ಗಾರ್ಮೇಂಟ್ಸ್ ಕಾರ್ಮಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮ
ಗಾರ್ಮೇಂಟ್ಸ್ ಕಾರ್ಮಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮ
ಬಂಗಾರಪೇಟೆ ತಾಲ್ಲೂಕಿನ ಸೋರೇಗೌಡನಕೋಟೆ ಅರಿಹಂತ್ ಗಾರ್ಮೇಂಟ್ಸ್ನಲ್ಲಿ ಕಾರ್ಮಿಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.


ಕೋಲಾರ, ೦೯ ಅಕ್ಟೋಬರ್ (ಹಿ.ಸ) : ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತವೂ ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿಯುತ ಅಸ್ತ್ರವಾಗಿದೆ. ಪ್ರಜಾಪ್ರಭುತ್ವದ ಮೂಲತತ್ವವೇ ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಸಲ್ಪಡುವ ಆಡಳಿತ. ಈ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು, ಮತ್ತು ಆ ಪ್ರಭುತ್ವವನ್ನು ವ್ಯಕ್ತಪಡಿಸಲು ನಮಗೆ ಲಭ್ಯವಿರುವ ಅತ್ಯಂತ ಪ್ರಬಲವಾದ ಹಕ್ಕು ಎಂದರೆ ಮತದಾನದ ಹಕ್ಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಅಭಿಪ್ರಾಯಪಟ್ಟರು.

ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮ ಪಂಚಾಯಿತಿಯ ಸೋರೇಗೌಡನಕೋಟೆ ಗ್ರಾಮದಲ್ಲಿ ಸ್ವೀಪ್ ಸಮಿತಿ ನೇತೃತ್ವದಲ್ಲಿ ಅರಿಹಂತ್ ಗಾರ್ಮೆಂಟ್ಸ್ನ ನೌಕರಿಕರಿಗೆ ಮತದಾನ ಕುರಿತು ಅರಿವು ಮೂಡಿಸಿ ಮಾತನಾಡಿದರು. ಭಾರತೀಯ ಸಂವಿಧಾನವು ೧೮ ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕನಿಗೂ ಯಾವುದೇ ಜಾತಿ, ಮತ, ಲಿಂಗ ಆರ್ಥಿಕ ತಾರತಮ್ಯವಿಲ್ಲದೆ ಸಮಾನ ಮತದಾನದ ಹಕ್ಕನ್ನು ನೀಡಿದೆ.ಮತದಾರರ ಪಟ್ಟಿಯಲ್ಲಿ ೧೮ ವರ್ಷ ತುಂಬಿದ ಹೊಸ ಮತದಾರರ ನೋಂದಣಿ, ತಿದ್ದುಪಡಿ, ಅಧಾರ್ ನಂಬರ್ ಜೋಡಣೆ ಅಗತ್ಯ ಎಂದರು.

ಮತದಾನವು ಕೇವಲ ಒಂದು ಹಕ್ಕು ಮಾತ್ರವಲ್ಲ. ಅದೊಂದು ಪರಮೋಚ್ಚ ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿಯಾಗಿದೆ. ನಮಗೆ ಸೂಕ್ತವಾದ, ದಕ್ಷ ಹಾಗೂ ಜನಪರ ಆಡಳಿತ ನೀಡಬಲ್ಲ ನಾಯಕರನ್ನು ಆಯ್ಕೆ ಮಾಡುವ ಅಧಿಕಾರ ನಮ್ಮ ಬೆರಳ ತುದಿಯಲ್ಲಿದೆ. ನಾವು ಚಲಾಯಿಸುವ ಒಂದು ಮತವು ದೇಶದ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಆರ್ಥಿಕತೆ ಮತ್ತು ಭದ್ರತೆಯ ಮೇಲೆಯೂ ಪ್ರಭಾವ ಬೀರುತ್ತದೆ. ನಾವು ಮತದಾನದಿಂದ ದೂರ ಉಳಿದರೆ, ಅಯೋಗ್ಯ ನಾಯಕರು ಆಡಳಿತಕ್ಕೆ ಬರುವ ಅಪಾಯವಿರುತ್ತದೆ. 'ಮತದಾನ ಮಾಡದಿರುವುದು ಅಸಮರ್ಥ ಸರ್ಕಾರಕ್ಕೆ ನಾವು ನೀಡುವ ಸಮ್ಮತಿ' ಇದ್ದಂತೆ.

ಮತದಾನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರ ಭಾಗವಹಿಸುವಿಕೆಯು ಪ್ರಜಾಪ್ರಭುತ್ವದ ಅಡಿಪಾಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಧನಬಲ, ತೋಳ್ಬಲ ಮತ್ತು ಆಮಿಷಗಳಿಗೆ ಬಲಿಯಾಗದೆ, ಯೋಚಿಸಿ, ಪ್ರಬುದ್ಧತೆಯಿಂದ ಮತ ಚಲಾಯಿಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಕರ್ತವ್ಯ.ಎಂದರು.

ಕಾರ್ಯಕ್ರಮದಲ್ಲಿ ಪಂಚಾಯಿತಿ ಸಿಬ್ಬಂದಿ, ಗಾರ್ಮೆಂಟ್ಸ್ನ ಸಿಬ್ಬಂದಿ, ಯುವಕ-ಯುವತಿಯರು, ಹಿರಿಯರು, ಗ್ರಾಮಸ್ಥರು, ಎನ್.ಆರ್.ಎಲ್.ಎಂ ಹಾಗೂ ವಿಬಿಜಿರಾಮ್ ಜಿ ಸಿಬ್ಬಂದಿ ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande