ವೈದ್ಯರ ಚೀಟಿ ಮೂಲಕ ದೊರೆಯುವ ಔಷಧಗಳ ಜಾಹೀರಾತಿಗೆ ಕಡಿವಾಣ ಹಾಕಲು ಕೇಂದ್ರದ ಚಿಂತನೆ
ಔಷಧ ನಿಯಮಗಳು–1945ಕ್ಕೆ ತಿದ್ದುಪಡಿ ಕರಡು ಅಧಿಸೂಚನೆ | ಔಷಧ ತಯಾರಕರ ಜತೆಗೆ ಸಗಟು, ಚಿಲ್ಲರೆ ಮಾರಾಟಗಾರರಿಗೂ ನಿರ್ಬಂಧ ವಿಸ್ತರಿಸಲು ಪ್ರಸ್ತಾವನೆ
स्वास्थ्य मंत्रालय का लोगो


ನವದೆಹಲಿ, 09 ಅಕ್ಟೋಬರ್ (ಹಿ.ಸ.):

ವೈದ್ಯರ ಚೀಟಿ ಮೂಲಕ ದೊರೆಯುವ ಔಷಧಗಳ ಜಾಹೀರಾತಿಗೆ ಸಂಬಂಧಿಸಿದ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮುಂದಾಗಿದೆ. ಔಷಧ ತಯಾರಿಕಾ ಕಂಪನಿಗಳ ಜತೆಗೆ ಚಿಲ್ಲರೆ ಮಾರಾಟಗಾರರು, ಸಗಟು ಮಾರಾಟಗಾರರು ಮತ್ತು ವಿತರಕರಿಗೂ ಜಾಹೀರಾತು ಸಂಬಂಧಿತ ನಿರ್ಬಂಧಗಳನ್ನು ವಿಸ್ತರಿಸಲು ಪ್ರಸ್ತಾಪಿಸಲಾಗಿದೆ.

ಅನುಮತಿಯಿಲ್ಲದೆ ಔಷಧಗಳ ಪ್ರಚಾರ ಮಾಡುವುದನ್ನು ತಡೆಯುವುದು ಹಾಗೂ ವೈದ್ಯರ ಸಲಹೆಯಿಲ್ಲದೆ ಔಷಧಗಳನ್ನು ಬಳಸುವುದರಿಂದ ಸಾರ್ವಜನಿಕರಿಗೆ ಉಂಟಾಗಬಹುದಾದ ಅಪಾಯಗಳನ್ನು ತಪ್ಪಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂಬಂಧ ಔಷಧ ನಿಯಮಗಳು–1945ಕ್ಕೆ ತಿದ್ದುಪಡಿ ತರುವ ಕರಡನ್ನು ಸಚಿವಾಲಯ ಅಧಿಸೂಚಿಸಿದೆ. 2026ರ ಸೆಪ್ಟೆಂಬರ್ 28ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆ ಸಂಖ್ಯೆ ಜಿಎಸ್‌ಆರ್ 861(ಇ) ಅಡಿಯಲ್ಲಿ ನಿಯಮ 65ಕ್ಕೆ ಹೊಸ ಉಪನಿಯಮ (22) ಸೇರ್ಪಡೆಗೊಳಿಸಲು ಪ್ರಸ್ತಾಪಿಸಲಾಗಿದೆ. ಈ ತಿದ್ದುಪಡಿ ಇನ್ನೂ ಪ್ರಸ್ತಾವನೆಯ ಹಂತದಲ್ಲಿದ್ದು, ಸಾರ್ವಜನಿಕರು ಹಾಗೂ ಸಂಬಂಧಪಟ್ಟ ವಲಯಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ.

ಮಾರಾಟಗಾರರಿಗೂ ಅನ್ವಯವಾಗಲಿವೆ ನಿರ್ಬಂಧಗಳು

ಪ್ರಸ್ತುತ ನಿಯಮಗಳ ಪ್ರಕಾರ, ಔಷಧಗಳ ಪಟ್ಟಿಯ ಎಚ್, ಎಚ್‌1 ಮತ್ತು ಎಕ್ಸ್ ವಿಭಾಗಗಳಲ್ಲಿ ಸೇರ್ಪಡೆಯಾಗಿರುವ ಔಷಧಗಳ ಜಾಹೀರಾತು ಪ್ರಕಟಿಸಲು ಔಷಧ ತಯಾರಕರು ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಆದರೆ, ಈ ಔಷಧಗಳ ಚಿಲ್ಲರೆ ಮತ್ತು ಸಗಟು ಮಾರಾಟ ಹಾಗೂ ವಿತರಣೆಗೆ ಪರವಾನಗಿ ಹೊಂದಿರುವ ವ್ಯಾಪಾರಿಗಳಿಗೆ ಸಂಬಂಧಿಸಿದಂತೆ ಜಾಹೀರಾತು ನಿರ್ಬಂಧಗಳು ಸ್ಪಷ್ಟವಾಗಿ ಅನ್ವಯವಾಗುತ್ತಿರಲಿಲ್ಲ.

ಪ್ರಸ್ತಾವಿತ ತಿದ್ದುಪಡಿ ಜಾರಿಯಾದರೆ, ಈ ವಿಭಾಗಗಳ ಔಷಧಗಳನ್ನು ಮಾರಾಟ ಮಾಡಲು, ದಾಸ್ತಾನು ಇರಿಸಲು, ಪ್ರದರ್ಶಿಸಲು, ಮಾರಾಟಕ್ಕೆ ನೀಡಲು ಅಥವಾ ವಿತರಿಸಲು ಪರವಾನಗಿ ಹೊಂದಿರುವ ಸಂಸ್ಥೆಗಳಿಗೂ ನಿರ್ಬಂಧಗಳು ಅನ್ವಯವಾಗಲಿವೆ. ಕೇಂದ್ರ ಸರ್ಕಾರದ ಪೂರ್ವಾನುಮತಿಯಿಲ್ಲದೆ ಇಂತಹ ಔಷಧಗಳ ಜಾಹೀರಾತು ನೀಡಲು ಈ ವ್ಯಾಪಾರಿಗಳಿಗೆ ಅವಕಾಶವಿರುವುದಿಲ್ಲ.

ಈ ಕ್ರಮದಿಂದ ಔಷಧಗಳ ಪೂರೈಕೆ ಮತ್ತು ವಿತರಣಾ ವ್ಯವಸ್ಥೆಯ ಮೇಲಿನ ನಿಯಂತ್ರಣ ಬಲಗೊಳ್ಳಲಿದೆ. ಅಲ್ಲದೆ, ವೈದ್ಯರ ಸಲಹೆಯಿಲ್ಲದೆ ಔಷಧಗಳನ್ನು ಬಳಸಲು ಜನರನ್ನು ಪ್ರೇರೇಪಿಸಬಹುದಾದ ಪ್ರಚಾರಕ್ಕೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ವೈದ್ಯಕೀಯ ಮೇಲ್ವಿಚಾರಣೆ ಅಗತ್ಯ

ಔಷಧಗಳ ಪಟ್ಟಿಯ ಎಚ್, ಎಚ್‌1 ಮತ್ತು ಎಕ್ಸ್ ವಿಭಾಗಗಳಲ್ಲಿ ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯವಿರುವ ಔಷಧಗಳು ಸೇರಿವೆ. ಇವುಗಳಲ್ಲಿ ಕೆಲವು ಪ್ರತಿಜೀವಕಗಳು, ಮನಸ್ಸಿನ ಮೇಲೆ ಪರಿಣಾಮ ಬೀರುವ ಔಷಧಗಳು ಹಾಗೂ ಇತರ ನಿಯಂತ್ರಿತ ಔಷಧಗಳು ಒಳಗೊಂಡಿವೆ. ಇವುಗಳನ್ನು ಸೂಕ್ತ ವೈದ್ಯಕೀಯ ಸಲಹೆಯಿಲ್ಲದೆ ಬಳಸುವುದು ಆರೋಗ್ಯಕ್ಕೆ ಅಪಾಯ ಉಂಟುಮಾಡಬಹುದು.

ಔಷಧ ತಾಂತ್ರಿಕ ಸಲಹಾ ಮಂಡಳಿಯ 93ನೇ ಸಭೆಯಲ್ಲಿ ಮಾಡಲಾದ ಶಿಫಾರಸುಗಳ ಆಧಾರದ ಮೇಲೆ ಸಚಿವಾಲಯ ಈ ತಿದ್ದುಪಡಿ ಪ್ರಸ್ತಾವನೆಯನ್ನು ರೂಪಿಸಿದೆ. 2026ರ ಫೆಬ್ರವರಿ 16ರಂದು ನಡೆದ ಸಭೆಯಲ್ಲಿ ಔಷಧಗಳ ಮಾರಾಟ ಮತ್ತು ವಿತರಣೆಗೆ ಪರವಾನಗಿ ಹೊಂದಿರುವ ವ್ಯಾಪಾರಿಗಳ ಜಾಹೀರಾತುಗಳನ್ನು ನಿಯಂತ್ರಿಸಲು ಸೂಕ್ತ ನಿಯಮಗಳನ್ನು ರೂಪಿಸುವ ಅಗತ್ಯದ ಕುರಿತು ಚರ್ಚಿಸಲಾಗಿತ್ತು.

ಕರಡು ನಿಯಮಗಳ ಕುರಿತು ಸಾರ್ವಜನಿಕರು ಮತ್ತು ಸಂಬಂಧಪಟ್ಟ ವಲಯಗಳು ತಮ್ಮ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಬಹುದು. ಗೆಜೆಟ್ ಅಧಿಸೂಚನೆಯ ಪ್ರತಿಗಳು ಸಾರ್ವಜನಿಕವಾಗಿ ಲಭ್ಯವಾದ ದಿನದಿಂದ 30 ದಿನಗಳೊಳಗೆ ಅಭಿಪ್ರಾಯಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಸ್ವೀಕರಿಸಲಾದ ಸಲಹೆ ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ತಿದ್ದುಪಡಿಗೆ ಅಂತಿಮ ರೂಪ ನೀಡುವ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande