ವ್ಯವಹಾರಗಳಲ್ಲಿಯೂ ಹೆಚ್ಚು ಬಳಸಬೇಕು ಎಂದು ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.

ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಪಂಡಿತ್ ಭೀಮಸೇನ ಜೋಶಿ, ದ.ರಾ. ಬೇಂದ್ರೆ, ಚನ್ನವೀರ ಕಣವಿ, ಮಲ್ಲಿಕಾರ್ಜುನ ಮನ್ಸೂರ್ ಅವರಂತಹ ಮಹನೀಯರು ಧಾರವಾಡದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಬೆಳಗಿಸಿದ್ದಾರೆ. ಪಂಪನ ಕಾವ್ಯ, ವಚನಕಾರರ ವಚನಗಳು, ದಾಸರ ಪದಗಳು, ಸರ್ವಜ್ಞನ ನುಡಿಗಳು ಹಾಗೂ ಕುವೆಂಪು ಅವರ ವಿಶ್ವಮಾನವ ಸಂದೇಶ ಕನ್ನಡದ ಶ್ರೀಮಂತಿಕೆಯನ್ನು ಸಾರುತ್ತವೆ. ಕನ್ನಡ ನಮ್ಮ ಅಭಿಮಾನದ ಸಂಕೇತವಾಗಿದೆ ಎಂದರು.

ಜಿಲ್ಲೆಯಲ್ಲಿ 249 ಭಾರತ ಜೋಡೋ ಯುವ ಸಂಘಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ರೈತ ಮಿತ್ರ, ನೇಗಿಲ ಯೋಗಿ, ತೇಗದ ಸಿರಿ ಹಾಗೂ ಗ್ರಾಮಾನುಭವ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಖಾಲಿ ಇರುವ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದ್ದು, ಕರ್ನಾಟಕವನ್ನು ನಶಾಮುಕ್ತ ರಾಜ್ಯವನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಗೆ ನೆರವು

ಧಾರವಾಡ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ 995 ಕೋಟಿ ರೂ. ಮೌಲ್ಯದ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 4,04,827 ಮಹಿಳೆಯರಿಗೆ 2,345 ಕೋಟಿ ರೂ. ಹಾಗೂ ಗೃಹಜ್ಯೋತಿ ಯೋಜನೆಯಡಿ 5,21,046 ಕುಟುಂಬಗಳಿಗೆ 846 ಕೋಟಿ ರೂ. ಸಹಾಯಧನ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ 3,75,996 ಕುಟುಂಬಗಳಿಗೆ ಪಡಿತರ ಒದಗಿಸಲಾಗಿದೆ. ಯುವನಿಧಿ ಯೋಜನೆಯಡಿ 12,340 ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರವಾಗಿ ಸಾವಿರಾರು ರೈತರಿಗೆ ಕೋಟ್ಯಂತರ ರೂಪಾಯಿ ವಿತರಿಸಲಾಗಿದೆ. 2025-26ನೇ ಸಾಲಿನಲ್ಲಿ 39,134 ರೈತರಿಗೆ 43.98 ಕೋಟಿ ರೂ. ಬೆಳೆ ವಿಮೆ ಪರಿಹಾರ ಹಾಗೂ 66,834 ರೈತರಿಗೆ 128.73 ಕೋಟಿ ರೂ. ಬೆಳೆ ಹಾನಿ ಪರಿಹಾರ ನೀಡಲಾಗಿದೆ ಎಂದರು.

ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ಜಿಲ್ಲೆಯ ಕೆ. ವೆಂಕಟರಮಣ (ಬಾಬಜಿ) ಮತ್ತು ಕೆ. ವಿಜಯಲಕ್ಷ್ಮಿ ಪಾಟೀಲ ಅವರನ್ನು ಅಭಿನಂದಿಸಿದರು. ನಗರ ಮಕ್ಕಳಿಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಕೊಡುವ ಉದ್ದೇಶದ ಗ್ರಾಮಾನುಭವ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಪೊಲೀಸ್, ಗೃಹರಕ್ಷಕ, ಅಗ್ನಿಶಾಮಕ, ಅರಣ್ಯ ಇಲಾಖೆ, ಎನ್‌ಸಿಸಿ ಹಾಗೂ ಶಾಲಾ ತಂಡಗಳಿಂದ ಪಥಸಂಚಲನ ನಡೆಯಿತು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಿಲ್ಲಾಧಿಕಾರಿ ಸ್ನೇಹಲ್ ಆರ್., ಪೊಲೀಸ್ ಆಯುಕ್ತ ಬೋರಸೆ ಭೂಷಣ್ ಗುಲಾಬರಾವ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande