
25 ವರ್ಷಗಳ ಸಾರ್ವಜನಿಕ ಜೀವನವನ್ನು ಪೂರ್ಣಗೊಳಿಸಿದ ಪ್ರಧಾನ ಮಂತ್ರಿಯ ಗೌರವಾರ್ಥ ಯೋಗಿ ಸಚಿವ ಸಂಪುಟದ ಪ್ರಮುಖ ನಿರ್ಧಾರ
ಲಕ್ನೋ, 09 ಅಕ್ಟೋಬರ್ (ಹಿ.ಸ.):
ಉತ್ತರ ಪ್ರದೇಶದ ಜೆವರ್‌ನಲ್ಲಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ನು ಮುಂದೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಹೆಸರಿಡಲು ಉತ್ತರ ಪ್ರದೇಶ ಸಚಿವ ಸಂಪುಟ ನಿರ್ಧರಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಮಾನ ನಿಲ್ದಾಣದ ಮರುನಾಮಕರಣದ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಪ್ರಧಾನಿಯವರ ಬಗ್ಗೆ ರಾಜ್ಯ ಸರ್ಕಾರ ಹೊಂದಿರುವ ಕೃತಜ್ಞತೆ ಹಾಗೂ ಉತ್ತರ ಪ್ರದೇಶದ ಅಭಿವೃದ್ಧಿಗೆ ಅವರು ನೀಡಿದ ಮಾರ್ಗದರ್ಶನ ಮತ್ತು ಕೊಡುಗೆಗೆ ಸಲ್ಲಿಸುವ ಗೌರವದ ಸಂಕೇತವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನದ 25 ವರ್ಷಗಳ ಸಾಧನೆಯನ್ನು ಅಭಿನಂದಿಸುವ ನಿರ್ಣಯವನ್ನೂ ಸಚಿವ ಸಂಪುಟ ಅಂಗೀಕರಿಸಿದೆ ಎಂದು ಹೇಳಿದರು.
ಅಕ್ಟೋಬರ್ 7ರಂದು ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ಸರ್ಕಾರದ ಮುಖ್ಯಸ್ಥರಾಗಿ ನಿರಂತರ 25 ವರ್ಷಗಳ ಸಮರ್ಪಿತ ಸಾರ್ವಜನಿಕ ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಹೆಮ್ಮೆಯ ಅಧ್ಯಾಯವಾಗಿದೆ. ಅವರ 25 ವರ್ಷಗಳ ಪಯಣವು ‘ಸೇವೆ, ಸಮರ್ಪಣೆ ಮತ್ತು ರಾಷ್ಟ್ರವೇ ಮೊದಲು’ ಎಂಬ ಆಶಯದ ಮೇಲೆ ಸಾಗಿದ್ದು, ಇದು ಕೇವಲ ಅಧಿಕಾರ ಅಥವಾ ಆಡಳಿತದ ಪಯಣವಲ್ಲ; ಜನಸೇವೆಯಿಂದ ಜನಕಲ್ಯಾಣದತ್ತ ಮತ್ತು ಜನಭಾಗವಹಿಸುವಿಕೆಯಿಂದ ಜನವಿಶ್ವಾಸದತ್ತ ಸಾಗಿದ ಪಯಣವಾಗಿದೆ ಎಂದು ಅವರು ವಿವರಿಸಿದರು.
ಉತ್ತರ ಪ್ರದೇಶಕ್ಕೆ ಮಹತ್ವದ ಕೊಡುಗೆ ಜೆವರ್ ವಿಮಾನ ನಿಲ್ದಾಣ
ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶಕ್ಕೆ ನೀಡಿದ ಮಹತ್ವದ ಕೊಡುಗೆಯಾಗಿದೆ. ಮುಂಬರುವ ದಿನಗಳಲ್ಲಿ ಈ ವಿಮಾನ ನಿಲ್ದಾಣವು ರಾಜ್ಯದ ಆರ್ಥಿಕತೆ, ಕೈಗಾರಿಕೆ, ಪ್ರವಾಸೋದ್ಯಮ ಮತ್ತು ಜಾಗತಿಕ ಸಂಪರ್ಕಕ್ಕೆ ಹೊಸ ಆಯಾಮ ನೀಡಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಹೆಸರಿಡುವ ಪ್ರಸ್ತಾವವನ್ನು ಸಚಿವ ಸಂಪುಟ ಅಂಗೀಕರಿಸಿದೆ. ಪ್ರಧಾನಿಯವರ 25 ವರ್ಷಗಳ ಸಾರ್ವಜನಿಕ ಜೀವನ, ನಿರಂತರ ಮಾರ್ಗದರ್ಶನ, ಉತ್ತರ ಪ್ರದೇಶದ ಅಭಿವೃದ್ಧಿಯ ಬಗೆಗಿನ ಬದ್ಧತೆ ಹಾಗೂ ದೇಶಕ್ಕೆ ಹೊಸ ದಿಕ್ಕು ನೀಡಿದ ನಾಯಕತ್ವಕ್ಕೆ ಸಚಿವ ಸಂಪುಟ ಕೃತಜ್ಞತೆ ಸಲ್ಲಿಸಿದೆ ಎಂದು ಅವರು ತಿಳಿಸಿದರು.
‘ವಿಕಸಿತ ಉತ್ತರ ಪ್ರದೇಶ, ವಿಕಸಿತ ಭಾರತ-2047’ ಸಂಕಲ್ಪವನ್ನು ಸಾಕಾರಗೊಳಿಸಲು ಪ್ರಧಾನಿ ಮೋದಿ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಶಕ್ತಿ, ನಿಷ್ಠೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕಾಶಿಯಿಂದ ಜೆವರ್‌ವರೆಗೆ ಪ್ರಧಾನಿಗೆ ಉತ್ತರ ಪ್ರದೇಶದ ನಂಟು
ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿಯಿಂದ ಆಯ್ಕೆಯಾದ ಜನಪ್ರತಿನಿಧಿಯಾಗಿದ್ದು, ಉತ್ತರ ಪ್ರದೇಶದ ನೆಲದಿಂದ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು. ಕಾಶಿ ಮತ್ತು ಪ್ರಧಾನಿಯವರ ನಡುವಿನ ಸಂಬಂಧವು ರಾಜಕೀಯ ಪ್ರಾತಿನಿಧ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾಶಿಯ ಅಭಿವೃದ್ಧಿ, ಆಧ್ಯಾತ್ಮಿಕ ಪುನರುಜ್ಜೀವನ ಮತ್ತು ಉತ್ತರ ಪ್ರದೇಶದ ಸಮಗ್ರ ಅಭಿವೃದ್ಧಿಯ ನಡುವೆ ಹೊಸ ಸಂಬಂಧ ರೂಪುಗೊಂಡಿದೆ ಎಂದು ಅವರು ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಸುಮಾರು 2,483 ಕಿಲೋಮೀಟರ್ ಉದ್ದದ 42 ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಸುಮಾರು 60 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಸರಕು ಸಾಗಣೆ ಮಾರ್ಗದಿಂದ ರಕ್ಷಣಾ ಕೈಗಾರಿಕಾ ಕಾರಿಡಾರ್‌ವರೆಗೆ
ಉತ್ತರ ಪ್ರದೇಶವು ದೇಶದ ಪ್ರಮುಖ ಸರಕು ಸಾಗಣೆ ಮತ್ತು ಕೈಗಾರಿಕಾ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು. ದಾದ್ರಿ ನಗರವು ಪೂರ್ವ ಮತ್ತು ಪಶ್ಚಿಮ ಸಮರ್ಪಿತ ಸರಕು ಸಾಗಣೆ ಮಾರ್ಗಗಳ ಪ್ರಮುಖ ಸಂಪರ್ಕ ಕೇಂದ್ರವಾಗಿ ಹೊರಹೊಮ್ಮಿದೆ. 1,050 ಕಿಲೋಮೀಟರ್‌ಗಿಂತಲೂ ಹೆಚ್ಚು ಉದ್ದದ ಸಮರ್ಪಿತ ಸರಕು ಸಾಗಣೆ ಮಾರ್ಗ ರಾಜ್ಯದ ಮೂಲಕ ಹಾದುಹೋಗುತ್ತದೆ.
ವಾರಾಣಸಿಯಲ್ಲಿ ರಾಷ್ಟ್ರೀಯ ಜಲಮಾರ್ಗ-1ರ ಮೇಲೆ ದೇಶದ ಮೊದಲ ಬಹುಮಾದರಿ ಒಳನಾಡು ಬಂದರು ಟರ್ಮಿನಲ್ ಹಾಗೂ 100 ಎಕರೆ ವಿಸ್ತೀರ್ಣದ ದೇಶದ ಮೊದಲ ಸರಕು ಸಾಗಣೆ ಗ್ರಾಮವನ್ನು ಅಭಿವೃದ್ಧಿಪಡಿಸಲಾಗಿದೆ. ಲಖನೌದಲ್ಲಿನ ಬ್ರಹ್ಮೋಸ್ ಕ್ಷಿಪಣಿ ಜೋಡಣೆ ಘಟಕ, ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ ಮತ್ತು 1,000 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗುತ್ತಿರುವ ಪ್ರಧಾನಮಂತ್ರಿ ಮಿತ್ರ ಜವಳಿ ಉದ್ಯಾನವು ಕೈಗಾರಿಕಾ ಅಭಿವೃದ್ಧಿಗೆ ಹೊಸ ದಿಕ್ಕು ನೀಡುತ್ತಿವೆ ಎಂದು ಅವರು ವಿವರಿಸಿದರು.
ರೈತರು ಮತ್ತು ಬಡವರ ಕಲ್ಯಾಣಕ್ಕೆ ಆದ್ಯತೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಉತ್ತರ ಪ್ರದೇಶದ ಮೂರು ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ಒಂದು ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ನೇರವಾಗಿ ವರ್ಗಾಯಿಸಲಾಗಿದೆ. ಸುಮಾರು 86 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದ 65 ಲಕ್ಷಕ್ಕೂ ಅಧಿಕ ಬಡ ಕುಟುಂಬಗಳಿಗೆ ಮನೆಗಳನ್ನು ಒದಗಿಸಲಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ 3.67 ಕೋಟಿ ಪಡಿತರ ಚೀಟಿದಾರ ಕುಟುಂಬಗಳ ಸುಮಾರು 15 ಕೋಟಿ ಜನರಿಗೆ ಉಚಿತ ಆಹಾರಧಾನ್ಯ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ರಾಜ್ಯದಲ್ಲಿ ಸುಮಾರು 6.08 ಕೋಟಿ ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. 9.90 ಕೋಟಿಗೂ ಅಧಿಕ ಜನರಿಗೆ ಆರೋಗ್ಯ ರಕ್ಷಣೆಯ ಸೌಲಭ್ಯ ದೊರೆತಿದೆ. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 1.09 ಕೋಟಿಗೂ ಅಧಿಕ ರೋಗಿಗಳಿಗೆ 18,798 ಕೋಟಿ ರೂ. ಮೌಲ್ಯದ ಉಚಿತ ಚಿಕಿತ್ಸೆಯ ಪ್ರಯೋಜನ ಲಭಿಸಿದೆ ಎಂದು ಅವರು ಮಾಹಿತಿ ನೀಡಿದರು.
ಸ್ವಚ್ಛ ಭಾರತ ಅಭಿಯಾನದಡಿ ರಾಜ್ಯದಲ್ಲಿ 3.37 ಕೋಟಿಗೂ ಅಧಿಕ ಶೌಚಾಲಯಗಳು ಹಾಗೂ 59,183 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 1.86 ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ. ರಾಜ್ಯ ಸರ್ಕಾರವು ಹೋಳಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮಹಿಳಾ ಸಬಲೀಕರಣ ಮತ್ತು ಗ್ರಾಮೀಣ ಆರ್ಥಿಕತೆಗೆ ಬಲ
ಲಖಪತಿ ದೀದಿ ಅಭಿಯಾನದಡಿ 10 ಲಕ್ಷ ಸ್ವಸಹಾಯ ಗುಂಪುಗಳಿಗೆ ಒಂದು ಕೋಟಿಗೂ ಅಧಿಕ ಮಹಿಳೆಯರು ಸಂಪರ್ಕ ಹೊಂದಿದ್ದಾರೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ 15 ಲಕ್ಷಕ್ಕೂ ಅಧಿಕ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
ಸ್ವಾಮಿತ್ವ ಯೋಜನೆಯಡಿ 91 ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ ಕಾರ್ಯ ಕೈಗೊಳ್ಳಲಾಗಿದ್ದು, 1.10 ಕೋಟಿಗೂ ಅಧಿಕ ಗ್ರಾಮೀಣ ಕುಟುಂಬಗಳಿಗೆ ಮನೆಗಳ ಮೇಲಿನ ಹಕ್ಕನ್ನು ದೃಢಪಡಿಸುವ ಆಸ್ತಿ ದಾಖಲೆಗಳನ್ನು ಒದಗಿಸಲಾಗಿದೆ. ಇದರಿಂದ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಭಾಗವಹಿಸುವಿಕೆ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವುದು, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವುದು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಮಾಜದ ಕಟ್ಟಕಡೆಯ ಜನರ ಕಲ್ಯಾಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.
ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ
‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಯು ಉತ್ತರ ಪ್ರದೇಶದ ಸ್ಥಳೀಯ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
ಪ್ರಧಾನಿ ಮೋದಿ ಅವರು ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಕಾಶಿಯ ಗುಲಾಬಿ ಮೀನಾಕಾರಿ ಕಲೆ, ನಿಜಾಮಾಬಾದ್‌ನ ಕಪ್ಪು ಮಣ್ಣಿನ ಕುಂಬಾರಿಕೆ, ಕನೌಜ್‌ನ ಸುಗಂಧ ದ್ರವ್ಯಗಳು ಮತ್ತು ಲಖನೌದ ಜರ್ದೋಜಿ ಕಸೂತಿ ಕಲೆಯಂತಹ ಉತ್ತರ ಪ್ರದೇಶದ ಉತ್ಪನ್ನಗಳನ್ನು ಜಾಗತಿಕ ವೇದಿಕೆಯಲ್ಲಿ ಪರಿಚಯಿಸಿದ್ದಾರೆ ಎಂದು ಅವರು ತಿಳಿಸಿದರು.
ಯುವಕರಿಗೆ ಉದ್ಯೋಗ, ತರಬೇತಿ ಮತ್ತು ಡಿಜಿಟಲ್ ಸೌಲಭ್ಯ
ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ಯೋಜನೆಯಡಿ 62 ಲಕ್ಷಕ್ಕೂ ಅಧಿಕ ಯುವಕರಿಗೆ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ವಿತರಿಸಲಾಗಿದೆ. ರಾಜ್ಯದಲ್ಲಿ 9.50 ಲಕ್ಷಕ್ಕೂ ಅಧಿಕ ಸರ್ಕಾರಿ ನೇಮಕಾತಿಗಳನ್ನು ಮಾಡಲಾಗಿದ್ದು, ಖಾಸಗಿ ವಲಯದಲ್ಲಿ 65 ಲಕ್ಷ ಯುವಕರಿಗೆ ಉದ್ಯೋಗ ದೊರೆತಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಉದ್ಯೋಗ ಮೇಳಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು ಮತ್ತು ಕೌಶಲ ಅಭಿವೃದ್ಧಿ ಅಭಿಯಾನದ ಮೂಲಕ 31.11 ಲಕ್ಷಕ್ಕೂ ಅಧಿಕ ಯುವಕರಿಗೆ ತರಬೇತಿ ನೀಡಲಾಗಿದೆ. ಮೀರತ್‌ನ ಮೇಜರ್ ಧ್ಯಾನ್‌ಚಂದ್ ಕ್ರೀಡಾ ವಿಶ್ವವಿದ್ಯಾಲಯ, ಕಾಶಿಯ ಆಧುನಿಕ ಕ್ರೀಡಾ ಸಂಕೀರ್ಣ ಮತ್ತು ಶ್ರೇಷ್ಠತಾ ಕೇಂದ್ರದಂತಹ ಯೋಜನೆಗಳು ಕ್ರೀಡೆ ಹಾಗೂ ಯುವ ಪ್ರತಿಭೆಗಳ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಒದಗಿಸಿವೆ ಎಂದು ಅವರು ಹೇಳಿದರು.
ರಾಮಮಂದಿರದಿಂದ ಮಹಾಕುಂಭದವರೆಗೆ ಸಾಂಸ್ಕೃತಿಕ ಪುನರುಜ್ಜೀವನ
ಪ್ರಧಾನಿ ಮೋದಿ ಅವರ ಕೊಡುಗೆ ಆರ್ಥಿಕತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿಲ್ಲ. ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪುನರುಜ್ಜೀವನಕ್ಕೂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ರಾಮಲಲ್ಲಾ ಪ್ರಾಣಪ್ರತಿಷ್ಠೆಯ ಮೂಲಕ 500 ವರ್ಷಗಳ ಕಾಯುವಿಕೆ ಅಂತ್ಯಗೊಂಡಿದೆ. ಕಾಶಿ ವಿಶ್ವನಾಥ ಧಾಮವನ್ನು ಪುನರಾಭಿವೃದ್ಧಿಗೊಳಿಸಲಾಗಿದ್ದು, ಗಂಗಾ ಘಾಟ್‌ನಿಂದ ಬಾಬಾ ವಿಶ್ವನಾಥ ಧಾಮದವರೆಗೆ ಭವ್ಯ ಮಾರ್ಗವನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.
ಸುಮಾರು 100 ವರ್ಷಗಳ ಹಿಂದೆ ವಿದೇಶಕ್ಕೆ ಕೊಂಡೊಯ್ಯಲಾಗಿದ್ದ ಅನ್ನಪೂರ್ಣ ದೇವಿಯ ಪ್ರತಿಮೆಯನ್ನು ಭಾರತಕ್ಕೆ ಮರಳಿ ತಂದು ಕಾಶಿ ವಿಶ್ವನಾಥ ಧಾಮದಲ್ಲಿ ಪುನಃ ಪ್ರತಿಷ್ಠಾಪಿಸಲಾಗಿದೆ. ಭಗವಾನ್ ಬುದ್ಧನ ಪಿಪ್ರಹ್ವಾ ಅವಶೇಷಗಳು 127 ವರ್ಷಗಳ ಬಳಿಕ ಭಾರತಕ್ಕೆ ಮರಳಿವೆ. ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಕ್ಕೆ 66 ಕೋಟಿಗೂ ಅಧಿಕ ಭಕ್ತರು ಆಗಮಿಸಿದ್ದರು ಎಂದು ಮುಖ್ಯಮಂತ್ರಿ ವಿವರಿಸಿದರು.
ಕಾಶಿ ತಮಿಳು ಸಂಗಮಂ, ಅಭಿಧಮ್ಮ ದಿನಾಚರಣೆ, ಬೌದ್ಧ ಯಾತ್ರಾ ವಲಯ, ಸಂತ ರವಿದಾಸರ ಜನ್ಮಸ್ಥಳ ಅಭಿವೃದ್ಧಿ ಯೋಜನೆ, ವಸ್ತುಸಂಗ್ರಹಾಲಯ ಮತ್ತು ಪ್ರತಿಮೆ ಯೋಜನೆಗಳು, ಚೌರಿ ಚೌರಾ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಲಖನೌದಲ್ಲಿನ ಅಟಲ್ ಬಿಹಾರಿ ವಾಜಪೇಯಿ ‘ರಾಷ್ಟ್ರ ಪ್ರೇರಣಾ ಸ್ಥಳ’ ಮುಂತಾದವು ಸಾಂಸ್ಕೃತಿಕ ಪುನರುಜ್ಜೀವನದ ಭಾಗವಾಗಿವೆ ಎಂದು ಅವರು ಹೇಳಿದರು.
ವಾರಾಣಸಿಯ ಸಂಗೀತ ಮತ್ತು ಲಖನೌದ ಪಾಕಕಲೆಗೆ ಅಂತರರಾಷ್ಟ್ರೀಯ ಮನ್ನಣೆ ದೊರೆತಿರುವುದನ್ನೂ ಅವರು ಪ್ರಸ್ತಾಪಿಸಿದರು. ಸಾರನಾಥಕ್ಕೆ ಸಂಬಂಧಿಸಿದ ಬೌದ್ಧ ಸ್ಥಳಗಳಿಗೆ ಜಾಗತಿಕ ಗುರುತನ್ನು ತಂದುಕೊಡುವುದು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನಗಳ ಬಗ್ಗೆಯೂ ಮಾಹಿತಿ ನೀಡಿದರು.
ಮಹಾಮನಾ ಮದನ್ ಮೋಹನ್ ಮಾಳವೀಯ ಮತ್ತು ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ಉತ್ತರ ಪ್ರದೇಶದ ಮಹಾನ್ ವ್ಯಕ್ತಿಗಳ ಕೊಡುಗೆಗೆ ರಾಷ್ಟ್ರಮಟ್ಟದಲ್ಲಿ ಸಲ್ಲಿಸಿದ ಗೌರವವಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.
----
ಹಿಂದೂಸ್ತಾನ್ ಸಮಾಚಾರ್ / Rakesh.M.B.