
ಕಲಬುರಗಿ, 01 ನವೆಂಬರ್ (ಹಿ.ಸ.):
ಹಾಲಿನ ದರ ಏರಿಕೆ ನಿರ್ಧಾರವನ್ನು ಸಣ್ಣ ನೀರಾವರಿ ಸಚಿವ ಡಾ.ಅಜಯ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.
ರೈತರು ಸಂಕಷ್ಟದಲ್ಲಿದ್ದು, ಹಾಲು ಉತ್ಪಾದಕರಿಗೆ ನೆರವಾಗುವ ಉದ್ದೇಶದಿಂದ ಮುಖ್ಯಮಂತ್ರಿ ಹಾಲಿನ ದರ ಹೆಚ್ಚಳದ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಹಾಲಿನ ದರ ಏರಿಕೆಯಿಂದ ಪ್ರತಿ ಲೀಟರ್ಗೆ ಹೆಚ್ಚುವರಿಯಾಗಿ ಸಂಗ್ರಹಿಸುವ 8 ರೂಪಾಯಿಗಳ ಪೈಕಿ 7 ರೂಪಾಯಿ ನೇರವಾಗಿ ರೈತರಿಗೆ ತಲುಪಲಿದೆ. ಉಳಿದ ಒಂದು ರೂಪಾಯಿಯನ್ನು ಮಾತ್ರ ಕೆಎಂಎಫ್ಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ. ಪ್ಯಾಕೇಜಿಂಗ್, ಡೀಸೆಲ್ ಹಾಗೂ ಪೆಟ್ರೋಲ್ ದರಗಳ ಏರಿಕೆಯನ್ನೂ ಪರಿಗಣಿಸಿ ಬೆಲೆ ಹೆಚ್ಚಳ ಮಾಡಲಾಗಿದೆ ಎಂದರು.
ಬೆಲೆ ಏರಿಕೆ ವಿಚಾರವಾಗಿ ಬಿಜೆಪಿ ನಾಯಕರು ಟೀಕೆ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಸಿಲಿಂಡರ್ ಹಾಗೂ ಪೆಟ್ರೋಲ್ ಬೆಲೆಯನ್ನು ಕೇಂದ್ರ ಸರ್ಕಾರ ಎಷ್ಟು ಹೆಚ್ಚಿಸಿದೆ ಎಂಬುದನ್ನು ಬಿಜೆಪಿ ನಾಯಕರು ಮೊದಲು ಗಮನಿಸಬೇಕು.
ಬೆಲೆ ಏರಿಕೆ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ. ಜನರ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ನೆರವು ಕೋರಿ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಡಾ.ಅಜಯ್ ಸಿಂಗ್, ಚುನಾವಣೆಯಲ್ಲಿ ಸೋಲು-ಗೆಲುವು ಸಹಜ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಾರಣಾಸಿ ಹಾಗೂ ನಾಗಪುರದಲ್ಲೂ ಬಿಜೆಪಿ ಸೋತಿದೆ. ಹಾಗಾದರೆ ಆ ಸೋಲಿನ ಬಗ್ಗೆ ಬಿಜೆಪಿ ನಾಯಕರು ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಿರುವುದಕ್ಕೆ ವಿರೋಧ ವ್ಯಕ್ತಪಡಿಸುವ ಬಿಜೆಪಿಯ ನಿಲುವನ್ನು ಪ್ರಶ್ನಿಸಿದ ಅವರು, ಪರಿಷತ್ ಚುನಾವಣೆಗೆ ಬ್ಯಾಲೆಟ್ ಬಳಸದೆ ಇನ್ನೇನು ಮಾಡಬೇಕು? ಎಲ್ಲ ಚುನಾವಣೆಗಳನ್ನೂ ಬ್ಯಾಲೆಟ್ ಪೇಪರ್ ಮೂಲಕವೇ ನಡೆಸಲಿ. ಬ್ಯಾಲೆಟ್ ವ್ಯವಸ್ಥೆ ಬಗ್ಗೆ ಬಿಜೆಪಿಯವರು ಏಕೆ ಆತಂಕಪಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇನ್ನು ಎಸ್ಐಆರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಏನಾಗುತ್ತಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಎಂದು ಹೇಳಿದರು. ಚುನಾವಣೆ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಈ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R