
ನವದೆಹಲಿ, 09 ಅಕ್ಟೋಬರ್ (ಹಿ.ಸ.):
ಪ್ರಾದೇಶಿಕ ಸೇನೆಯ ಸಂಸ್ಥಾಪನಾ ದಿನದ ಅಂಗವಾಗಿ ಸೇನೆಯ ಎಲ್ಲ ಶ್ರೇಣಿಗಳ ಸಿಬ್ಬಂದಿ, ಮಾಜಿ ಸೈನಿಕರು ಹಾಗೂ ಅವರ ಕುಟುಂಬಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಭಾಶಯ ಕೋರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ‘ನಾಗರಿಕರೂ ಹೌದು, ಸೈನಿಕರೂ ಹೌದು’ ಎಂಬ ಆಶಯವನ್ನು ಪ್ರಾದೇಶಿಕ ಸೇನೆ ಸಾಕಾರಗೊಳಿಸಿದೆ. ಸಾಮಾನ್ಯ ನಾಗರಿಕರು ಅಸಾಮಾನ್ಯ ಬದ್ಧತೆಯೊಂದಿಗೆ ರಾಷ್ಟ್ರದ ಸೇವೆಗೆ ಸಮರ್ಪಿಸಿಕೊಳ್ಳುವ ಮನೋಭಾವವನ್ನು ಈ ಸೇನೆ ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ದೇಶದ ಗಡಿಗಳ ರಕ್ಷಣೆ, ವಿಪತ್ತು ಪರಿಹಾರ ಕಾರ್ಯಗಳು ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಪ್ರಾದೇಶಿಕ ಸೇನೆಯ ನಾಗರಿಕ ಸೈನಿಕರು ಧೈರ್ಯ, ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಯ ಅತ್ಯುತ್ತಮ ಪರಂಪರೆಯನ್ನು ಎತ್ತಿಹಿಡಿದಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಸೇವೆಗೆ ಅವರು ತೋರುತ್ತಿರುವ ಅಚಲ ಬದ್ಧತೆಗೆ ಗೌರವ ಸಲ್ಲಿಸುತ್ತೇನೆ. ಸುರಕ್ಷಿತ, ಬಲಿಷ್ಠ ಮತ್ತು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಅವರು ನೀಡುತ್ತಿರುವ ಅಮೂಲ್ಯ ಕೊಡುಗೆ ಶ್ಲಾಘನೀಯ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.