ಜಾಲಹಳ್ಳಿ ಕ್ರಾಸ್ ಅಂಡರ್ಪಾಸ್ ಕಾಮಗಾರಿ ಶೀಘ್ರ ಆರಂಭಕ್ಕೆ ಸೂಚನೆ
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ತೆರವು, ಕಾಂತೀರವ ಸ್ಟುಡಿಯೋ ರಸ್ತೆಯ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ನಿರ್ದೇಶನ
jalahalli-cross-underpass-road-infrastructure-inspection-peenya-industrial-area


ಬೆಂಗಳೂರು, 09 ಅಕ್ಟೋಬರ್ (ಹಿ.ಸ.):

ಜಾಲಹಳ್ಳಿ ಕ್ರಾಸ್ನಲ್ಲಿ ವಾಹನ ದಟ್ಟಣೆಯಿಂದ ಪಾದಚಾರಿಗಳ ಸುರಕ್ಷತೆಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಅಂಡರ್ಪಾಸ್ ನಿರ್ಮಿಸಲು ಪ್ರಸ್ತಾವಿಸಲಾಗಿದೆ.

ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಪರಿಹಾರ ಪಾವತಿಯ ಹಂತ ತಲುಪಿದ್ದು, ಭೂಮಾಲೀಕರಿಗೆ ಪರಿಹಾರ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ವಿಸ್ ರಸ್ತೆ ಕಾಮಗಾರಿಗಳನ್ನು ಶೀಘ್ರ ಆರಂಭಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಅಧಿಕಾರಿಗಳಿಗೆ ಸೂಚಿಸಿದರು.

ವೈಟ್ಟಾಪಿಂಗ್ ಕಾಮಗಾರಿ ಪರಿಶೀಲನೆ: ಜಾಲಹಳ್ಳಿ ಕ್ರಾಸ್ನಿಂದ ಟಿವಿಎಸ್ ಕ್ರಾಸ್ವರೆಗಿನ ಈಗಾಗಲೇ ವೈಟ್ಟಾಪಿಂಗ್ ಮಾಡಿರುವ ರಸ್ತೆಯನ್ನು ಪರಿಶೀಲಿಸಲಾಯಿತು. ಟಿವಿಎಸ್ ಕ್ರಾಸ್ನಿಂದ ಸೋನಲ್ ಗಾರ್ಮೆಂಟ್ಸ್ವರೆಗಿನ ರಸ್ತೆಯಲ್ಲಿ ಪ್ರಗತಿಯಲ್ಲಿರುವ ವೈಟ್ಟಾಪಿಂಗ್ ಕಾಮಗಾರಿಯ ಸ್ಥಿತಿಗತಿಯನ್ನೂ ಅಧಿಕಾರಿಗಳು ಪರಿಶೀಲಿಸಿದರು.

ತ್ಯಾಜ್ಯ ತೆರವಿಗೆ ಸೂಚನೆ: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ಬದಿಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಅದೇ ರೀತಿ, ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಕಾಂತೀರವ ಸ್ಟುಡಿಯೋ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸೂಚಿಸಲಾಯಿತು.

ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಹಾಗೂ ಬಿ-ಸ್ಮೈಲ್ನ ಹಿರಿಯ ಎಂಜಿನಿಯರ್ಗಳು ಮತ್ತು ಅಧಿಕಾರಿಗಳು, ಘನತ್ಯಾಜ್ಯ ನಿರ್ವಹಣಾ ವಿಭಾಗದ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande