ಡಿಸೆಂಬರ್ 18ರಿಂದ ಮುಂಬೈನಲ್ಲಿ ವಿಶ್ವ ಹಿಂದೂ ಕಾಂಗ್ರೆಸ್ ಸಮಾವೇಶ
ಉದ್ಘಾಟನಾ ಅಧಿವೇಶನದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ | 60ಕ್ಕೂ ಹೆಚ್ಚು ದೇಶಗಳ 4,000ಕ್ಕೂ ಅಧಿಕ ಪ್ರತಿನಿಧಿಗಳ ನಿರೀಕ್ಷೆ
वर्ल्ड हिंदू कांग्रेस के प्रवर्तक स्वामी विज्ञानानंद (फाइल फोटो)।


ಮುಂಬೈ, 09 ಅಕ್ಟೋಬರ್ (ಹಿ.ಸ.):

ವಿಶ್ವದ ವಿವಿಧ ದೇಶಗಳ ಹಿಂದೂ ನಾಯಕರು, ಚಿಂತಕರು, ಉದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಪಾಲ್ಗೊಳ್ಳುವ ವಿಶ್ವ ಹಿಂದೂ ಕಾಂಗ್ರೆಸ್ ಸಮಾವೇಶವು ಡಿಸೆಂಬರ್ 18ರಿಂದ 20ರವರೆಗೆ ಮುಂಬೈನಲ್ಲಿ ನಡೆಯಲಿದೆ. ಬಾಂದ್ರಾ–ಕುರ್ಲಾ ಸಂಕೀರ್ಣದಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮೂರು ದಿನಗಳ ಸಮಾವೇಶ ಆಯೋಜಿಸಲಾಗಿದ್ದು, ಉದ್ಘಾಟನಾ ಅಧಿವೇಶನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಭಾಷಣ ಮಾಡಲಿದ್ದಾರೆ. 60ಕ್ಕೂ ಹೆಚ್ಚು ದೇಶಗಳಿಂದ 4,000ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಸಮಾವೇಶದಲ್ಲಿ ಹಿಂದೂ ನಾಯಕರು, ಚಿಂತಕರು, ಉದ್ಯಮಿಗಳು, ಶಿಕ್ಷಣ ತಜ್ಞರು, ಮಾಧ್ಯಮ ಪ್ರತಿನಿಧಿಗಳು, ವಿವಿಧ ವೃತ್ತಿಪರರು ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ಒಂದೇ ವೇದಿಕೆಯಲ್ಲಿ ಸೇರಲಿದ್ದಾರೆ. ಮೂರು ದಿನಗಳಲ್ಲಿ 45ಕ್ಕೂ ಹೆಚ್ಚು ಅಧಿವೇಶನಗಳು ನಡೆಯಲಿದ್ದು, 150ಕ್ಕೂ ಅಧಿಕ ಭಾಷಣಕಾರರು ಆರ್ಥಿಕತೆ, ಶಿಕ್ಷಣ, ಮಾಧ್ಯಮ, ರಾಜಕೀಯ, ಮಹಿಳಾ ಸಬಲೀಕರಣ, ಯುವಜನತೆ ಮತ್ತು ಹಿಂದೂ ಸಂಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ವಿಚಾರ ಮಂಡಿಸಲಿದ್ದಾರೆ.

ಸಾಮೂಹಿಕ ಸಂಕಲ್ಪವೇ ಸಮಾವೇಶದ ಧ್ಯೇಯ

ವಿಶ್ವ ಹಿಂದೂ ಕಾಂಗ್ರೆಸ್‌ 2026ರ ಧ್ಯೇಯವಾಕ್ಯವಾಗಿ ‘ಸಮಾನಂ ವ್ರತಂ ಸಹ ಚಿತ್ತಮ್‌–ಹಂಚಿಕೊಂಡ ಬದ್ಧತೆ, ಸಾಮೂಹಿಕ ಸಂಕಲ್ಪ’ ಎಂಬುದನ್ನು ಆಯ್ಕೆ ಮಾಡಲಾಗಿದೆ. ಜಾಗತಿಕ ಮಟ್ಟದಲ್ಲಿ ಹಿಂದೂ ಸಮುದಾಯದ ವಿವಿಧ ಸಂಘಟನೆಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳ ನಡುವೆ ಸಂವಾದ, ಸಹಕಾರ ಹಾಗೂ ಸಮನ್ವಯವನ್ನು ಬಲಪಡಿಸುವುದು ಸಮಾವೇಶದ ಉದ್ದೇಶವಾಗಿದೆ.

ವಿಶ್ವ ಹಿಂದೂ ಕಾಂಗ್ರೆಸ್‌ನ ಪ್ರವರ್ತಕ ಸ್ವಾಮಿ ವಿಜ್ಞಾನಾನಂದ ಮಾತನಾಡಿ, ವಿಶ್ವದಾದ್ಯಂತ ಹಿಂದೂ ಸಮಾಜದ ಗೋಚರತೆ ಮತ್ತು ಪ್ರತಿಷ್ಠೆ ಹೆಚ್ಚಿದ್ದರೂ ಈ ಹಂತದಲ್ಲೇ ನಿಲ್ಲುವಂತಿಲ್ಲ ಎಂದು ಹೇಳಿದ್ದಾರೆ. ಆರ್ಥಿಕತೆ, ಶಿಕ್ಷಣ, ಶೈಕ್ಷಣಿಕ ವಲಯ, ಮಾಧ್ಯಮ ಮತ್ತು ರಾಜಕೀಯದಂತಹ ಪ್ರಭಾವಶಾಲಿ ಕ್ಷೇತ್ರಗಳಲ್ಲಿ ಹಿಂದೂಗಳ ಪಾಲ್ಗೊಳ್ಳುವಿಕೆಯನ್ನು ಬಲಪಡಿಸಲು ವಿಶ್ವ ಹಿಂದೂ ಕಾಂಗ್ರೆಸ್ ಕಾರ್ಯತಂತ್ರದ ಹಾಗೂ ಸಂಘಟಿತ ವೇದಿಕೆಯನ್ನು ಒದಗಿಸುತ್ತದೆ. ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳನ್ನು ಸಾಮೂಹಿಕ ಸಂಕಲ್ಪದೊಂದಿಗೆ ಒಗ್ಗೂಡಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ನಾಲ್ಕು ವಿಶೇಷ ಅಧಿವೇಶನಗಳು

ಈ ಬಾರಿಯ ಸಮಾವೇಶದಲ್ಲಿ ಭಾಷೆ, ಸಮಾಜ, ವಿಶ್ವಕರ್ಮ ಮತ್ತು ಧರ್ಮ ವಿಷಯಗಳ ಕುರಿತು ನಾಲ್ಕು ವಿಶೇಷ ಪೂರ್ಣಾಧಿವೇಶನಗಳನ್ನು ಆಯೋಜಿಸಲಾಗುತ್ತದೆ.

ಧರ್ಮಕ್ಕೆ ಮೀಸಲಾದ ಅಧಿವೇಶನದಲ್ಲಿ ಹಿಂದೂ, ಬೌದ್ಧ, ತಾವೋ ಮತ್ತು ಶಿಂಟೋ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ತಾತ್ವಿಕ ಪರಂಪರೆಗಳ ಆಧ್ಯಾತ್ಮಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಧರ್ಮದ ವಿವಿಧ ಪರಂಪರೆಗಳು, ಸಮಕಾಲೀನ ಸಮಾಜದಲ್ಲಿ ಅವುಗಳ ಪ್ರಸ್ತುತತೆ ಮತ್ತು ವಿಭಿನ್ನ ದೃಷ್ಟಿಕೋನಗಳ ನಡುವಿನ ಸಂವಾದದ ಕುರಿತು ಚರ್ಚೆ ನಡೆಯಲಿದೆ.

ಸಮಾಜಕ್ಕೆ ಸಂಬಂಧಿಸಿದ ಅಧಿವೇಶನದಲ್ಲಿ ಸಾಮಾಜಿಕ ಸಾಮರಸ್ಯ, ಸಮುದಾಯದ ಅಭಿವೃದ್ಧಿ ಮತ್ತು ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ. ವಿವಿಧ ಸಮುದಾಯಗಳು, ಪರಂಪರೆಗಳು ಮತ್ತು ಸಾಮಾಜಿಕ ಸಂಸ್ಥೆಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾಷಾ ಅಧಿವೇಶನದಲ್ಲಿ ಹಿಂದೂ ಸಮಾಜದ ಭಾಷಾ ವೈವಿಧ್ಯ, ಸಾಹಿತ್ಯ, ನಾಗರಿಕತೆಯ ಜ್ಞಾನ ಮತ್ತು ಸಾಂಸ್ಕೃತಿಕ ಗುರುತನ್ನು ಸಂರಕ್ಷಿಸುವಲ್ಲಿ ವಿವಿಧ ಭಾಷೆಗಳ ಪಾತ್ರವನ್ನು ಚರ್ಚಿಸಲಾಗುತ್ತದೆ.

ವಿಶ್ವಕರ್ಮ ಅಧಿವೇಶನದಲ್ಲಿ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ, ನಾವೀನ್ಯತೆ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಕುಶಲಕರ್ಮಿಗಳು, ಶಿಲ್ಪಿಗಳು ಮತ್ತು ವೃತ್ತಿಪರರ ಕೊಡುಗೆಯ ಕುರಿತು ಚರ್ಚೆ ನಡೆಯಲಿದೆ. ಕುಶಲ ಕೆಲಸದ ಗೌರವ ಹೆಚ್ಚಿಸುವುದು ಮತ್ತು ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಮಾರ್ಗಗಳ ಬಗ್ಗೆಯೂ ಸಮಾಲೋಚನೆ ನಡೆಯಲಿದೆ.

ಮೊದಲ ಬಾರಿಗೆ ವಿಶ್ವ ಹಿಂದೂ ಪ್ರದರ್ಶನ

ಈ ಬಾರಿಯ ವಿಶ್ವ ಹಿಂದೂ ಕಾಂಗ್ರೆಸ್‌ನೊಂದಿಗೆ ಮೊದಲ ಬಾರಿಗೆ ವಿಶ್ವ ಹಿಂದೂ ಪ್ರದರ್ಶನವನ್ನೂ ಆಯೋಜಿಸಲಾಗುತ್ತಿದೆ. ವ್ಯಾಪಾರ ಮತ್ತು ವಾಣಿಜ್ಯಕ್ಕೆ ಉತ್ತೇಜನ ನೀಡುವುದರ ಜತೆಗೆ ಹಿಂದೂ ಸಮಾಜದಲ್ಲಿ ಸಮೃದ್ಧಿ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು ಪ್ರದರ್ಶನದ ಉದ್ದೇಶವಾಗಿದೆ ಎಂದು ಸ್ವಾಮಿ ವಿಜ್ಞಾನಾನಂದ ತಿಳಿಸಿದ್ದಾರೆ.

ಹಲವು ಗಣ್ಯರ ಭಾಗವಹಿಸುವಿಕೆ

ಸರ್ಕಾರ, ಉದ್ಯಮ, ತಂತ್ರಜ್ಞಾನ, ಮಾಧ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಹಲವು ಪ್ರಮುಖರು ಸಮಾವೇಶದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಪಾಲ್ಗೊಳ್ಳಲಿರುವ ಪ್ರಮುಖರಲ್ಲಿ ಸೇರಿದ್ದಾರೆ.

ಲೇಖಕ ಹಾಗೂ ನಿರ್ದೇಶಕ ವಿಶಾಲ್ ಚತುರ್ವೇದಿ, ಗೀತರಚನೆಕಾರ ಮತ್ತು ಚಿತ್ರಕಥೆಗಾರ ಮನೋಜ್ ಮುಂತಶಿರ್, ರಾಷ್ಟ್ರೀಯ ಷೇರುಪೇಟೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶೀಶ್ ಕುಮಾರ್ ಚೌಹಾಣ್, ಬೃಹನ್‌ಮುಂಬೈ ಮಹಾನಗರ ಪಾಲಿಕೆಯ ಆಯುಕ್ತೆ ಹಾಗೂ ಮುಂಬೈ ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಅಶ್ವಿನಿ ಭಿಡೆ, ಕೇಂದ್ರ ವಿದ್ಯುತ್ ಪ್ರಾಧಿಕಾರದ ಅಧ್ಯಕ್ಷ ಘನಶ್ಯಾಮ್ ಪ್ರಸಾದ್ ಮತ್ತು ನೀತಿ ಆಯೋಗದ ಸದಸ್ಯ ಪ್ರೊ. ಅಭಯ್ ಕರಂದೀಕರ್ ಭಾಗವಹಿಸಲಿರುವ ಗಣ್ಯರಲ್ಲಿ ಸೇರಿದ್ದಾರೆ.

ಉದ್ಯಮ ಮತ್ತು ಆರ್ಥಿಕ ಕ್ಷೇತ್ರದಿಂದ ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್, ಎಲ್‌ ಆ್ಯಂಡ್‌ ಟಿ ಪ್ರಿಸಿಷನ್ ಎಂಜಿನಿಯರಿಂಗ್ ಆ್ಯಂಡ್ ಸಿಸ್ಟಮ್ಸ್‌ನ ಸಂಜಯ್ ಚಕ್ರವರ್ತಿ, ಅಗ್ನಿಕುಲ್ ಕಾಸ್ಮೋಸ್‌ನ ಸಹಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ ರವಿಚಂದ್ರನ್, ರಿನ್ಯೂ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಂತ್ ಸಿನ್ಹಾ, ಸರ್ವಂ ಎಐನ ಸಹಸಂಸ್ಥಾಪಕ ಡಾ. ವಿವೇಕ್ ರಾಘವನ್, ಆರ್‌ಪಿ–ಸಂಜೀವ್ ಗೋಯೆಂಕಾ ಸಮೂಹದ ಉಪಾಧ್ಯಕ್ಷ ಶಾಶ್ವತ್ ಗೋಯೆಂಕಾ, ಯುಲು ಬೈಕ್‌ನ ಸಹಸಂಸ್ಥಾಪಕ ಆರ್.ಕೆ. ಮಿಶ್ರಾ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಕುಮಾರ್ ಶ್ರೀವಾಸ್ತವ ಕೂಡ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಮುಂದಿನ ದಿನಗಳಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಇತರ ಪ್ರಮುಖರ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ನಾಲ್ಕು ವರ್ಷಕ್ಕೊಮ್ಮೆ ಸಮಾವೇಶ

ವಿಶ್ವ ಹಿಂದೂ ಕಾಂಗ್ರೆಸ್ ಸಮಾವೇಶವನ್ನು ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಇದಕ್ಕೂ ಮೊದಲು 2014ರಲ್ಲಿ ನವದೆಹಲಿ, 2018ರಲ್ಲಿ ಚಿಕಾಗೊ ಮತ್ತು 2023ರಲ್ಲಿ ಬ್ಯಾಂಕಾಕ್‌ನಲ್ಲಿ ಸಮಾವೇಶಗಳು ನಡೆದಿದ್ದವು. ಜಗತ್ತಿನ ವಿವಿಧ ದೇಶಗಳಲ್ಲಿರುವ ಹಿಂದೂ ನಾಯಕರು, ಚಿಂತಕರು, ಕಾರ್ಯಕರ್ತರು ಮತ್ತು ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಸಾಮಾನ್ಯ ವಿಚಾರಗಳ ಕುರಿತು ಚರ್ಚೆ ಹಾಗೂ ಸಹಕಾರಕ್ಕೆ ಅವಕಾಶ ಕಲ್ಪಿಸುವುದು ಈ ವೇದಿಕೆಯ ಉದ್ದೇಶವಾಗಿದೆ.

ಮುಂಬೈನಲ್ಲಿ ನಡೆಯಲಿರುವ ಸಮಾವೇಶದ ಸಂಘಟನಾ ಸಮಿತಿಯ ಅಧ್ಯಕ್ಷರಾಗಿ ಅಜಯ್ ಪಿರಾಮಲ್ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶದ್ ಮಫತ್ಲಾಲ್ ಮತ್ತು ಮಹೇಶ್ ಭಾಗಚಂದ್ಕಾ ಉಪಾಧ್ಯಕ್ಷರಾಗಿದ್ದಾರೆ. ಜಾಗತಿಕ ಹಿಂದೂ ಸಮುದಾಯದ ನಡುವೆ ಸಂವಾದ ಮತ್ತು ಸಹಕಾರವನ್ನು ಬಲಪಡಿಸುವುದರ ಜತೆಗೆ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಭವಿಷ್ಯದ ದಿಕ್ಕು ನಿರ್ಧರಿಸುವಲ್ಲಿ ಈ ಸಮಾವೇಶ ಮಹತ್ವದ ಪಾತ್ರ ವಹಿಸಲಿದೆ ಎಂಬ ನಿರೀಕ್ಷೆಯನ್ನು ಆಯೋಜಕರು ವ್ಯಕ್ತಪಡಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande