
ಬೆಂಗಳೂರು, 09 ಅಕ್ಟೋಬರ್ (ಹಿ.ಸ.):
ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ನಕಲಿ ಔಷಧ ದಂಧೆಯ ಕುರಿತು ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಸಂಗತಿಗಳು ಬಹಿರಂಗವಾಗಿವೆ.
ಕೇವಲ ₹200ರಿಂದ ₹300 ಬೆಲೆಯ ಸಾಮಾನ್ಯ ಆ್ಯಂಟಿಬಯೋಟಿಕ್ ಔಷಧಗಳಿಗೆ ಪ್ರಸಿದ್ಧ ಅಂತಾರಾಷ್ಟ್ರೀಯ ಬ್ರ್ಯಾಂಡ್ಗಳ ನಕಲಿ ಲೇಬಲ್ ಅಂಟಿಸಿ, ಅವುಗಳನ್ನು 26ರಿಂದ 30 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿರುವ ಜಾವಿಸೆಫ್ಟಾ ಮತ್ತು ಎಂಬ್ಲಾಬಿಯೋ ಎಂಬ ಎರಡು ಪ್ರತಿ ಜೀವಕ ಬ್ರ್ಯಾಂಡ್ಗಳನ್ನು ಗುರಿಯಾಗಿಸಿಕೊಂಡು ಈ ದಂಧೆ ನಡೆಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಔಷಧಗಳ ಮಾರುಕಟ್ಟೆ ಬೆಲೆ ಕ್ರಮವಾಗಿ ಸುಮಾರು ₹5,000ರಿಂದ ₹6,000 ಹಾಗೂ ₹6,000ರಿಂದ ₹7,800 ಇರಬಹುದಾಗಿದೆ.
ಆದರೆ, ಭಾರತದಲ್ಲಿ ಉತ್ಪಾದನೆಯಾಗುವ ಇದೇ ಮಾದರಿಯ ಕೆಲವು ಔಷಧಗಳನ್ನು ₹200ರಿಂದ ₹300ಕ್ಕೆ ಖರೀದಿಸಿ, ಅವುಗಳಿಗೆ ದುಬಾರಿ ಬ್ರ್ಯಾಂಡ್ಗಳ ನಕಲಿ ಲೇಬಲ್ ಅಂಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಬಿಡದಿಯಲ್ಲಿ ಮರುಪ್ಯಾಕಿಂಗ್ ಅಡ್ಡೆ:ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿನ ಸ್ಥಳೀಯ ಔಷಧ ತಯಾರಿಕಾ ಘಟಕಗಳು ಹಾಗೂ ಡೀಲರ್ಗಳಿಂದ ಅಗ್ಗದ ದರದ ಆ್ಯಂಟಿಬಯೋಟಿಕ್ಗಳನ್ನು ಅಧಿಕೃತ ಇಂಡೆಂಟ್ ಮೂಲಕ ತರಿಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ.
ಬಳಿಕ ಅವುಗಳನ್ನು ಬೆಂಗಳೂರು ಸಮೀಪದ ಬಿಡದಿಗೆ ಸಾಗಿಸಿ, ಜಾವಿಸೆಫ್ಟಾ ಮತ್ತು ಎಂಬ್ಲಾಬಿಯೋ ಬ್ರ್ಯಾಂಡ್ಗಳ ಹೆಸರಿನ ನಕಲಿ ಪೆಟ್ಟಿಗೆಗಳಲ್ಲಿ ಮರುಪ್ಯಾಕಿಂಗ್ ಮಾಡಲಾಗುತ್ತಿತ್ತು.
ನಂತರ ಔಷಧಗಳ ಮೂಲ ಸ್ವರೂಪವನ್ನು ಮರೆಮಾಚಿ, ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳೆಂದು ಬಿಂಬಿಸಿ ಸಾವಿರಾರು ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತನಿಖಾ ಮೂಲಗಳು ತಿಳಿಸಿವೆ.
ಮೂರು ರಾಜ್ಯಗಳಲ್ಲಿ ಎಸ್ಐಟಿ ದಾಳಿಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಹರಿಯಾಣ ರಾಜ್ಯಗಳಲ್ಲಿ ದಾಳಿ ನಡೆಸಿದ್ದಾರೆ.
ಈ ವೇಳೆ ಔಷಧಗಳನ್ನು ತರಿಸಿಕೊಳ್ಳಲು ಬಳಸಿದ್ದ ದಾಖಲೆಗಳು, ನಕಲಿ ಪೆಟ್ಟಿಗೆಗಳು ಹಾಗೂ ಲೇಬಲ್ಗಳ ಮುದ್ರಣಕ್ಕೆ ನೀಡಿದ್ದ ಆರ್ಡರ್ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಔಷಧಗಳನ್ನು ನಿಯಮಬಾಹಿರವಾಗಿ ಮರುಪ್ಯಾಕಿಂಗ್ ಮಾಡುವುದು ಮತ್ತು ನಕಲಿ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುವುದು ಗಂಭೀರ ಕಾನೂನು ಉಲ್ಲಂಘನೆಯಾಗಿದೆ. ಇಂತಹ ಕೃತ್ಯಗಳು ಔಷಧಗಳ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಅನುಮಾನ ಮೂಡಿಸುವುದರ ಜತೆಗೆ ಸಾರ್ವಜನಿಕರ ಆರೋಗ್ಯಕ್ಕೂ ಅಪಾಯ ಉಂಟುಮಾಡುವ ಸಾಧ್ಯತೆಯಿದೆ.
ಪ್ರಕರಣದಲ್ಲಿ ಬಂಧಿತರಾಗಿರುವ ಏಳು ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಈ ಜಾಲದ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ, ಔಷಧಗಳನ್ನು ಎಲ್ಲೆಲ್ಲಿ ಮಾರಾಟ ಮಾಡಲಾಗಿದೆ ಹಾಗೂ ದಂಧೆಯ ವ್ಯಾಪ್ತಿ ಎಷ್ಟಿದೆ ಎಂಬುದನ್ನು ಪತ್ತೆಹಚ್ಚಲು ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R