ರಾಜ್ಯದ 45 ಐಸ್ಕ್ರೀಂ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ: ಅವಧಿ ಮೀರಿದ ಪದಾರ್ಥ ಪತ್ತೆ
ರಾಜ್ಯದ 45 ಐಸ್ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ ನಡೆಸಿದ್ದು, ಅವಧಿ ಮೀರಿದ ಪದಾರ್ಥಗಳು ಪತ್ತೆಯಾಗಿವೆ. 70 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ.
food-safety-raid-ice-cream-units


ಬೆಂಗಳೂರು, 09 ಅಕ್ಟೋಬರ್ (ಹಿ.ಸ.):

ಕರ್ನಾಟಕದಾದ್ಯಂತ ಐಸ್ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು, ಮೈಸೂರು, ರಾಯಚೂರು ಸೇರಿದಂತೆ ವಿವಿಧೆಡೆ ಒಟ್ಟು 45 ಘಟಕಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳು ಹಾಗೂ ಲೇಬಲಿಂಗ್ ನಿಯಮಗಳ ಉಲ್ಲಂಘನೆ ಪತ್ತೆಯಾಗಿದೆ.

ಐಸ್ಕ್ರೀಂ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಬೆಂಗಳೂರಿನ ಜಯನಗರ 3ನೇ ಬ್ಲಾಕ್ನಲ್ಲಿರುವ ಸಾವರ ಐಸ್ಕ್ರೀಂ ಕೆಫೆ, ಬಿಳೇಕಹಳ್ಳಿಯ ಬನ್ನೇರುಘಟ್ಟ ರಸ್ತೆಯ ಎನ್ ಎಂಟರ್ಪ್ರೈಸಸ್, ಮೈಸೂರಿನ ಜಾನ್ ಕ್ಯಾಂಡಿ ಐಸ್ಕ್ರೀಂ ತಯಾರಿಕಾ ಘಟಕ ಹಾಗೂ ರಾಯಚೂರಿನ ಜೆಮಿನಿ ಐಸ್ಕ್ರೀಂ ತಯಾರಿಕಾ ಘಟಕ ಸೇರಿದಂತೆ ಹಲವು ಕಡೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

70 ಆಹಾರ ಮಾದರಿಗಳ ಸಂಗ್ರಹತಪಾಸಣೆಯ ಸಂದರ್ಭದಲ್ಲಿ ಐಸ್ಕ್ರೀಂ, ಹಾಲು, ಹಾಲಿನ ಪುಡಿ, ಫ್ಲೇವರಿಂಗ್ ಪದಾರ್ಥಗಳು ಮತ್ತು ಸಕ್ಕರೆ ಸೇರಿದಂತೆ ಒಟ್ಟು 70 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಉತ್ಪನ್ನಗಳ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾದರಿಗಳನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ.

ಅವಧಿ ಮೀರಿದ ಪದಾರ್ಥಗಳು ಪತ್ತೆಪರಿಶೀಲನೆ ವೇಳೆ ಅವಧಿ ಮೀರಿದ ಐಸ್ಕ್ರೀಂ, ಹಾಲು, ಬಿಸ್ಕತ್ ಮತ್ತು ಕೊಬ್ಬರಿ ಪುಡಿ ಪತ್ತೆಯಾಗಿವೆ. ಕೆಲವು ಆಹಾರ ಉತ್ಪನ್ನಗಳ ಮೇಲೆ ಲೇಬಲಿಂಗ್ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದಿರುವುದೂ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಸಂಗ್ರಹಿಸಿರುವ ಮಾದರಿಗಳ ಪ್ರಯೋಗಾಲಯದ ವರದಿ ಆಧರಿಸಿ ಉತ್ಪನ್ನಗಳ ಗುಣಮಟ್ಟದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ನಿಯಮಗಳ ಉಲ್ಲಂಘನೆ ದೃಢಪಟ್ಟಲ್ಲಿ ಸಂಬಂಧಪಟ್ಟ ಘಟಕಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಹಿಂದೆಯೂ ನಡೆದಿದ್ದ ದಾಳಿಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು 64 ಪಿಜಿಗಳ ಮೇಲೆ ದಾಳಿ ನಡೆಸಿ, ಆಹಾರದ ನೈರ್ಮಲ್ಯ, ಸ್ವಚ್ಛತೆ ಹಾಗೂ ಅವಧಿ ಮೀರಿದ ಪದಾರ್ಥಗಳ ಕುರಿತು ಪರಿಶೀಲನೆ ನಡೆಸಿದ್ದರು.

ಇದಕ್ಕೂ ಮುನ್ನ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳ ಮೇಲೆಯೂ ಸರಣಿ ತಪಾಸಣೆ ನಡೆದಿತ್ತು. ಮತ್ತೊಂದೆಡೆ, ಚಿಕ್ಕಮಗಳೂರಿನಲ್ಲಿ ನಕಲಿ ತುಪ್ಪ ತಯಾರಿಕಾ ಜಾಲ ಪತ್ತೆಯಾಗಿತ್ತು.

ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸುರಕ್ಷತೆ ಕುರಿತು ಇಲಾಖೆ ಕೈಗೊಂಡಿರುವ ನಿರಂತರ ಕಾರ್ಯಾಚರಣೆಗಳ ಭಾಗವಾಗಿ ಇದೀಗ ರಾಜ್ಯದ 45 ಐಸ್ಕ್ರೀಂ ತಯಾರಿಕಾ ಘಟಕಗಳ ಮೇಲೆ ತಪಾಸಣೆ ನಡೆಸಲಾಗಿದೆ ವರದಿ ಬಂದ್ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande