
ಬೆಂಗಳೂರು, 01 ನವೆಂಬರ್ (ಹಿ.ಸ.):
ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜದ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಈ ಕುರಿತು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರಧ್ವಜದ ಗೌರವ ಮತ್ತು ನಿಯಮಗಳಿಗೆ ಯಾವುದೇ ಧಕ್ಕೆಯಾಗದಂತೆ ಕನ್ನಡ ಧ್ವಜದ ಬಳಕೆ, ಸ್ಥಾನಮಾನ ಹಾಗೂ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ಈ ಹಿಂದೆ ಸಚಿವ ಸಂಪುಟದಲ್ಲಿ ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡುವ ಕುರಿತು ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈವರೆಗೆ ಮಾನ್ಯತೆ ದೊರೆತಿಲ್ಲ. ಹೀಗಾಗಿ ಇತ್ತೀಚೆಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಲಾಗಿದೆ. ಮತ್ತೊಂದು ಸುತ್ತಿನ ಸಮಾಲೋಚನೆ ನಡೆಸಿ, ಸಚಿವ ಸಂಪುಟದಲ್ಲಿ ಮರುತೀರ್ಮಾನ ಕೈಗೊಂಡು ಕಾನೂನುಬದ್ಧವಾಗಿ ಕನ್ನಡ ಬಾವುಟಕ್ಕೆ ರಕ್ಷಣೆ ಮತ್ತು ಗೌರವ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.
ರಾಷ್ಟ್ರಧ್ವಜದ ಪಕ್ಕದಲ್ಲಿ ಕನ್ನಡ ಧ್ವಜ ಹಾರಿಸುವುದಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿಯೂ ಸಾರ್ವಜನಿಕರು ಹಾಗೂ ಶಾಸಕರ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು. ಚಳಿಗಾಲದ ಅಧಿವೇಶನದಲ್ಲಿ ಈ ವಿಚಾರಕ್ಕೆ ಹೊಸ ರೂಪ ನೀಡುವ ಪ್ರಯತ್ನ ಮಾಡಲಾಗುವುದು. ಕೆಂಪು-ಹಳದಿ ಬಾವುಟ ಕನ್ನಡಿಗರ ಭಾವನೆಯ ಹೆಗ್ಗುರುತಾಗಿದ್ದು, ನಾಡಿನ ಜ್ಞಾನ, ಪರಂಪರೆ, ಸಂಸ್ಕೃತಿ, ಸರ್ವಧರ್ಮ ಸಮನ್ವಯ, ಸಮಾನತೆ ಹಾಗೂ ಶಾಂತಿಯ ಸಂದೇಶವನ್ನು ಸಾರುತ್ತದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಅಸ್ಮಿತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಕನ್ನಡ ಧ್ವಜ ಹಾರಿಸುವುದು ಕಡ್ಡಾಯಗೊಳಿಸುವ ಚಿಂತನೆ
ಕನ್ನಡ ರಾಜ್ಯೋತ್ಸವದ 71ನೇ ವರ್ಷದಿಂದ ಮುಂದಿನ ಒಂದು ವರ್ಷದವರೆಗೆ ಕನ್ನಡದ ಹಿರಿಮೆ ಸಾರುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜ ಹಾರಿಸುವುದರ ಜತೆಗೆ, ಸರ್ಕಾರದ ಬೆಂಬಲ ಹೊಂದಿರುವ ಸಂಸ್ಥೆಗಳಲ್ಲಿಯೂ ಧ್ವಜ ಹಾರಿಸುವುದನ್ನು ಕಡ್ಡಾಯಗೊಳಿಸುವ ಚಿಂತನೆ ಇದೆ. ಖಾಸಗಿ ಸಂಸ್ಥೆಗಳೂ ಕನ್ನಡ ಬಾವುಟ ಹಾರಿಸುವಂತೆ ಈ ತಿಂಗಳಲ್ಲೇ ಆದೇಶ ಹೊರಡಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಮಾತೃಭಾಷೆಯಲ್ಲಿ ಕಲಿತ ಜ್ಞಾನ ಗಟ್ಟಿಯಾಗಿರುತ್ತದೆ
ಭಾಷೆ ಸಂಸ್ಕೃತಿ ಮತ್ತು ಜ್ಞಾನದ ಪ್ರತಿಬಿಂಬ. ಮಾತೃಭಾಷೆಯಲ್ಲಿ ಕಲಿಯುವ ಜ್ಞಾನ ಹೆಚ್ಚು ಗಟ್ಟಿಯಾಗಿರುತ್ತದೆ. ಕನ್ನಡ ಕೇವಲ ಸರ್ಕಾರಿ ಭಾಷೆಯಾಗದೆ ಪ್ರತಿಯೊಬ್ಬರ ಹೃದಯದ ಭಾಷೆಯಾಗಬೇಕು. ಕನ್ನಡವನ್ನು ಪ್ರೀತಿಸುವುದು ತಾಯಿಯನ್ನು ಪ್ರೀತಿಸಿದಂತೆ. ನುಡಿ ಉಳಿದರೆ ನಾಡು ಉಳಿಯುತ್ತದೆ, ನಾಡು ಉಳಿದರೆ ನುಡಿ ಉಳಿಯುತ್ತದೆ. ದೇಶ-ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸಂಘಟನೆಗಳನ್ನು ಕಟ್ಟಿಕೊಂಡು ಮಾತೃಭಾಷೆಯ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಕನ್ನಡಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಭಾಷೆ ಪಂಪ, ರನ್ನ, ಜನ್ನ, ಕುಮಾರವ್ಯಾಸ, ಕನಕದಾಸ, ಪುರಂದರದಾಸ, ಸರ್ವಜ್ಞ, ಬಸವಣ್ಣ ಸೇರಿದಂತೆ ಅನೇಕ ಮಹನೀಯರ ಕೊಡುಗೆಯಿಂದ ಶ್ರೀಮಂತವಾಗಿದೆ. ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಗೋಕಾಕ್, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಸಿದ್ದಲಿಂಗಯ್ಯ ಹಾಗೂ ನಿಸಾರ್ ಅಹಮದ್ ಅವರ ಸೇವೆಯನ್ನು ಸ್ಮರಿಸಬೇಕು ಎಂದರು.
ಡಿಜಿಟಲ್ ಯುಗದಲ್ಲಿ ಎಲ್ಲ ಭಾಷೆಗಳ ಬಳಕೆಗೆ ಅವಕಾಶವಿದ್ದು, ಭಾಷೆಗಳ ಸ್ಪರ್ಧೆಯ ನಡುವೆ ಕನ್ನಡವೂ ಬೆಳೆಯಬೇಕು. ಮಕ್ಕಳು ಮೊದಲು ಕನ್ನಡ ಕಲಿಯಬೇಕು. ಕಲಿತರೆ ಸಾಲದು, ದಿನನಿತ್ಯದ ಬದುಕಿನಲ್ಲಿಯೂ ಕನ್ನಡ ಬಳಸಬೇಕು. ಕಲೆ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡದ ಪ್ರಭಾವ ಹೆಚ್ಚಬೇಕು ಎಂದು ಕರೆ ನೀಡಿದರು.
ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ಶೇ.7ರಷ್ಟು ಮೀಸಲಾತಿ
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿ ಹಾಗೂ ಪದವಿಪೂರ್ವ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಪ್ರವೇಶದಲ್ಲಿ ಶೇ.7ರಷ್ಟು ಮೀಸಲಾತಿ ನೀಡಲಾಗಿದೆ. ಗ್ರಾಮೀಣ ಸರ್ಕಾರಿ ಶಾಲೆಗಳ ಮಕ್ಕಳಿಗೆ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಆದೇಶ ನೀಡಲಾಗಿದೆ. 25,498 ದ್ವಿಭಾಷಾ ಶಾಲೆಗಳು ಆರಂಭವಾಗಿದ್ದು, 250 ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಆರನೇ ತರಗತಿಯಿಂದ ಕೌಶಲ್ಯ ಆಧಾರಿತ ಶಿಕ್ಷಣ ಆರಂಭಿಸಲಾಗಿದೆ. ಆರನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ ತರಬೇತಿ ನೀಡಲು ಸರ್ಕಾರ ಮುಂದಾಗಿದ್ದು, ಹನ್ನೆರಡನೇ ತರಗತಿವರೆಗೂ ಮುಂದುವರಿಸಲಾಗುವುದು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಲಾಗುತ್ತಿದ್ದು, ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಹೊಸ ರೂಪ ನೀಡಲಾಗುತ್ತಿದೆ ಎಂದರು.
ನಗರದ ಮಕ್ಕಳಿಗೆ ಗ್ರಾಮಾನುಭವ ಕಾರ್ಯಕ್ರಮ
ನಗರ ಪ್ರದೇಶದ ಮಕ್ಕಳಿಗೆ ಗ್ರಾಮೀಣ ಬದುಕು, ಕೃಷಿ, ತೋಟಗಾರಿಕೆ ಹಾಗೂ ಗ್ರಾಮೀಣ ಸಂಸ್ಕೃತಿಯ ಪರಿಚಯ ಮಾಡಿಕೊಡಲು ಗ್ರಾಮಾನುಭವ ಕಾರ್ಯಕ್ರಮ ರೂಪಿಸಲಾಗಿದೆ. ಬೆಂಗಳೂರು ಸೇರಿದಂತೆ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಎರಡು-ಮೂರು ದಿನಗಳ ಗ್ರಾಮವಾಸ್ತವ್ಯದ ಅನುಭವ ನೀಡಲಾಗುವುದು. ವಿದ್ಯಾರ್ಥಿಗಳನ್ನು ತರಗತಿ ಕೊಠಡಿಯಿಂದ ಹೊರತಂದು ಗ್ರಾಮೀಣ ಬದುಕಿನ ಪರಿಚಯ ಮಾಡಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ವಿವರಿಸಿದರು.
10 ಸಾವಿರ ಭಾರತ ಜೋಡೋ ಯುವ ಸಂಘಗಳ ಸ್ಥಾಪನೆ
ಯುವಕರಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ನಾಯಕತ್ವದ ಗುಣ ಬೆಳೆಸಲು ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ 10 ಸಾವಿರ ಭಾರತ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗುವುದು. 16ರಿಂದ 35 ವರ್ಷದೊಳಗಿನ ಯುವಕರನ್ನು ಸದಸ್ಯರನ್ನಾಗಿ ಮಾಡಲಾಗುತ್ತದೆ. ಕ್ರೀಡೆ, ಕಲೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯವನ್ನು ಮಾದಕ ವಸ್ತು ಮುಕ್ತಗೊಳಿಸುವ ಗುರಿಯನ್ನೂ ಸರ್ಕಾರ ಹೊಂದಿದೆ. 2047ರ ವೇಳೆಗೆ ಕರ್ನಾಟಕಕ್ಕೆ ಹೊಸ ರೂಪ ನೀಡಲು ಪ್ರಾದೇಶಿಕ ಯೋಜನೆ ರೂಪಿಸಲಾಗುತ್ತಿದೆ. ಮುಂದಿನ 20 ವರ್ಷಗಳಲ್ಲಿ ಐದು ಲಕ್ಷ ಕೋಟಿ ರೂ. ಹೂಡಿಕೆಗೆ ಕಾರ್ಯಕ್ರಮ ಸಿದ್ಧಪಡಿಸಲಾಗುತ್ತಿದೆ. ಈಗಾಗಲೇ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಆದೇಶ ನೀಡಲಾಗಿದ್ದು, 66 ಸಾವಿರ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಯುವನಿಧಿ ಯೋಜನೆಯ ಜತೆಗೆ ಖಾಸಗಿ ಉದ್ಯೋಗಾವಕಾಶಗಳಿಗಾಗಿ ಉದ್ಯೋಗ ಸೇತು ವ್ಯವಸ್ಥೆ ರೂಪಿಸಲಾಗಿದೆ ಎಂದರು.
ಕ್ರೀಡಾಪಟುಗಳಿಗೆ ಪ್ರೋತ್ಸಾಹ
ಏಷ್ಯನ್ ಕ್ರೀಡಾಕೂಟದಲ್ಲಿ ರಾಜ್ಯದ ಕ್ರೀಡಾಪಟುಗಳು ಎಂಟು ಪದಕಗಳನ್ನು ಗೆದ್ದಿದ್ದಾರೆ. ಚಿನ್ನದ ಪದಕ ವಿಜೇತರಿಗೆ ಒಂದು ಕೋಟಿ ರೂ., ಬೆಳ್ಳಿ ಪದಕ ವಿಜೇತರಿಗೆ 75 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 50 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ 20 ಕ್ರೀಡಾಪಟುಗಳಿಗೆ ತಲಾ ಐದು ಲಕ್ಷ ರೂ. ನೀಡಲಾಗಿದೆ. ಪ್ಯಾರಾಲಿಂಪಿಕ್ಸ್ಗೆ ಸಿದ್ಧತೆ ನಡೆಸುತ್ತಿರುವ ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರೂ. ನೆರವು ನೀಡಲಾಗುತ್ತಿದೆ.
ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.2ರಷ್ಟು ಹಾಗೂ ಪೊಲೀಸ್ ಮತ್ತು ಅರಣ್ಯ ಇಲಾಖೆಯಲ್ಲಿ ಶೇ.3ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆ, ಕಲೆ ಮತ್ತು ಸಾಹಿತ್ಯದಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಾಲಿನ ದರ ಏರಿಕೆಯಿಂದ 11 ಲಕ್ಷ ರೈತ ಕುಟುಂಬಗಳಿಗೆ ನೆರವು
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಆರ್ಥಿಕ ಶಕ್ತಿ ತುಂಬುವ ಉದ್ದೇಶದಿಂದ ಪ್ರತಿ ಲೀಟರ್ ಹಾಲಿನ ದರವನ್ನು ಎಂಟು ರೂ. ಹೆಚ್ಚಿಸಲಾಗಿದೆ. ಇದರಿಂದ ರೈತರಿಗೆ ಏಳು ರೂ. ಹಾಗೂ ಒಕ್ಕೂಟ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೆರವು ದೊರೆಯಲಿದೆ. ಈ ಕ್ರಮದಿಂದ ಸುಮಾರು 11 ಲಕ್ಷ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ರೈತರ ಆದಾಯ ಹೆಚ್ಚಿಸಲು ತೇಗ ಸಿರಿ ಯೋಜನೆ, ಸಾವಯವ ಕೃಷಿಗೆ ಉತ್ತೇಜನ ನೀಡುವ ವಸುಧಾಮೃತ ಕಾರ್ಯಕ್ರಮ ಹಾಗೂ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ. 37.32 ಲಕ್ಷ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಲಾಗಿದೆ. 38 ಲಕ್ಷ ರೈತರಿಗೆ 30 ಸಾವಿರ ಕೋಟಿ ರೂ. ಸಾಲ ವಿತರಿಸಲಾಗಿದೆ. 3.41 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲಾಗಿದೆ. 32,138 ಕೃಷಿ ಹೊಂಡಗಳ ನಿರ್ಮಾಣಕ್ಕೆ 363 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. 2,825 ಕೋಟಿ ರೂ. ವೆಚ್ಚದಲ್ಲಿ ಹನಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮುಂದಾಗಲಾಗಿದೆ ಎಂದರು.
ಇದಲ್ಲದೆ, ಮೂರು ಕೋಟಿ 32 ಲಕ್ಷ ರೂ. ವೆಚ್ಚದಲ್ಲಿ ಒಂದು ಸಾವಿರ ಚದರ ಕಿಲೋಮೀಟರ್ ಬಿತ್ತನೆ ಪ್ರದೇಶದಲ್ಲಿ ಆಕಾಶವಾಣಿ ಹಾಗೂ ಉಪಗ್ರಹ ಆಧಾರಿತ ಬೆಳೆ ಸಮೀಕ್ಷೆ ನಡೆಸಲಾಗುವುದು. ಐದು ಜಿಲ್ಲೆಗಳ ಐದು ಹೋಬಳಿಗಳಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ ಕೈಗೊಳ್ಳಲಾಗುವುದು. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡಲು ರಫ್ತುದಾರರಿಗೆ ತರಬೇತಿ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ರಸ್ತೆ, ಆರೋಗ್ಯ ಕ್ಷೇತ್ರಕ್ಕೂ ಆದ್ಯತೆ
ಮುಖ್ಯಮಂತ್ರಿ ರಸ್ತೆ ಸಂಪರ್ಕ ಯೋಜನೆಗೆ 10 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ವ್ಯಾಪ್ತಿಯ 20 ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಿ ಆಸ್ಪತ್ರೆ ದತ್ತು ಯೋಜನೆ ಆರಂಭಿಸಲಾಗಿದ್ದು, 11 ವೈದ್ಯಕೀಯ ಕಾಲೇಜುಗಳು ಇದಕ್ಕೆ ಒಪ್ಪಂದ ಮಾಡಿಕೊಂಡಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 100 ಹೊಸ ಆಂಬುಲೆನ್ಸ್ಗಳನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದರು.
1995ರ ನಂತರ ಆರಂಭವಾದ ಸರ್ಕಾರಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡುವ ಬಗ್ಗೆಯೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಬಡ ರೈತರಿಗಾಗಿ ಮೂರು ಎಕರೆವರೆಗಿನ ಜಮೀನನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿಕೊಡುವ ನೇಗಿಲ ಯೋಗಿ ಯೋಜನೆ ರೂಪಿಸಲಾಗಿದೆ. ಐದು ಲಕ್ಷ ನಿವೇಶನಗಳನ್ನು ವಿತರಿಸುವ ಕಾರ್ಯಕ್ರಮವನ್ನೂ ಸರ್ಕಾರ ಕೈಗೆತ್ತಿಕೊಂಡಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳನ್ನು ಕಂಡಾಗ 50 ವರ್ಷಗಳ ಹಿಂದೆ ತಾವು ವಿದ್ಯಾರ್ಥಿಯಾಗಿದ್ದಾಗ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ನೆನಪು ಮರುಕಳಿಸುತ್ತಿದೆ. ಶಾಲಾ ದಿನಗಳಲ್ಲಿ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಇಂದು ರಾಜ್ಯದ ಪ್ರಜಾಸೇವಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ವಿದ್ಯಾರ್ಥಿಗಳೂ ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಬೇಕು ಎಂದು ಮುಖ್ಯಮಂತ್ರಿ ಹಾರೈಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.