ಹಾಲಿನ ದರ ಏರಿಕೆ ಅನಿವಾರ್ಯ, ರೈತರ ಹಿತದೃಷ್ಟಿಯಿಂದ ನಿರ್ಧಾರ: ಬಸವರಾಜ ರಾಯರೆಡ್ಡಿ
ಹಾಲಿನ ದರ ಏರಿಕೆ ರೈತರ ಹಿತದೃಷ್ಟಿಯಿಂದ ಕೈಗೊಂಡ ಅನಿವಾರ್ಯ ನಿರ್ಧಾರ ಎಂದು ಸಚಿವ ಬಸವರಾಜ ರಾಯರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿವಿಗಳಲ್ಲಿ ಹಣ ಮತ್ತು ಭೂಮಿ ದುರುಪಯೋಗವಾಗಿರುವ ಗಂಭೀರ ಆರೋಪ ಮಾಡಿದ್ದು, ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.
Basavaraj-Rayareddy-Defends-Milk-Price-Hike-Alleges-Land-Misuse-in-Universities


ಗದಗ, 01 ನವೆಂಬರ್ (ಹಿ.ಸ.):

ಹಾಲಿನ ದರ ಏರಿಕೆಯಿಂದ ಗ್ರಾಹಕರಿಗೆ ಹೊರೆ ಆಗುವುದು ಸಹಜ. ಆದರೆ ಹೆಚ್ಚುವರಿ ಹಣವನ್ನು ಸರ್ಕಾರ ಪಡೆಯುತ್ತಿಲ್ಲ. ಬದಲಾಗಿ ರೈತರಿಗೆ ನೀಡಲಾಗುತ್ತಿದೆ. ರೈತರ ಅನುಕೂಲದ ದೃಷ್ಟಿಯಿಂದ ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ವರ್ಷಗಳಿಂದ ಹಾಲಿನ ದರ ಏರಿಕೆ ಮಾಡಿರಲಿಲ್ಲ. ಕಡಿಮೆ ದರದಲ್ಲಿ ಹಾಲು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಇನ್ನೂ ಒಂದೆರಡು ರೂಪಾಯಿ ಕಡಿಮೆಯಿದೆ. ಹೀಗಾಗಿ ಪ್ರತಿವರ್ಷ ಸಹಜವಾಗಿ ದರ ಪರಿಷ್ಕರಣೆ ಮಾಡಬೇಕಾಗುತ್ತದೆ.

ಹಾಲಿನ ದರ ಏರಿಕೆಯಿಂದ ಗ್ರಾಹಕರಿಗೆ ಹೊರೆ ಆಗಿರುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅದೇ ಹಣ ರೈತರಿಗೆ ತಲುಪುವುದರಿಂದ ಅವರಿಗೆ ಅನುಕೂಲವಾಗಲಿದೆ.

ಗ್ರಾಹಕರು ಬೈದರೂ ರೈತರು ಖುಷಿಯಾಗುತ್ತಾರೆ. ಟೀಕೆಗಳು ಬರುವುದು ಸಹಜ, ಆದರೆ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.

ರನ್ಯಾ ರಾವ್ ವಿವಿಐಪಿ ದರ್ಶನಕ್ಕೆ ಅವಕಾಶ ನೀಡಿದ್ದು ತಪ್ಪು

ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ರನ್ಯಾ ರಾವ್ ಹಾಸನಾಂಬೆ ದೇವಿ ದರ್ಶನಕ್ಕೆ ವಿವಿಐಪಿ ಗೇಟ್ ಮೂಲಕ ಪ್ರವೇಶ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ರನ್ಯಾ ರಾವ್ ಅವರಿಗೆ ವಿಐಪಿ ದರ್ಶನ ನೀಡಿರುವುದು ತಪ್ಪಾಗಿರಬಹುದು.

ವಿಐಪಿ ದರ್ಶನಕ್ಕೆ ಅವಕಾಶ ನೀಡಿದ್ದು ತಪ್ಪು ಎಂದು ನಾನು ಹೇಳಿದ್ದೇನೆ. ಆದರೆ ನಾನು ಗೃಹ ಸಚಿವನಲ್ಲ, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.

ಎಸ್ಐಆರ್ ಪ್ರಕ್ರಿಯೆ ಸರಿಯಾಗಿಲ್ಲ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಮಾತನಾಡಿದ ಅವರು, ಎಸ್ಐಆರ್ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆ ಮುಗಿದಿದೆ. ಹೊಸ ಮತದಾರರ ಹೆಸರು ಸೇರ್ಪಡೆಗೆ ಅವಕಾಶಗಳಿವೆ.

ಕೆಲವು ಕಡೆ ಎಸ್ಐಆರ್ ಸರಿಯಾಗಿದೆ ಎಂದರೆ, ಇನ್ನು ಕೆಲವು ಕಡೆ ಸರಿಯಾಗಿಲ್ಲ ಎಂಬ ಆಕ್ಷೇಪಗಳಿವೆ. ಕೆಲವು ಪ್ರದೇಶಗಳಲ್ಲಿ ಅಧಿಕಾರಿಗಳಿಂದ ತಪ್ಪುಗಳಾಗಿರಬಹುದು. ಆದರೆ ದೇಶದಲ್ಲಿ ನಡೆಸಿರುವ ಎಸ್ಐಆರ್ ಪ್ರಕ್ರಿಯೆಯ ವಿಧಾನವೇ ಸರಿಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande